ಬಡಗುಪೇಟೆ ದೇವಳದ ವಿವಾದಿತ ಜಾಗ ಮೂಲಹಕ್ಕುದಾರರ ಸ್ವಾಧೀನಕ್ಕೆ

Update: 2016-03-21 18:28 GMT

ಹೈಕೋರ್ಟ್ ಆದೇಶದಂತೆ ಕ್ರಮ: ಗೊಂದಲದ ವಾತಾವರಣ

ಉಡುಪಿ, ಮಾ.21: 23 ವರ್ಷಗಳಿಂದ ವಿವಾದಕ್ಕೆ ಕಾರಣ ವಾಗಿದ್ದ ನಗರದ ಬಡಗುಪೇಟೆಯಲ್ಲಿರುವ ಶ್ರೀ ವಾಸುಕೀ ಅನಂತ ಪದ್ಮನಾಭ ದೇವಳದ ಐದು ಸೆಂಟ್ಸ್ ಜಾಗವನ್ನು ಹೈಕೋರ್ಟ್ ಆದೇಶದಂತೆ ಸಹಕಾರಿ ಇಲಾಖಾಧಿಕಾರಿಗಳು ಸರ್ವೇ ನಡೆಸಿ ಮೂಲ ಹಕ್ಕುದಾರರ ಸ್ವಾಧೀನಕ್ಕೆ ಇಂದು ಒಪ್ಪಿಸಿದರು.

ಕುಂದಾಪುರ ಉಪವಿಭಾಗದ ಸಹಕಾರಿ ಸಂಘಗಳ ಸಹಾ ಯಕ ನಿಬಂಧಕಿ ಚಂದ್ರ ಪ್ರತಿಮಾ ನೇತೃತ್ವದಲ್ಲಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಜಾಗದ ಸರ್ವೇ ನಡೆಸಿ ಗಡಿ ಗುರುತು ಹಾಕಿದರು. ಆದರೆ ಹೈಕೋರ್ಟ್ ಆದೇಶದ ಗೊಂದಲ ದಿಂದಾಗಿ ಈ ಐದು ಸೆಂಟ್ಸ್ ಜಾಗದಲ್ಲಿರುವ ದೇವಳಕ್ಕೆ ಸೇರಿದ ಗೋಪುರ, ವರಾಂಡ ಕಟ್ಟಡ ಹಾಗೂ ಎರಡು ಅಂಗಡಿಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿಲ್ಲ.

ಪ್ರಕರಣದ ಹಿನ್ನೆಲೆ:

ಶಿವಳ್ಳಿ ಗ್ರಾಮದ ಬಡಗುಪೇಟೆಯ ಸರ್ವೇ ನಂಬರ್ 119/08ರಲ್ಲಿರುವ ಐದು ಸೆಂಟ್ಸ್ ಜಾಗವನ್ನು ವಾರಿಜಾಕ್ಷಿ ಭಟ್ 1991ರ ಫೆ.26ರಂದು ಉಡುಪಿಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟು ಒಂದು ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಸರಿಯಾಗಿ ಸಾಲ ಪಾವತಿಯಾಗದ ಹಿನ್ನೆಲೆಯಲ್ಲಿ ಸೊಸೈಟಿಯವರು 1992ರಲ್ಲಿ ಈ ಜಾಗವನ್ನು ಏಲಂನಲ್ಲಿಟ್ಟರು. ಏಲಂ ಮೂಲಕ ಈ ಜಾಗವನ್ನು ನೆರೆಮನೆಯ ವಾಸುಕೀ ದೇವಳದ ಶ್ರೀಕಾಂತ್ ಸಾಮಗ 3.95 ಲಕ್ಷ ರೂ. ನೀಡಿ ಖರೀದಿಸಿದ್ದರು.

