ಜಿಪಂ, ತಾಪಂಗೆ ಶೀಘ್ರವೇ ಮೀಸಲಾತಿ ಪ್ರಕಟಿಸಿ: ಶೋಭಾ

Update: 2016-03-23 19:08 GMT

 ಮಣಿಪಾಲ, ಮಾ.23: ಬಹುಮತ ಇಲ್ಲದಿದ್ದರೂ, ಹಿಂಬಾಗಿಲಿನ ಮೂಲಕ ಅಧಿಕಾರ ನಡೆಸಲು ಪ್ರಯತ್ನಿಸಿದ ಕಾಂಗ್ರೆಸ್‌ಗೆ ಕುಂದಾಪುರ ಪುರಸಭೆಯಲ್ಲಿ ಬಿಜೆಪಿ ತಕ್ಕ ಪಾಠವನ್ನು ಕಲಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
 ಮಣಿಪಾಲದ ಜಿಪಂ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ, ಮೀಸಲು ತಂದು ಅಧಿಕಾರ ಪಡೆಯಲು ಪ್ರಯತ್ನಿಸಿದ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ನಾವು ತಿರುಗೇಟು ನೀಡಿದ್ದೇವೆ ಎಂದು ಶೋಭಾ ಹೇಳಿದರು.
 ಇಂತಹುದೇ ಹುನ್ನಾರವನ್ನು ಉಡುಪಿ ಜಿಪಂನಲ್ಲೂ ಮಾಡಲು ಪ್ರಯತ್ನಿಸಿದರೆ ಅಲ್ಲೂ ಎದಿರೇಟು ನೀಡಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದ ಅವರು, ಜಿಪಂ, ತಾಪಂ ಚುನಾವಣೆ ಮುಗಿದು ತಿಂಗಳು ಕಳೆದರೂ ಇನ್ನೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸದೇ ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಜಿಪಂ ಹಾಗೂ ತಾಪಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸುವಂತೆ ಅವರು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಲ್ಲಿ ಅಂಬಲಪಾಡಿ ಮತ್ತು ಬ್ರಹ್ಮಾವರಗಳಲ್ಲಿ ಈಗ ನಡೆದಿರುವ ಕಾಮಗಾರಿಯಿಂದ ಜನತೆಗಾಗುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಯವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ ಶೋಭಾ, ಅಂಬಲಪಾಡಿಯಲ್ಲಿ ಓವರ್ ಬ್ರಿಡ್ಜ್ ರಚನೆಗೆ ಸಚಿವರು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಬ್ರಹ್ಮಾವರದಲ್ಲಿ ರಸ್ತೆ ಸುರಕ್ಷತಾ ಸಮಿತಿಗೆ ಪ್ರಸ್ತಾವನೆಯನ್ನು ಕಳುಹಿಸುವಂತೆ ಸೂಚಿಸಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕೆ.ಉದಯಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ಶಿಲ್ಪಾ ಗಂಗಾಧರ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News