ಬೆಳ್ತಂಗಡಿ : ಮೂಲಭೂತ ಸೌಕರ್ಯಗಳ ಕೊರತೆ,ಗ್ರಾ.ಪಂ. ಎದುರು ಗ್ರಾಮಸ್ಥರ ಪ್ರತಿಭಟನೆ

Update: 2016-03-21 12:07 GMT

  ಬೆಳ್ತಂಗಡಿ,ಮಾ.21: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಳೆಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಮೂಲಭೂತ ಸೌಕರ್ಯಗಳ ಕೊರತೆ 
ಇದ್ದು ಜನರನ್ನು ಕಾಡುತ್ತಿರುವ ಈ ಎಲ್ಲಾ ಸಮಸ್ಯೆಗಳನ್ನು ಎದುರಿಟ್ಟುಕೊಂಡು ಕಳೆಂಜ ಗ್ರಾ.ಪಂ. ಎದುರು ಗ್ರಾಮಸ್ಥರ ಪ್ರತಿಭಟನೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಎ.ಪಿ. ಮಾತನಾಡಿ ಗ್ರಾಮದಲ್ಲಿ ಬೇಡಿಕೆ ಇರುವಲ್ಲಿ ಶೌಚಾಲಯದ ಅನುದಾನ ನೀಡಬೇಕು, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಕಾಯಕ ಗುಂಪುಗಳನ್ನು ರಚಿಸಬೇಕು, ವೈಯುಕ್ತಿಕ ಕೆಲಸ ಮಾಡಿದವರ ಬಿಲ್ ಪಾವತಿ ಮಾಡದೇ ಇದ್ದು ಕೂಡಲೇ ಪಾವತಿಸಬೇಕು, ಕಳೆಂಜ ಗ್ರಾಮದಲ್ಲಿ ವಿದ್ಯುತ್ ಅಭಾವ ತೀವ್ರವಾಗಿದ್ದು ಕುಡಿಯುವ ನೀರು ಮತ್ತು ಕೃಷಿಕರಿಗೆ ತೀರಾ ಕಷ್ಟ ವಾಗಿದ್ದು ಮೆಸ್ಕಾಂ ನಿಂದ ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸಬೇಕು,   ಕಳೆಂಜ ಗ್ರಾ.ಪಂ. ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದರೂ ಈ ಕಛೇರಿಗೆ ಸ್ವಂತ ನಿವೇಶನ, ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲೇ ಕಾರ್ಯಚರಿಸುತ್ತಿದೆ. ಕಾಯರ್ತಡ್ಕ ಪೇಟೆ ಸಮೀಪವೇ 364 ಸರ್ವೆ ನಂಬರಿನಲ್ಲಿ 6 ಎಕ್ರೆ ಸರಕಾರಿ ಭೂಮಿಯಿದ್ದು ಗ್ರಾಮಸ್ಥರ ಬೇಡಿಕೆಯಾಗಿ ನೂತನ ಗ್ರಾ.ಪಂ. , ಗ್ರಾಮಕರಣಿಕ ಕಛೇರಿ, ಕೃಷಿ ಪತ್ತಿನ ಸಹಕಾರಿ ಸಂಘ, ಅರಣ್ಯ ರಕ್ಷಕರ ಕೊಠಡಿ ಉದ್ದೇಶಗಳ ಕಟ್ಟಡಗಳನ್ನು ಇಲ್ಲಿ ಕಟ್ಟುವಂತಾಗಲು ಸ್ಥಳದ ದಾಖಲೆಯನ್ನು ಸರಿಪಡಿಸಿಕೊಡಬೇಕು ಎಂದು ಒತ್ತಾಯಿಸಿದರು. ಅರಣ್ಯ ಭೂಮಿಯನ್ನು ಕಳೆದ 60 ವರ್ಷಗಳಿಂದ ಅನುಭವಿಸಿಕೊಂಡು ಬಂದ ವರಿಗೂ ಆಶ್ರಯ ಯೋಜನೆಯನ್ನು ವಿಸ್ತರಿಸಬೇಕು, ಕಳೆಂಜ, ಮಾಣಿಗೇರಿ ಮತ್ತು ಕುರುಮಡೇಲು ಪ್ರದೇಶಗಳ ಹಲವು ಕುಟುಂಬಗಳ ಅಕ್ರಮ ಭೂಮಿಯನ್ನು ಸಿಟ್ಟಿಂಗ್ ನಲ್ಲಿ ಮಂಜೂರು ಮಾಡಲಾಗಿದ್ದರೂ 4 ವರ್ಷಗಳಿಂದಲೂ ಹಕ್ಕು ಪತ್ರ ನೀಡದೆ ಉಳಿಸಿಕೊಂಡಿರುವುದು, ಗ್ರಾ.ಪಂ. ರಸ್ತೆಗಳನ್ನು ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಂಕ್ರಿಟೀಕರಣ ಗೊಳಿಸಲು ಕ್ರಮಕೈಗೊಳ್ಳುವುದು, ಕಾಯರ್ತಡ್ಕ, ಗಾಳಿತೋಟ ಬಂಡೇರಿ, ಕುಟ್ಯಾನ ರಸ್ತೆಯನ್ನು ಸಡಕ್ ಯೋಜನೆಯಲ್ಲಿ ಅಭಿವೃದ್ದಿ ಪಡಿಸುವುದು ಮುಂತಾದ ಬೇಡಿಕೆಗಳನ್ನು ಪ್ರತಿಟನಾಕಾರರು ಮುಂದಿಟ್ಟರು ಈ ಬೇಡಿಕೆಗಳಿಗೆ ಸೂಕ್ತ ಪರಿಹಾರ ದೊರಕದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ನಿರ್ಣಯಿಸಲಾಯಿತು. ,ಗ್ರಾಮಸ್ಥರಾದ ಬಾಲಕೃಷ್ಣ ಗೌಡ , ಶಿವಪ್ಪ ಗೌಡ ಮುಂತಾದವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಈ ಪ್ರತಿಭಟನಾ ಸಭೆ ನಡೆದ ನಂತರ ಪ್ರತಿಭಟನಾ ಕಾರರು ಕಳೆಂಜ ಗ್ರಾ,ಪಂ ಅಧ್ಯಕ್ಷೆ ಶಾರದಾ ಮತ್ತು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಪ್ರೇಮ್ ಸಿಂಗ್ ಇವರಿಗೆ ಮನವಿಯನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News