ಸಾಮಾಜಿಕ ಹೊಣೆಗಾರಿಕೆಯ ಉದ್ಯಮಗಳು ಹೆಚ್ಚಲಿ : ಡಾ.ತಿಂಗಳಾಯ

Update: 2016-03-25 18:24 GMT

ಮಂಗಳೂರು, ಮಾ.25: ಗ್ರಾಮೀಣ ಪ್ರದೇಶದ ಕೃಷಿ ಕೂಲಿ ಕಾರ್ಮಿಕರ, ಬಡವರ ಬದುಕಿಗೆ ಪೂರಕವಾಗುವ ಸಾಮಾಜಿಕ ಹೊಣೆಗಾರಿಕೆಯ ಉದ್ಯಮಗಳು ಹೆಚ್ಚಬೇಕಾಗಿದೆ ಎಂದು ಖ್ಯಾತ ಆರ್ಥಿಕ ತಜ್ಞ ಡಾ.ಎನ್.ಕೆ.ತಿಂಗಳಾಯ ಅಭಿಪ್ರಾಯಪಟ್ಟಿದ್ದಾರೆ.

ಪಂಪ್‌ವೆಲ್ ಬಳಿ ಇರುವ ನಿಟ್ಟೆ ವಿವಿಯ ಅಂತಾರಾಷ್ಟ್ರೀಯ ಶಿಕ್ಷಣ ಕೇಂದ್ರದಲ್ಲಿ ನಡೆದ ‘ಭಾರತದಲ್ಲಿ ಸಾಮಾಜಿಕ ಉದ್ಯಮದ ಅವಕಾಶ ಹಾಗೂ ಸವಾಲುಗಳು’ ವಿಚಾರ ಸಂಕಿರಣವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭಾರತದಲ್ಲಿ ಸಾಮಾಜಿಕ ಕಾಳಜಿಯನ್ನು ಉದ್ದೇಶವಾಗಿರಿಸಿಕೊಂಡು ನಡೆಸುವ ಉದ್ಯಮಗಳು ಗ್ರಾಮೀಣ ಪ್ರದೇಶದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.ಇಂದಿಗೂ ಭಾರತದ ಹಲವು ಗ್ರಾಮೀಣ ಪ್ರದೇಶಗಳು ಸಾಕಷ್ಟು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಜೊತೆಗೆ ಬಡತನ, ಆರೋಗ್ಯಕ್ಕೆ ಸಂಬಂಸಿದ ಸಮಸ್ಯೆಗಳಿಂದ ಗ್ರಾಮೀಣ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಮಾಜಿಕ ಕಾಳಜಿಯ ಉದ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕಾಗಿದೆ ಎಂದರು.
       ಸರಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆಯ ಮೊತ್ತವನ್ನು ಶೇ.2ಎಂದು ನಿಗದಿಪಡಿಸಿದೆ. ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯವಿದೆ. ಈ ನಿಯ ಮೂಲಕ ಸಂಗ್ರಹವಾಗುವ ಮೊತ್ತವನ್ನು ಗ್ರಾಮೀಣ ಪ್ರದೇಶದ ಕೃಷಿಕರ, ಬಡವರ ಆರೋಗ್ಯ ಸುಧಾರಣೆಗೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವ್ಯಯಿಸಬೇಕಾಗಿದೆ ಎಂದರು. ಬಾಂಗ್ಲಾದಲ್ಲಿ ಬ್ಯಾಂಕ್ ಉದ್ಯಮ ದೇಶದ ಜನಸಾಮಾನ್ಯರ ಸಾಮಾಜಿಕ ಬದಲಾವಣೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಗೆ ಕಾರಣವಾಯಿತು. ಭಾರತದಲ್ಲಿ ಹಸಿರು ಕ್ರಾಂತಿಯ ಸಾಧನೆ ಒಂದೆಡೆಯಾದರೆ ಇನ್ನೊಂದೆಡೆ ಕೀಟನಾಶಕ ಬಳಕೆಯಿಂದ ತೊಂದರೆಗೀಡಾದ ಬಡಜನರು ಆಸ್ಪತ್ರೆ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯ ಸುಧಾರಣೆಗೆ ಸರಕಾರ ಒತ್ತು ನೀಡಬೇಕಾಗಿದೆ ಎಂದು ತಿಂಗಳಾಯ ತಿಳಿಸಿದರು.
  ಸಮಾರಂಭದಲ್ಲಿ ನಿಟ್ಟೆ ವಿವಿ ಕುಲಸಚಿವ ಡಾ.ಎಂ.ಎಸ್.ಮೂಡಿತ್ತಾಯ, ಸೋಶಿಯಲ್ ಬ್ಯುಸಿನೆಸ್ ನೆಟ್‌ವರ್ಕ್ ಇಂಡಿಯಾ ಘಟಕದ ಗೌರವಾಧ್ಯಕ್ಷ ಡಾ.ಯಶವಂತ ಡೊಂಗ್ರೆ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಾಮ ಮೋಹನ್ ಪೈ, ಎಸ್‌ಬಿಆರ್‌ಆರ್ ಮಹಾಜನ್ ಕಾಲೇಜಿನ ಪ್ರಾಂಶುಪಾಲ ಕೆ.ವಿ.ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು. ಸೋನಾ ರೈ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಸಿ.ಎಸ್.ಶಾಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News