ಮಹಿಳೆಯರನ್ನು ಸಂಜೆ 6 ಗಂಟೆಯ ಬಳಿಕ ವಿಚಾರಣೆಗೆ ಠಾಣೆಗೆ ಕರೆಯುವುದಿಲ್ಲ- ಠಾಣಾಧಿಕಾರಿ

Update: 2016-03-26 09:53 GMT

ಪುತ್ತೂರು, ಮಾ.26: ಮಹಿಳೆಯರನ್ನು ವಿಚಾರಣೆಗೆಂದು ಸಂಜೆ 6 ಗಂಟೆಯ ಬಳಿಕ ಠಾಣೆಗೆ ಕರೆಸಲಾಗುವುದಿಲ್ಲ. ಕೆಲವೊಮ್ಮೆ ಅವರಾಗಿಯೇ 6 ಗಂಟೆಯ ಬಳಿಕ ಬಂದರೆ ಹಿಂದಕ್ಕೆ ಕಳುಹಿಸದೆ ವಿಚಾರಣೆ ನಡೆಸಿದ ಸಂಭವವಿದೆ ಎಂದು ಪುತ್ತೂರು ನಗರ ಠಾಣಾಧಿಕಾರಿ ಅಬ್ದುಲ್ ಖಾದರ್ ಸ್ಪಷ್ಟ ಪಡಿಸಿದರು.

ಅವರು ಪುತ್ತೂರಿನ ತಾ.ಪಂ. ಸಭಾಂಗಣದಲ್ಲಿ ಉಪ ತಹಾಶಿಲ್ದಾರ್ ಶ್ರೀದರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಮಹಿಳೆ ಮತ್ತು ಮಕ್ಕಳ ಮಾರಾಟ ಹಾಗೂ ಸಾಗಾಟ ತಡೆ ಕಾವಲು ಸಮಿತಿ, ಭಾಗ್ಯಲಕ್ಷ್ಮೀ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಸ್ತ್ರೀ ಶಕ್ತಿ ಸಮನ್ವಯ ಸಮತಿ, ಕೌಟುಂಬಿಕ ದೌರ್ಜನ್ಯ ತಡೆ ಕಾವಲು ಸಮಿತಿ, ಮಕ್ಕಲ ರಕ್ಷಣಾ ಸಮಿತಿ, ಬಾಲ್ಯ ವಿವಾಹ ತಡೆ ಸಮಿತಿ, ಮಾಧಕ ವಸ್ತು ಮತ್ತು ಮದ್ಯವರ್ಜನ ತಡೆ ಸಮಿತಿ, ವಿಕಲಚೇತನರ ಸಮಿತಿ ಹಾಗೂ ವರದಕ್ಷಿಣೆ ನಿಷೇಧ ಕಾಯಿದೆ ಸಮಿತಿಯ ಸಭೆಯಲ್ಲಿ ಮಹಿಳೆಯರನ್ನು ಸಂಜೆಯ ಬಳಿಕ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ದೂರಿಗೆ ಉತ್ತರಿಸುತ್ತಾ ಮಹಿಳೆಯರನ್ನು ಠಾಣೆಗೆ ವಿಚಾರಣೆಗೆಂದು ಸಂಜೆ 6 ಗಂಟೆಯ ಬಳಿ ಕರೆಸಲಾಗುತ್ತಿಲ್ಲ. ಕೆಲವೊಮ್ಮೆ ಅವರಾಗಿಯೇ ಬಂದಾಗ ಹಿಂದಕ್ಕೆ ಕಳುಹಿಸದೆ ವಿಚಾರಣೆ ನಡೆಸಿ ಬಿಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಅಲ್ಲಲ್ಲಿ ಜಾಗೃತಿ ಶಿಬಿರಗಳನ್ನು ಏರ್ಪಡಿಸಲಾಗಿದೆ. ಇತ್ತೀಚೆಗೆ ಯಾವುದೇ ಬಾಲ್ಯ ವಿವಾಹ ನಡೆದಿರುವ ಬಗ್ಗೆ ದೂರು ದಾಖಲಾಗಿಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ ಹೆಗಡೆ ಸಭೆಗೆ ತಿಳಿಸಿದರು.

ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳ ಆಯ್ಕೆಗೆ ದಂಪತಿಗಳು 2 ಮಕ್ಕಳ ಬಳಿಕ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಬೇಕು ಎಂದು ಸರ್ಕಾರ ಇತ್ತೀಚೆಗೆ ಸುತ್ತೋಲೆ ಕಳುಹಿಸಿದ್ದು, ಸರ್ಕಾರದ ಈ ಕಡ್ಡಾಯ ಸರಿಯಲ್ಲ. ಅನಿವಾರ್ಯವಾದಾಗ 3ನೇ ಮಗುವಿಗೆ ಅವಕಾಶವಿರುವಂತೆ ಸುತ್ತೋಲೆಯಲ್ಲಿ ತಿದ್ದುಪಡಿ ಮಾಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಝೊಹರಾ ನಿಸಾರ್ ಅವರು ಈ ಬಗ್ಗೆ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಮಹಿಳಾ ಕಲ್ಯಾಣ ಅಧಿಕಾರಿ ಅನ್ನಪೂರ್ಣ ಅವರು ಸರ್ಕಾರದ ಸುತ್ತೋಲೆಯಂತೆ ದಂಪತಿಗಳು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಕೊಳ್ಳಬೇಕಾಗಿದೆ. ಇದೀಗ ಅದನ್ನು ಸರಳಗೊಳಿಸುವಂತೆ ತಾಲೂಕು ನಿರ್ಣಯ ಅಂಗೀಕರಿಸಿ ಜಿಲ್ಲಾ ಸಮಿತಿಗೆ ನೀಡಿದಲ್ಲಿ ಅಲ್ಲಿ ಈ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಮಾಧಕ ದ್ರವ್ಯವಾದ ಗಾಂಜಾ ಇನ್ನಿತರ ವಸ್ತುಗಳ ಮಾರಾಟ ಕಡಿಮೆಯಾಗಿದ್ದು, ಈಗಾಗಲೇ ಹಲವಾರು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಮಾರಾಟ ಜಾಲದ ಪತ್ತೆ ಹಚ್ಚಿ ಕೇಸು ದಾಖಲಿಸಲಾಗಿದೆ. ಪ್ರಕರಣ ದಾಖಲು ಸಂಖ್ಯೆ ಕಡಿಮೆಯಾಗಿದೆ ಎಂದು ನಗರ ಠಾಣಾಧಿಕಾರಿ ಅಬ್ದುಲ್ ಖಾದರ್ ತಿಳಿಸಿದರು.

ಗಾಂಜಾ ಮಾರಾಟ ತಡೆಯುವ ನಿಟ್ಟಿನಲ್ಲಿ ಪೊಲೀಸರು ಕಾಲೇಜು ವಠಾರ ಇನ್ನಿತರ ಕಡೆಗಳಿಗೆ ಮುಫ್ತಿಯಲ್ಲಿ ತೆರಳಿ ಪತ್ತೆ ಕ್ರಮ ಕೈಗೊಂಡಲ್ಲಿ ಈ ಪಿಡುಗು ಪೂರ್ಣವಾಗಿ ತಡೆಯಲು ಸಾಧ್ಯ ಎಂದು ಉಪತಹಶೀಲ್ದಾರ್ ಶ್ರೀಧರ್ ಸಲಹೆ ನೀಡಿದರು.

ವಿಕಲಚೇತನರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಯನ್ನು ಸರ್ಕಾರವು ಕಾರ್ಯಗತಗೊಳಿಸಲಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರನ್ನು ನೇಮಿಸುವಂತೆ ಸೂಚನೆ ನೀಡಿದ ಜಿಲ್ಲಾ ಜಿಲ್ಲಾ ಮಹಿಳಾ ಕಲ್ಯಾಣ ಅಧಿಕಾರಿ ಅನ್ನಪೂರ್ಣ ಅವರು ಪಂಚಾಯತ್‌ಗಳಲ್ಲಿ ಶೇ.3 ಅನುದಾನವನ್ನು ವಿಕಲಚೇತನರಿಗೆ ಮೀಸಲಿರಿಸಲಾಗುತ್ತಿದೆ.

ವಿಕಲಚೇತನರಿಗೆ ಇಲಾಖೆಯ ಮೂಲಕ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕ ಸಾಕಷ್ಟು ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಪಂಚಾಯತ್ ಅನುದಾನದಲ್ಲಿ ಅವರಿಗೆ ಸಾಧನ ಸಲಕರಣೆ ನೀಡುವ ಬದಲು ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ, ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಪಿಡಿಒಗಳಿಗೆ ಸೂಚನೆ ನೀಡುವಂತೆ ತಾ.ಪಂ. ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ ಯಾವುದೇ ವರದಕ್ಷಿಣೆ ಹಿಂಸೆ ಕೇಸು ದಾಖಲಾಗಿಲ್ಲ ಎಂದು ಠಾಣಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ತಾ.ಪಂ ವಿಸ್ತರಣಾಧಿಕಾರಿ ಗಣಪತಿ ಭಟ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ವಜೀರ್, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗುಣಾ ಭಟ್, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಲಯನೆಸ್ ಕ್ಲಬ್ ಅಧ್ಯಕ್ಷೆ ಹರೀಣಾಕ್ಷಿ ಜೆ. ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್, ಶಾರದಾ ಕೇಶವ್, ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ನವೀನ್ ಮೊಟ್ಟೆತ್ತಡ್ಕ, ಸಾಂತ್ವನ ಕೇಂದ್ರದ ಮೀನಾಕ್ಷಿ, ಪುತ್ತೂರು ನಗರ ಸಭೆಯ ಮೆನೇಜರ್ ಚಂದ್ರಕುಮಾರ್, ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ ಹೆಗಡೆ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News