ಆದರೆ ನಂತರ ಜಾಗದ ಏಲಂ ವಿರೋಧಿಸಿ, ಜಾಗವನ್ನು ಮರಳಿಕೊಡಿಸುವಂತೆ ಕೋರಿ ವಾರಿಜಾಕ್ಷಿ ಭಟ್ ಪರ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಯಿತು. ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಮಧ್ಯೆಯೇ 2001ರಲ್ಲಿ ದೇವಳದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಿ ಆ ಐದು ಸೆಂಟ್ಸ್ ಜಾಗದಲ್ಲಿ ಗೋಪುರ, ವರಾಂಡ, ಸರೋವರ, ಸಂಕೀರ್ಣವನ್ನು ನಿರ್ಮಿಸಲಾಗಿತ್ತು. 2008ರ ಡಿ.2ರಂದು ಹೈಕೋರ್ಟ್ ಈ ಏಲಂನ್ನು ರದ್ದುಗೊಳಿಸಿ, ಏಲಂನಲ್ಲಿ ಪಾವತಿಸಲಾದ ಹಣ ವನ್ನು ಶ್ರೀಕಾಂತ್ ಸಾಮಗರಿಗೆ ಹಿಂದಿರುಗಿಸಿ ಜಾಗವನ್ನು ಮರಳಿ ವಾರಿಜಾಕ್ಷಿ ಭಟ್‌ಗೆ ಒಪ್ಪಿಸುವಂತೆ ಸೊಸೈಟಿಗೆ ಆದೇಶ ನೀಡಿತು. ಅದರಂತೆ ಜಾಗ ವಾರಿಜಾಕ್ಷಿ ಭಟ್‌ರ ಪುತ್ರ ರಮಣ್ ಭಟ್‌ರ ಹೆಸರಿಗೆ ನೋಂದಣಿಗೊಂಡಿತು.

ಹೈಕೋರ್ಟ್ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಯಿತು. ಅದನ್ನು ಹೈಕೋರ್ಟ್‌ನಲ್ಲಿ ತೆರವುಗೊಳಿಸಲಾಯಿತು. ಮತ್ತೆ ರಮಣ್ ಭಟ್ ಅದರ ವಿರುದ್ಧ ರಿಟ್ ಅಪೀಲ್ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಹೈಕೋರ್ಟ್ 2015ರ ಜು.9ರಂದು ಆದೇಶ ನೀಡಿ ಸಹಕಾರ ಸೊಸೈಟಿಯ ಸಹಾಯಕ ನಿಬಂಧಕರೇ ಈ ಜಾಗವನ್ನು ಸ್ವಾಧೀನ ಪಡಿಸಿ ರಮಣ್ ಭಟ್‌ರಿಗೆ ನೀಡಬೇಕೆಂದು ಆದೇಶಿಸಿತು. ಅದು ಕೂಡ ಜಾರಿಯಾಗದಾಗ ರಮಣ್ ಭಟ್ ನ್ಯಾಯಾಂಗ ನಿಂದನೆ ಕುರಿತು ರಿಟ್ ಅಪೀಲ್ ಸಲ್ಲಿಸಿದ್ದರು. ಅದರಂತೆ 2016ರ ಮಾ.9ರಂದು ಹೈಕೋರ್ಟ್ ಆ ಜಾಗವನ್ನು ರಮಣ್ ಭಟ್ ಅವರ ಸ್ವಾಧೀನಕ್ಕೆ ಒಪ್ಪಿಸುವಂತೆ ಸಹಾಯಕ ನಿಬಂಧಕರಿಗೆ ಆದೇಶ ನೀಡಿತು.

