ಬೆಳ್ತಂಗಡಿ:ಮಲೆಕುಡಿಯ ಕುಟುಂಬಗಳಿಗೆ ಜಮೀನಿನ ಹಕ್ಕು ಪತ್ರ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿಯಿಂದ ತಹಶೀಲ್ದಾರರಿಗೆ ತರಾಟೆ

Update: 2016-03-24 13:06 GMT

ಬೆಳ್ತಂಗಡಿ: ನೆರಿಯ ಗ್ರಾಮದ ಕಾಟಾಜೆಯಲಿ ಭೂಮಾಲಿಕನ ದೌರ್ಜನ್ಯಕ್ಕೆ ಒಳಗಾದ ಮಲೆಕುಡಿಯ ಕುಟುಂಬಗಳಿಗೆ ಇನ್ನೂ ಜಮೀನಿನ ಹಕ್ಕು ಪತ್ರ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಬೆಳ್ತಂಗಡಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

 ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಶೇಖರ ಎಲ್ ಹಾಗೂ ಸುಂದರ ಮಲೆಕುಡಿಯ ಅವರ ಪತ್ನಿ ರೇವತಿ ಅವರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ತಮಗೆ ಇನ್ನೂ ಹಕ್ಕು ಪತ್ರ ನೀಡದಿರುವ ಬಗ್ಗೆ ಗಮನ ಸೆಳೆದರು. ಇಲ್ಲಿನ ಸುಮಾರು 22 ಮಲೆಕುಡಿಯ ಕುಟುಂಬಗಳು ಹಕ್ಕು ಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿ ಕಾಯುತ್ತಿದ್ದರೂ ಇನ್ನೂ ಅವರಿಗೆ ಹಕ್ಕುಪತ್ರ ಸಿಗದಿರುವ ಬಗ್ಗೆ ಗಮನ ಸೆಳೆದರು. ಈ ಕಡತಗಳನ್ನು ತರಿಸಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಯಾವ ಕಾರಣಕ್ಕಾಗಿ ಇದನ್ನು ತಡೆ ಹಿಡಿಯಲಾಗಿದೆ ಕೂಡಲೆ ಇದನ್ನು ಸಮಿತಿಯ ಮುಂದೆ ಮಡಿಸಿ ಎಂದು ಸೂಚನೆ ನೀಡಿದರು. ಸಂಪೂರ್ಣ ಅಂಗವಿಕಲರಾಗಿರುವ ಸುಮದರ ಮಲೆಕುಡಿಯ ಅವರು ಯಾವುದೇ ಕೆಲಸಗಳನ್ನು ಮಾಡಲು ಅಸಹಾಯಕರಾಗಿದ್ದು ಅವರಿಗೆ ಅಂಗವಿಕಲ ವೇತನ ನೀಡುವ ಬಗ್ಗೆ ಪರಿಶೀಲಿಸುವಂತೆ ಅವರು ಸೂಚನೆ ನೀಡಿದರು.

ಕಂದಾಯ ಇಲಾಖೆಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳು ತಿಂಹಳುಗಳು ಕಳೆದರೂ ವಿಲೇ ಆಗದಿರುವ ಬಗ್ಗೆ ಹಲವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು ಅದಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅರ್ಜಿಗಳನ್ನು ಉಳಿಸಿಕೊಳ್ಳದಂತೆ ಸೂಚಿಸಿದರು. ನ್ಯಾಯಾಲಯಗಳ ಆದೇಶಗಳು ಬಂದು ತಿಂಗಳುಗಳೇ ಕಳೆದಿದ್ದರೂ ಅದನ್ನು ಕಂದಾಯ ಇಲಾಖೆಯವರು ಸರಿಯಾಗಿ ಅನುಷ್ಠಾನಕ್ಕೆ ತರದಿರುವ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಇದಕ್ಕೆ ವಾರದಲ್ಲಿಯೇ ಪರಿಹಾರ ಹುಡುಕುವಂತೆ ಸೂಚಿಸಿದರು. ನಿವೃತ್ತ ಸೈನಿಕ ಚಂದಪ್ಪ ಅವರ ಜಮೀನು ಸಮಸ್ಯೆ ಬಹುತೇಕ ಪರಿಹಾರ ಕಂಡಿದ್ದು ಅವರಿಗೆ ಮಂಜೂರರಾಗಿರುವ ಎರಡು ಎಕ್ರೆ ಜಮೀನನ್ನು ಕೂಡಲೆ ಅವರ ಸ್ವಾಧಿನಕ್ಕೆ ನೀಡುವಂತೆ ತಹಸೀಲ್ದಾರರಿಗೆ ಸೂಚಿಸಲಾಯಿತು. ಸಾರ್ವಜನಿಕರಿಂದ ಬಂದ ವಿವಿಧ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಪರಿಹಾರ ಒದಗಿಸುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News