ಎತ್ತಿನಹೊಳೆ ಕುರಿತ ಡಿವಿ ಹೇಳಿಕೆ ಖೇದಕರ: ಪೂಜಾರಿ

Update: 2016-03-23 19:00 GMT

ಮಂಗಳೂರು, ಮಾ.23: ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟ ಅಥವಾ ಕರಾವಳಿಗೆ ಯಾವುದೇ ಹಾನಿ ಇಲ್ಲ ಎಂಬ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರ ಹೇಳಿಕೆ ಖೇದಕರ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ಟೀಕಿಸಿದ್ದಾರೆ.
 
ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಕಾನೂನು ಸಚಿವರು ನೀಡುತ್ತಿರುವ ಇಂತಹ ಹೇಳಿಕೆಗಳು ಅವರಿಗೆ ಮಾಹಿತಿಯ ಕೊರತೆ ಇದೆಯೆಂಬುದನ್ನು ಸೂಚಿಸುತ್ತದೆ. ಅರಣ್ಯ ಮತ್ತು ಪರಿಸರ ಇಲಾಖೆ 2010ರಲ್ಲಿ ನಡೆಸಿರುವ ಅಧ್ಯಯನ ವರದಿಯಲ್ಲಿ ಭಾರತದ ಹಿಮಾಲಯ ಪ್ರದೇಶ, ಕರಾವಳಿ ಈಶಾನ್ಯ ರಾಜ್ಯಗಳಲ್ಲಿ ಮಳೆಯ ಪ್ರಮಾಣದ ಏರಿಳಿತ, ಹವಾಮಾನ ಬದಲಾವಣೆಗೆ ಕಾರಣವಾಗುವ ಅಂಶಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರಲ್ಲಿ ಎತ್ತಿನಹೊಳೆಯ ರೀತಿಯ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಗಿದೆ. ಈ ವರದಿಯ ಬಗ್ಗೆ ಕೇಂದ್ರದ ಕಾನೂನು ಸಚಿವರಿಗೆ ತಿಳಿದಿಲ್ಲ ಎನ್ನುವುದು ಆಶ್ಚರ್ಯವನ್ನುಂಟು ಮಾಡುತ್ತದೆ. ಮಾಜಿ ಮುಖ್ಯಮಂತ್ರಿ ಕೂಡಾ ಈ ವರದಿ ಓದಿಲ್ಲವೇ ಎಂದು ಪ್ರಶ್ನಿಸಿದ ಅವರು, ತಜ್ಞರ ಅಧ್ಯಯನ ವರದಿಯ ಬಳಿಕವೂ ಸರಕಾರ ಈ ಯೋಜನೆಯನ್ನು ಮುಂದುವರಿಸಲು ಹೊರಟಿರುವುದು ಸರಿಯಲ್ಲ. ಬಯಲು ಸೀಮೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಸರಕಾರ ಪರ್ಯಾಯ ಯೋಜನೆಯನ್ನು ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಭ್ರಷ್ಟಾಚಾರ ನಿಗ್ರಹ ದಳ ರಚನೆಯ ತೀರ್ಮಾನ ಹಿಂಪಡೆಯಲಿ
ಭ್ರಷ್ಟಾಚಾರ ನಿಗ್ರಹ ದಳ ರಚನೆಗೆ ಮುಂದಾಗಿರುವ ಸರಕಾರ ಈ ತೀರ್ಮಾನವನ್ನು ತಕ್ಷಣ ಹಿಂಪಡೆಯಬೇಕು. ಈ ವಿಚಾರದಲ್ಲಿ ಸರಕಾರದ ಹಠಮಾರಿ ಧೋರಣೆ ಬೇಡ ಎಂದ ಅವರು, ಕೇಂದ್ರ ಸರಕಾರ ಮೊದಲು ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಲಿ ಹಾಗೂ ಸಿಬಿಐಗೆ ಸ್ವಾಯತ್ತತೆ ನೀಡಲಿ. ಈ ಕೆಲಸವನ್ನು ಮಾಡದೆ ರಾಜ್ಯ ಸರಕಾರವನ್ನು ಟೀಕೆ ಮಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಅವರು ಹೇಳಿದರು.
ಪುತ್ತೂರು ಜಾತ್ರೆಯ ಆಮಂತ್ರಣ ಪತ್ರ ಗೊಂದಲದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಭಾರತದ ಸಂವಿಧಾನದಲ್ಲಿ ಜಾತಿ-ಧರ್ಮದ ವಿಚಾರದಲ್ಲಿ ತಾರತಮ್ಯ ಮಾಡಲು ಅವಕಾಶವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಉಮೇಶ್ಚಂದ್ರ, ಟಿ.ಕೆ.ಸುದೀರ್, ಅರುಣ್ ಕುವೆಲ್ಲೊ, ಈಶ್ವರ ಉಳ್ಳಾಲ್, ಬಿ.ಕೆ.ಇದಿನಬ್ಬ, ಎ.ಸಿ.ವಿನಯರಾಜ್, ಕರುಣಾಕರ ಶೆಟ್ಟಿ, ರಮಾನಂದ ಪೂಜಾರಿ, ನೀರಜ್‌ಪಾಲ್, ಮನೀಶ್ ಬೊಳಾರ್, ಹಕೀಂ ಕೂಳೂರು, ಸಲೀಂ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News