ಮೂಡುಬಿದಿರೆ: ಸೋಲಾರ್ ಬಳಕೆಯಿಂದ ವಿದ್ಯುತ್ ಉಳಿತಾಯ: ಸತೀಶ್ ಕುಮಾರ್

Update: 2016-03-26 12:46 GMT

ಮೂಡುಬಿದಿರೆ: ವಿದ್ಯುತ್ ಉತ್ಪಾದನೆ ಮತ್ತು ಬಳಕೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸೋಲಾರ್ ವಿದ್ಯುತ್ ಬಳಕೆ ಮಾಡುವುದರಿಂದ ವಿದ್ಯುತ್ ಉಳಿತಾಯದೊಂದಿಗೆ ಆರ್ಥಿಕ ಲಾಭವನ್ನು ಮಾಡಬಹುದು ಎಂದು ಮೂಡುಬಿದಿರೆ ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್ ಕುಮಾರ್ ಹೇಳಿದರು.  ಅವರು ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ಮೂಡುಬಿದಿರೆ ಕೋ ಆಪರೇಟಿವ್ ಬ್ಯಾಂಕ್ ಸಹಕಾರದೊಂದಿಗೆ ಎಂಸಿಎಸ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ಕೃಷಿ ಮತ್ತು ಗೃಹ ಬಳಕೆಯಲ್ಲಿ ಸೌರಶಕ್ತಿ ತಂತ್ರಜ್ಞಾನ ಬಳಕೆ ಕುರಿತು ಪ್ರಾತ್ಯಕ್ಷಿತೆ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಧವಳಾ ಕಾಲೆಜಿನ ಪ್ರಾಂಶುಪಾಲ ಪ್ರೊ. ರವೀಶ್ ಕುಮಾರ್ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯುತ್ ಸಮಸ್ಯೆ ತೀವ್ರವಾಗಿ ತಲೆದೊರುತ್ತಿರುವುದರಿಂದ ಸೌರಶಕ್ತಿ ವಿದ್ಯುತ್ ಬಳಕೆ ಅನಿವಾರ್ಯವಾಗಿದೆ. ಇದರಿಂದ ವಿದ್ಯುತ್ ಉಳಿತಾಯ ಮಾಡಿದಂತಾಗುತ್ತದೆ. ಸೋಲಾರ್ ಅಳವಡಿಕೆಯಿಂದ ಆಗುವ ಲಾಭ ನಷ್ಟಕ್ಕಿಂತ ಸಾಮಾಜಿಕ ಕಳಕಳಿ ಮುಖ್ಯ ಎಂದ ಅವರು ಸೋಲಾರ್ ಅಳವಡಿಸಿರುವ ಕುರಿತು ತನ್ನ ಅನುಭವ ತಿಳಿಸಿದರು. ಎಂಸಿಎಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ ಮಾತನಾಡಿ ತಮ್ಮ ಬ್ಯಾಂಕ್ ಯಾವುದೇ ಸೋಲಾರ್ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದಿಲ್ಲ. ಗ್ರಾಹಕರು ತಮ್ಮಿಷ್ಟವಾದ ಕಂಪೆನಿಯನ್ನು ಆಯ್ದುಕೊಳ್ಳಬಹುದು. ಕಂಪೆನಿಗಳು ಬಡ್ಡಿಹಣವನ್ನು ಪಾವತಿಸಿದ್ದಲ್ಲಿ ಗ್ರಾಹಕರಿಗೆ ಬಡ್ಡಿರಹಿತ ಸಾಲವನ್ನು ನೀಡಬಹುದು. ಬ್ಯಾಂಕ್ ಪ್ರಸ್ತುತ ಶೇ 5 ಬಡ್ಡಿದರದಲ್ಲಿ ಸಾಲ ನೀಡುತ್ತಿದೆ ಎಂದರು. .ಆಬರ್ ಎನರ್ಜಿಯ ಸೂರ್ಯನಾರಾಯಣ ಭಟ್, ಬಂಟ್ ಸೋಲಾರ್‌ನ ನಿತ್ಯಾನಂದ ಶೆಟ್ಟಿ, ಕೀರ್ತಿ ಸೋಲಾರ್‌ನ ರೋಶನ್ ವೆದಿಕೆಯಲ್ಲಿ ಉಪಸ್ಥಿತರಿದ್ದರು.  ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News