ಶಿಕ್ಷಣವೆಂದರೆ ಕೇವಲ ಉನ್ನತ ಶಿಕ್ಷಣವಲ್ಲ - ಶಿಕ್ಷಣ ಸಚಿವೆ ಸ್ಮತಿ ಇರಾನಿ

Update: 2016-03-22 14:36 GMT

ಬೆಂಗಳೂರು.ಮಾ.22:ಶಿಕ್ಷಣವೆಂದರೆ ಕೇವಲ ಉನ್ನತ ಶಿಕ್ಷಣವಲ್ಲ; ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಉನ್ನತ ಶಿಕ್ಷಣದವರೆ ಎಲ್ಲಾ ಮಟ್ಟದಲ್ಲೂ ಸಮಗ್ರ ಸುಧಾರಣೆ ತರುವ ಅಗತ್ಯವಿದೆ. ಆ ಮೂಲಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ.
ಭಾರತೀಯ ಶಿಕ್ಷಣ ಉತ್ತೇಜನ ಸೊಸೈಟಿ ಹಮ್ಮಿಕೊಂಡಿದ್ದ ಭಾರತೀಯ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ದಶಕದ ನಂತರ ನಮ್ಮ ದೇಶದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಕಾಲ ಬಂದಿದೆ. ಹೊಸ ಶಿಕ್ಷಣ ನೀತಿಯನ್ನು ದೆಹಲಿಯಲ್ಲಿ ಕುಳಿತು ಕೆಲವೇ ಕೆಲವು ತಜ್ಞರ ಸಮ್ಮುಖದಲ್ಲಿ ನಿರ್ಧರಿಸುವುದಲ್ಲ. ಈ ಪ್ರಕ್ರಿಯೆಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು, ನಗರ ಸ್ಥಳೀಯ ಸಂಸ್ಥೆಗಳು, ಶಾಲಾ ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸಿ ಹೊಸ ಶಿಕ್ಷಣ ನೀತಿ ರೂಪಿಸಲಾಗುವುದು. ಈ ಶಿಕ್ಷಣ ನೀತಿ ದೇಶದ ಶೈಕ್ಷಣಿಕ ಪ್ರಗತಿಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ದೇಶದ ಮೂಲೆಮೂಲೆಗಳ ತಜ್ಞರಿಂದ ವ್ಯಕ್ತವಾಗುವ ಸಲಹೆ ಸೂಚನೆಗಳನ್ನು ಕ್ರೋಢೀಕರಿಸಿ ಕಾಲಮಿತಿಯಲ್ಲಿ ಹೇಗೆ ಶಿಕ್ಷಣ ನೀತಿಯನ್ನು ರೂಪಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು. ಅದನ್ನು ಉನ್ನತ ಸಮಿತಿಗೆ ವಹಿಸಿ ಅದು ಸದ್ಯದಲ್ಲಿಯೇ ಆಖೈರುಗೊಳಿಸಿ ಹೊಸ ನೀತಿಯನ್ನು ಜಾರಿಗೆ ತರಲಾಗುವುದು. ಭಾರತವನ್ನು ಉನ್ನತ ಶಿಕ್ಷಣದ ಜಾಗತಿಕ ತಾಣವಾಗಿ ರೂಪಿಸಲಾಗುವುದು ಎಂದು ಸಚಿವೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News