ವಿಧವಾ ಸೌಲಭ್ಯಗಳಿಗಾಗಿ ಬ್ರೋಕರ್‌ಗಳನ್ನು ಬಳಸದಿರಿ

Update: 2016-03-22 08:58 GMT

ಮಂಗಳೂರು, ಮಾ. 22: ಪತಿಯನ್ನು ಕಳೆದುಕೊಂಡು ಜೀವನದಲ್ಲಿ ಸಂಕಷ್ಟಕ್ಕೀಡಾಗುವ ವಿಧವೆಯರಿಗೆ ನೆರವು ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿವಿಧ ಯೋಜನೆಗಳು ಲಭ್ಯವಿದ್ದು, ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಯಾವುದೇ ಬ್ರೋಕರ್‌ಗಳನ್ನು ಬಳಸುವ ಅಗತ್ಯವಿಲ್ಲ. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಫಲಾನುಭವಿಗಳೇ ನೇರವಾಗಿ ಅಥವಾ ಕುಟುಂಬಿಕರು, ಸ್ನೇಹಿತರ ನೆರವಿನೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು. 


ಈ ಸಾಂತ್ವಾನ ಹಾಗೂ ಧೈರ್ಯ ತುಂಬುವ ಮಾತುಗಳು ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿಂದು ವ್ಯಕ್ತವಾಯಿತು.
ನಗರದ ಕೆಲ ಸಮಾಜ ಸೇವಕರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಅನೌಪಚಾರಿಕ ಸಂವಾದ ಕಾರ್ಯಕ್ರಮದಲ್ಲಿ ಸುರತ್ಕಲ್ ನಾಡ ಕಚೇರಿಯ ಗ್ರಾಮ ಲೆಕ್ಕಿಗರಾದ ಆಶ್ರಿತಾರವರು, ಪತಿಯನ್ನು ಕಳೆದುಕೊಂಡ ವಿಧವೆಯವರಿಗೆ ಲಭ್ಯವಿರುವ ಸರಕಾರಿ ಸೌಲಭ್ಯಗಳ ಮಾಹಿತಿ, ಮಾರ್ಗದರ್ಶನ ಹಾಗೂ ಸಾಂತ್ವಾನದ ನುಡಿಗಳ ಮೂಲಕ ಧೈರ್ಯ ತುಂಬುವ ಕಾರ್ಯ ಮಾಡಿದರು.


ತಲಾ 500 ರೂ.ಗಳ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾ ಗಾಂಧಿರಾಷ್ಟ್ರೀಯ ವೃದ್ದಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ಮನಸ್ವಿನಿ ಯೋಜನೆ, 20000 ರೂ.ಗಳ ರಾಷ್ಟ್ರೀಯ ಕುಟುಂಬಸಹಾಯಧನ ವೇತನ, ಅಂತ್ಯ ಸಂಸ್ಕಾರ ಸಹಾಯಧನ ಯೋಜನೆಗಳು ವಿಧವೆಯವರಿಗೆ ಲಭ್ಯವಾಗುತ್ತಿದ್ದು, ಸಂಬಂಧಪಟ್ಟ ನಾಡ ಕಚೇರಿ, ತಾಲೂಕು ಕಚೇರಿ, ಗ್ರಾಮ ಪಂಚಾಯತ್‌ಗಳಲ್ಲಿ ಈ ಬಗ್ಗೆ ಫಲಾನುಭವಿಗಳು ಮಾಹಿತಿ ಪಡೆದು ಅರ್ಜಿ ಸಲ್ಲಿಸಿ ಯೋಜನೆಗಳನ್ನು ಪಡೆಯುವ ಮೂಲಕ ಕೊಂಚ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ.


ಪತಿಯ ಅಕಾಲಿಕ ಮರಣದ ನಂತರ ಬದುಕೇ ಇಲ್ಲವೆಂಬ ಪರಿಸ್ಥಿತಿಗೆ ಮುಂದಾಗದೆ, ತಾನು ಪಡೆದಿರುವ ಶಿಕ್ಷಣ, ತನಗೆ ತಿಳಿದಿರುವ ವೃತ್ತಿಯಲ್ಲಿ ತನ್ನ ಹಾಗೂ ತನ್ನ ಕುಟುಂಬವನ್ನು ಸಾಕುವ ಜವಾಬ್ಧಾರಿಯೂ ವಿಧವಾ ಹೆಣ್ಣು ಮಕ್ಕಳ ಮೇಲಿರುತ್ತದೆ. ಅದಕ್ಕಾಗಿ ಸರಕಾರದ ವಿವಿಧ ಸೌಲಭ್ಯಗಳು ಕೂಡಾ ನೆರವು ನೀಡಲಿದೆ ಎಂದು ಆಶ್ರಿತಾ ಸಲಹೆ ನೀಡಿದರು.


