ಸಾವಿರ ಬೀಡಿಗೆ 300 ರೂ. ಕನಿಷ್ಠ ವೇತನ ನಿಗದಿಪಡಿಸಲು ಆಗ್ರಹ

Update: 2016-03-22 18:30 GMT

 ಉಡುಪಿ, ಮಾ.22: ಬೀಡಿಕಾರ್ಮಿಕರ ಬವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಕನಿಷ್ಠ ವೇತನವನ್ನು ಸಾವಿರ ಬೀಡಿಗೆ 300ರೂ. ನಿಗದಿಪಡಿಸಬೇಕು ಮತ್ತು ಮಾಸಿಕ ಪಿಂಚಣಿಯನ್ನು 3,000ರೂ.ಗೆ ಏರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಹಿರಿಯಡ್ಕ ದೇವಾಡಿಗರ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್‌ನ 71ನೆ ವಾರ್ಷಿಕ ಮಹಾಸಭೆಯಲ್ಲಿ ಕೈಗೊಳ್ಳಲಾಯಿತು.
ಬೀಡಿ ಕೈಗಾರಿಕೆಯ ಬೆಳವಣಿಗೆಗೆ ಮಾರಕವಾಗಿರುವ ತಂಬಾಕು ನಿಷೇಧ, ಉತ್ಪಾದನೆ, ಮಾರಾಟ, ಜಾಹೀರಾತುಗಳಿಗೆ ಸಂಬಂಧಪಟ್ಟ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ ಕೊಟ್ಪಾ ಕಾಯ್ದೆಯನ್ನು ರದ್ದುಗೊಳಿಸಲು ಆಗ್ರಹಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶಾಂತ ನಾಯಕ್ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಕಾರ್ಯದರ್ಶಿ ಪಿ.ಸಂಜೀವ ಹಾಗೂ ಬೇಬಿ ದಂಪತಿಯನ್ನು ಸನ್ಮಾನಿಸಲಾಯಿತು. ಮುಂದಿನ ಒಂದು ವರ್ಷದ ಅವಧಿಗೆ 54 ಜನರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶಾಂತಾ ನಾಯಕ್, ಉಪಾಧ್ಯಕ್ಷರುಗಳಾಗಿ ಆನಂದ ಪೂಜಾರಿ, ರಾಮ ಮೂಲ್ಯ ಶಿರ್ವ, ಸುಮತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಗಿರೀಶ್, ಸಹಕಾರ್ಯದರ್ಶಿಗಳಾಗಿ ಸಂಜೀವ ಶೇರಿಗಾರ್, ಶಾರದಾ ಉದ್ಯಾವರ, ವಾರಿಜಾ ನಾಯಕ್, ಕೋಶಾಧಿಕಾರಿಯಾಗಿ ಕೆ.ವಿ.ಭಟ್‌ರನ್ನು ಆಯ್ಕೆ ಮಾಡಲಾಯಿತು.
 ಮುಖ್ಯ ಅತಿಥಿಗಳಾಗಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ರಾವ್, ಜಿಲ್ಲಾ ಮುಖಂಡರಾದ ಬಿ.ನಾರಾಯಣ, ಶೇಖರ್ ಬಂಟ್ವಾಳ್, ಸರಸ್ವತಿ, ಶಿವಪ್ಪ ಕೋಟ್ಯಾನ್, ಸಂಜೀವ ಶೇರಿಗಾರ್, ಆನಂದ ಪೂಜಾರಿ, ರಾಜು ಪೂಜಾರಿ, ಸುಮತಿ ಶೆಟ್ಟಿ, ವಾರಿಜಾ ನಾಯಕ್, ಶಾರದಾ ಉದ್ಯಾವರ, ಗಣಪತಿ ಪ್ರಭು ಉಪಸ್ಥಿತರಿದ್ದರು.
ಶಶಿಕಲಾ ಗಿರೀಶ್ ವರದಿ ವಾಚಿಸಿದರು. ಕೆ.ವಿ.ಭಟ್ ಲೆಕ್ಕಪತ್ರ ಮಂಡಿಸಿ ಸ್ವಾಗತಿಸಿ, ವಂದಿಸಿದರು. ಸುರೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News