ಸ್ವಾಮೀಜಿ ಸಂಧಾನ ವಿಫಲ: ಹೈಕೋರ್ಟ್ ಆದೇಶದಂತೆ ಸರ್ವೇ ನಡೆಸಿ ಜಾಗ ಸ್ವಾಧೀನಪಡಿಸಿಕೊಳ್ಳಲು ಸಹಾಯಕ ನಿಬಂಧಕಿ ಚಂದ್ರ ಪ್ರತಿಮಾ, ಸಹಕಾರ ಅಭಿವೃದ್ಧಿ ಅರುಣ್ ಕುಮಾರ್, ಸೊಸೈಟಿಯ ಮಹಾ ಪ್ರಬಂಧಕ ರಾಮಪ್ಪ ಕುಂದರ್ ಬೆಳಗ್ಗೆ ದೇವಳಕ್ಕೆ ಆಗಮಿಸಿದಾಗ ಶ್ರೀಕಾಂತ್ ಸಾಮಗ ಹಾಗೂ ಇತರರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸ್ಥಳಕ್ಕೆ ಕರೆಸಲಾಯಿತು.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದರಲ್ಲಿ ಮಧ್ಯಪ್ರವೇ ಶಿಸಲು ಸ್ವಾಮೀಜಿ ಹಿಂದೇಟು ಹಾಕಿ ಸಂಧಾನದ ಮೂಲಕ ಬಗೆಹರಿಸುವಂತೆ ಸಲಹೆ ನೀಡಿದರು. ಅದರಂತೆ ಮಧ್ಯಾಹ್ನ ವೇಳೆ ಮಠದ ಬಡಗು ಮಾಳಿಗೆಯಲ್ಲಿ ನಡೆದ ಸಭೆಯಲ್ಲಿ ರಮಣ ಭಟ್‌ಗೆ ಈಗ ಜಾಗದ ಬದಲು ಅಲ್ಲೇ ಸಮೀಪದ ಬೇರೆ ಐದು ಸೆಂಟ್ಸ್ ಜಾಗ ನೀಡುವ ಪ್ರಸ್ತಾಪ ಇಡಲಾಯಿತು. ಇದಕ್ಕೆ ರಮಣ ಭಟ್ ಒಪ್ಪದ ಕಾರಣ ಸಂಧಾನ ವಿಫಲವಾಯಿತು.

ಮಧ್ಯಾಹ್ನದ ನಂತರ ಮತ್ತೆ ಜಾಗದ ಸ್ವಾಧೀನ ಪ್ರಕ್ರಿಯೆ ನಡೆಯಿತು. ಜಾಗವನ್ನು ಗುರುತುಪಡಿಸಿದ ಅಧಿಕಾರಿಗಳು ಆದೇಶದಂತೆ ನಡೆದುಕೊಂಡಿದ್ದೇವೆ ಎಂದು ಹೇಳಿ ತಮ್ಮ ಕಾರ್ಯ ಮುಗಿಸಿದರು. ಆದರೆ ರಮಣ್ ಭಟ್ ಹೇಳುವಂತೆ ಆದೇಶದಲ್ಲಿ ಕಟ್ಟಡವನ್ನು ತೆರವುಗೊಳಿಸಿ ಕೊಡುವಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಅಧಿಕಾರಿಗಳು ಹೈಕೋರ್ಟ್ ಆದೇಶವನ್ನು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಾಕಲಾಗುವುದು ಎಂದರು.

ಈ ಮಧ್ಯೆ ಶ್ರೀಕಾಂತ್ ಸಾಮಗ ಮಾತನಾಡಿ, ಹೈಕೋರ್ಟ್ ಆದೇಶವನ್ನು ನಾವು ಪಾಲಿಸುತ್ತೇವೆ. ಆದರೆ 24 ವರ್ಷ ಹೈಕೋರ್ಟ್‌ನಲ್ಲಿ ನಡೆಸಿದ ಹೋರಾಟದ ಹಣ, ಅದರ ಬಡ್ಡಿ, ದೇವಳದ ಕಟ್ಟಡದ ವೌಲ್ಯವನ್ನು ಪಾವತಿಸದೆ ನಾವು ಯಾವುದೇ ಕಾರಣಕ್ಕೂ ಜಾಗ ಬಿಟ್ಟುಕೊಡಲ್ಲ. ಬ್ಯಾಂಕ್‌ನ ನಿರ್ಲಕ್ಷದಿಂದ ನಮಗೆ ಈ ಸ್ಥಿತಿ ಬಂದಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News