ಅಜಿಲಮೊಗರುವಿಗೆ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ - ಸಚಿವ ಬಿ. ರಮಾನಾಥ ರೈ

Update: 2016-03-24 06:57 GMT

ವಿಟ್ಲ, ಮಾ.24: ಬಂಟ್ವಾಳ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿರುವ ಅಜಿಲಮೊಗರುವಿಗೆ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ ನಿರ್ಮಾಣದ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಈ ಒಂದು ಬೇಡಿಕೆ ಈಡೇರಲಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಭರವಸೆ ನೀಡಿದರು.
    
 ಬುಧವಾರ ರಾತ್ರಿ ನಡೆದ ಅಜಿಲಮೊಗರು ಮಸೀದಿ ಸ್ಥಾಪಕ ಹಝ್ರತ್ ಬಾಬಾ ಫಕ್ರುದ್ದೀನ್ (ರ.ಅ) ಅವರ ಹೆಸರಿನಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಮಾಲಿದಾ ಉರೂಸ್‌ನ 743ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎರಡು ಧಾರ್ಮಿಕ ಕ್ಷೇತ್ರಗಳಾಗಿರುವ ಕಡೇಶ್ವಾಲ್ಯ ಹಾಗೂ ಅಜಿಲಮೊಗರು ನಡುವೆ ಸಂಪರ್ಕ ಕಲ್ಪಿಸುವ ಸೌಹಾರ್ದ ಸೇತುವೆ ನಿರ್ಮಾಣದ ಕುರಿತಾಗಿರುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿದ್ದು, ತ್ವರಿತವಾಗಿ ಇದನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.

ಅಜಿಲಮೊಗರು ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳ ನಿರ್ಮಾಣ, ತಡೆಗೋಡೆ ಸಹಿತ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಮುಂದೆಯೂ ಇಲ್ಲಿನ ಅಭಿವೃದ್ದಿ ಕಾಮಗಾರಿಗಳು ಮುಂದುವರಿಯಲಿದೆ ಎಂದು ಸಚಿವ ರೈ ತಿಳಿಸಿದರು.

ಜಿಲ್ಲಾ ವಕ್ಫ್ ಬೋರ್ಡ್ ಚೆಯರ್‌ಮ್ಯಾನ್ ಹಾಜಿ ಎಸ್ ಎಂ ರಶೀದ್ ಮಾತನಾಡಿ ಅಜಿಲಮೊಗರು ತಾಲೂಕಿನ ಶಾಂತಿ-ಸಾಮರಸ್ಯದ ನೆಲೆವೀಡಾಗಿದ್ದು, ಸರ್ವಧರ್ಮೀಯರು ಗೌರವ ಹಾಗೂ ಭಕ್ತಿಯಿಂದ ಒಟ್ಟು ಸೇರುವ ಐತಿಹಾಸಿಕ ಕ್ಷೇತ್ರವಾಗಿದೆ. ಈ ಕ್ಷೇತ್ರದ ಅಭಿವೃದ್ದಿಗೆ ವಕ್ಫ್ ಇಲಾಖೆಯಿಂದ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ ಎಂದು ಭರವಸೆ ನೀಡಿದರು.

ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲಿಯಾನ್, ತಾ ಪಂ ಮಾಜಿ ಸದಸ್ಯ ಸಂಪತ್ ಕುಮಾರ್ ಶೆಟ್ಟಿ, ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಮಾಣಿ ಸಿ ಎ ಬ್ಯಾಂಕ್ ಮ್ಯಾನೇಜರ್ ಸಂಜೀವ ಪೂಜಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬ್ದುಲ್ ಲತೀಫ್ ನೇರಳಕಟ್ಟೆ, ನಾರಾಯಣ ಪೂಜಾರಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಮುಖರಾದ ಆದಂ ಹಾಜಿ, ಮುಹಮ್ಮದ್ ಕುಂಞಿ ಹಾಜಿ, ಆದಂ ಕುಂಞಿ, ಕೆ.ಪಿ. ಖಾದರ್, ಇಖ್ರಾ ಖಾದರ್, ಚೆರಿಯ ಮೋನು, ಅದ್ದು ಬಾಜಾರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News