ದ.ಕ. ಸಹಕಾರಿ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತಿರುವ ದ.ಕ.ಕೃಷಿಕರ ಸಹಕಾರಿ ಮಾರಾಟ ಸಂಘ:ಎನ್.ಎಸ್.ಗೋಖಲೆ

Update: 2016-03-23 12:13 GMT

ಬೆಳ್ತಂಗಡಿ: ದ.ಕ.ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತಿರುವ ದ.ಕ.ಕೃಷಿಕರ ಸಹಕಾರಿ ಮಾರಾಟ ಸಂಘ(SKACM) ಇದರ ಪುನಶ್ಚೇತನಕ್ಕಾಗಿ ಪಾಲು ನೀಡಿದ ಸಹಕಾರಿ ಸಂಸ್ಥೆಗಳು, ಠೇವಣಿ ಇರಿಸಿರುವ ರೈತ ಸದಸ್ಯರು ಮಾ. 26 ರಂದು ಪುತ್ತೂರಿನ ಸಂಘದ ವಠಾರದಲ್ಲಿ ಸೇರಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಮೂಲಕ ಸರಕಾರವನ್ನೂ, ಇತರರನ್ನೂ ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಎಸ್.ಗೋಖಲೆ ತಿಳಿಸಿದರು.

       ಅವರು ಬುಧವಾರ ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ದ.ಕ.ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಮುಂಚೂಣಿಯಲ್ಲಿರುವ ಜಿಲ್ಲೆ. 1919 ರಲ್ಲಿ ಸಹಕಾರಿ ಪಿತಾಮಹ ದಿ. ಮೊಳಹಳ್ಳಿ ಶಿವರಾಯರಿಂದ ಸ್ಥಾಪಿಸಲ್ಪಟ್ಟಿರುವ ಎಸ್‌ಕೆಎಸಿಎಮ್ ಜನಪ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ 1380ಕ್ಕೂ ಮಿಕ್ಕಿ ಸದಸ್ಯರಿದ್ದು ರೂ. 77 ಲಕ್ಷದಷ್ಟು ಪಾಲುಬಂಡವಾಳ, ರೂ. 13 ಕೋಟಿಗೂ ಮಿಕ್ಕಿ ಠೇವಣಿ ಹೊಂದಿರುವ ಸಂಸ್ಥೆ ಇದಾಗಿದ್ದು ಕ್ಯಾಂಪ್ಕೋದ ಹುಟ್ಟಿಗೂ ಕಾರಣವಾಗಿದೆ. ಇಂದು ಕ್ಯಾಂಪ್ಕೋ ಅಧ್ಯಕ್ಷರಾಗಿರುವ ಎಸ್. ಆರ್. ಸತೀಶ್ಚಂದ್ರರವರು 2003 ರಿಂದ 2006 ರವರೆಗೆ ಈ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅಂದು ಅವರು ಸಂಸ್ಥೆಯ ಪುನಶ್ಚೇತನಕ್ಕೆ ಕರೆ ನೀಡಿದ್ದ ಸಂದರ್ಭ ಜಿಲ್ಲೆಯ ಪ್ರಾಥಮಿಕ ಸಂಘಗಳು ಸಾಥ್ ನೀಡಿದ್ದವು ಎಂದರು.

SKACM ಅಡಿಕೆ ಸೊಸೈಟಿ ಎಂದೇ ಪ್ರಸಿದ್ದವಾಗಿದ್ದ ಈ ಸಂಸ್ಥೆಯನ್ನು ಉಳಿಸುವ ಅನಿವಾರ್ಯತೆ ಇದೆ. ಮುಂಡಾಜೆ ಸಹಕಾರಿ ಬ್ಯಾಂಕಿನ ರೂ. ಒಂದು ಲಕ್ಷ ಪಾಲು ಅದರಲ್ಲಿದೆ. ನಮ್ಮಂತೆ 51 ಕ್ಕೂ ಮಿಕ್ಕಿ ಸಹಕಾರಿ ಸಂಘಗಳು ಪಾಲು ಹಣ ನೀಡಿವೆ. ಇದೀಗ ಕ್ಯಂಪ್ಕೋ ಸೇರಿ ಎಲ್ಲರೂ ಮನಸ್ಸು ಮಾಡಿದರೆ, ಸರಕಾರವೂ ಕೈ ಜೋಡಿಸಿದರೆ ನ್ನು ಉಳಿಸಬಹುದು. ಸಂಘಕ್ಕೆ ಕೋಟಿಗಟ್ಟಲೆ ಮೌಲ್ಯದ ಆಸ್ತಿಗಳು ಇದ್ದರೂ ಮಂಗಳೂರಿನ ಆಸ್ತಿಯನ್ನು ಕೈ ಬಿಟ್ಟಾದರು ಮೊಳಹಳ್ಳಿಯವರು ಸ್ಥಾಪಿಸಿದ ಈ ಸಂಸ್ಥೆಯನ್ನು ಹಿಂದಿನಂತೆ ಪುತ್ತೂರಿನಿಂದಲೇ ಆರಂಭಿಸಿ ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಅಂಟಿದ ಕಳಂಕವನ್ನು ತೊಳೆದುಕೊಳ್ಳಬಹುದು. ಆದ್ದರಿಂದ ಎಲ್ಲರೂ ಸಹಕರಿಸಿ, ಪಾಲು ಹಣ ನೀಡಿದ ಸಹಕಾರಿ ಸಂಸ್ಥೆಗಳು ಠೇವಣಿ ಇರಿಸಿರುವ ರೈತ ಸದಸ್ಯರು ಮಾ. 26 ರಂದು ಸಭೇ ಸೇರಬೇಕೆಂದು ಗೋಖಲೆ ವಿನಂತಿಸಿದರು.

ಗೋಷ್ಠಿಯಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ವಿ.ಟಿ.ಸೆಬಾಸ್ಟಿಯನ್, ನಿರ್ದೇಶಕರಾದ ಜ್ಯೋತಿ ಫಡ್ಕೆ, ಮಿನಿಬೇಬಿ, ಮೋಹನಚಂದ್ರ ಗೋಖಲೆ, ಅಶೋಕ್ ಕುಮಾರ್, ಲಿಂಗಪ್ಪ ಗೌಡ, ಕಾರ್ಯನಿರ್ವಹಣಾಧಿಕಾರಿ ನಾರಾಯನ ಫಡ್ಕೆ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News