20 ಸಾವಿರ ಸಹಾಯಧನ ಮಂಜೂರಾಗಿದೆ, ಕೈಗೆ ಸಿಕ್ಕಿಲ್ಲ!


ಸಭೆಯಲ್ಲಿ ಸೂಟರ್‌ಪೇಟೆಯ ಮಹಿಳೆಯೊಬ್ಬರು ತನ್ನ ಅಳಲನ್ನು ತೋಡಿಕೊಳ್ಳುತ್ತಾ, ನನ್ನ ಪತಿ ಮರಣ ಹೊಂದಿದ್ದರಿಂದ, ಅವರೇ ಕುಟುಂಬದ ಆಧಾರ ಸ್ತಂಭವಾಗಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿ ಅರ್ಜಿ ಸಲ್ಲಿಸಿ 20,000 ರೂ. ಮಂಜೂರಾಗಿದೆ. ಆದರೆ ಆ ಹಣವನ್ನು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ನೀಡುತ್ತಿಲ್ಲ ಎಂದರು.


ಈ ಸಂದರ್ಭ ಪ್ರತಿಕ್ರಿಯಿಸಿದ ಆಶ್ರಿತಾ ಈ ಬಗ್ಗೆ ತಹಶೀಲ್ದಾರ್‌ರವರ ಗಮನಕ್ಕೆ ತನ್ನಿ, ಇಲ್ಲವಾದಲ್ಲಿ ಆರ್‌ಟಿಐಯಡಿ ಅರ್ಜಿ ನೀಡಿ ಮಂಜೂರಾದ ಸಹಾಯಧನ ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿ ಎಂದು ಧೈರ್ಯ ತುಂಬಿದರು.


ಅರ್ಜಿ ನೀಡಿ 2 ವರ್ಷ ಕಳೆದರೂ ಪಿಂಚಣಿ ದೊರಕಿಲ್ಲ!


ನನ್ನ ಪತಿ ಮರಣದ ಬಳಿಕ ವಿಧವಾ ವೇತನಕ್ಕಾಗಿ ಅರ್ಜಿ ಸಲ್ಲಿಸಿ 2 ವರ್ಷ ನಾಲ್ಕು ತಿಂಗಳು ಕಳೆದಿದೆ. ಆದರೆ ಇನ್ನೂ ವೇತನವೇ ಮಂಜೂರಾತಿ ಆಗಿಲ್ಲ ಎಂದು ಮಹಿಳೆಯೊಬ್ಬರು ಬೇಸರಿಸಿದರು.
ಬಹುತೇಕವಾಗಿ ವಿಧವೆಯರು ನಿರ್ಗತಿಕರಾಗಿರುತ್ತಾರೆ. ಅವರಿಗೆ ಹೇಗೆ? ಎಲ್ಲಿ? ಯಾರಿಗೆ? ಅರ್ಜಿ ನೀಡಬೇಕೆಂದೇ ತಿಳಿದಿರುವುದಿಲ್ಲ. ಇದರ ನಡುವೆ ಅರ್ಜಿ ಸಲ್ಲಿಸುವಾಗ ಹಲವಾರು ರೀತಿಯ ದಾಖಲೆಗಾಗಿ ಅವರನ್ನು ಅಲೆದಾಡಿಸಲಾಗುತ್ತದೆ. ಇದರಿಂದ ಬಹುತೇಕರು ಹಿಂದೆ ಸರಿಯುತ್ತಾರೆ ಎಂದು ಸಮಾಜ ಸೇವಕಿ ಹರಿಣಾಕ್ಷಿ ಅಸಮಾಧಾನ ವ್ಯಕ್ತಪಡಿಸಿದರು.


ಸಭೆಯಲ್ಲಿ ಪ್ರತಿ ತಿಂಗಳು ಇಂತಹ ಸಭೆಯ ಮೂಲಕ ಒಟ್ಟು ಸೇರಿ, ಅಸಹಾಯಕ ವಿಧವೆಯರಿಗೆ ಮಾಹಿತಿ ಒದಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಅವರು ಗುರುತಿಸಿಕೊಳ್ಳುವಂತೆ ಪ್ರೇರಣೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News