ಮಾ.25ರಿಂದ ಗ್ರಾಪಂಗಳಲ್ಲಿ ಕುಮ್ಕಿ ಹಕ್ಕುದಾರರ ಸಭೆ: ಬಿಜೆಪಿ

Update: 2016-03-22 18:31 GMT

ಮಂಗಳೂರು, ಮಾ.22: ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಎಲ್ಲ 230 ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಮ್ಕಿದಾರರ ಸಭೆಯನ್ನು ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.25ರಿಂದ ಎ.5ರವರೆಗೆ ಗ್ರಾಪಂ ವ್ಯಾಪ್ತಿಗಳಲ್ಲಿ ಕುಮ್ಕಿದಾರರ ಸಭೆ ಜರಗಲಿದೆ. ಸಭೆಗಳಲ್ಲಿ ನಿಗದಿತ ಅರ್ಜಿ ನಮೂನೆಗಳನ್ನು ವಿತರಿಸಿ ಕುಮ್ಕಿದಾರರ ವಿವರ ಮತ್ತು ಅವರು ಹೊಂದಿರುವ ಜಮೀನಿನ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಮರಳಿನ ಸಮಸ್ಯೆಯಿದ್ದು, ಈಗಾಗಲೇ ಅಲ್ಲಲ್ಲಿ ಜನತೆ ಹೋರಾಟಕ್ಕೆ ಇಳಿದಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದರೆ ರಾಜ್ಯ ಸರಕಾರ ಗಮನ ಹರಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಗ್ರಾಪಂ ಮಟ್ಟದಲ್ಲಿ ಜರಗುವ ಸಭೆಗಳಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಜನತೆಗೆ ತಿಳಿಸುವುದಲ್ಲದೆ ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ಆಗಬಹುದಾದ ತೊಂದರೆಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಪ್ರತಾಪಸಿಂಹ ನಾಯಕ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಜಿಲ್ಲಾ ಬಿಜಿಪಿ ಪ್ರಧಾನ ಕಾರ್ಯದರ್ಶಿಗಳಾದ ಸಂಜೀವ ಮಠಂದೂರು, ಕಿಶೋರ್ ರೈ, ಕೋಶಾಧಿಕಾರಿ ಸಂಜಯ ಪ್ರಭು ಮತ್ತು ಮಾಧ್ಯಮ ಪ್ರಮುಖ್ ದಿವಾಕರ ಸಾಮಾನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News