ಮಂಗಳೂರು ವಿ.ವಿ.4.87 ಕೋಟಿ ರೂ ಮಿಗತೆ ಬಜೆಟ್ ಮಂಡನೆ

Update: 2016-03-26 12:48 GMT

  ಮಂಗಳೂರು.ಮಾ.26:ಮಂಗಳೂರು ವಿಶ್ವ ವಿದ್ಯಾನಿಲಯ 2016-17ನೆ ಸಾಲಿಗೆ 4.87ಕೋಟಿ ರೂಪಾಯಿಯ ಮಿಗತೆ ಬಜೆಟನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಹಣಕಾಸು ಅಧಿಕಾರಿ ಪಿ.ಎ.ರೇಗೊ ಮಂಡಿಸಿದರು.
   ಅವರು ಇಂದು ಮಂಗಳೂರು ವಿಶ್ವ ವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ಕುಲಪತಿ ಕೆ.ಭೈರಪ್ಪ ರ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಮಂಗಡ ಪತ್ರದ ವಿವರ ನೀಡಿದರು.
      ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿಶ್ವ ವಿದ್ಯಾನಿಲಯ 218.81 ಕೋಟಿ ರೂ ಸಂಪನ್ಮೂಲವನ್ನು ವಿವಿಧ ಮೂಲಗಳಿಂದ ಸ್ವೀಕರಿಸಲಿದೆ.ಹಾಲಿ ವರ್ಷದಲ್ಲಿ 23.68 ಕೋಟಿ ರೂ ಖರ್ಚು ಎಂದು ಅಂದಾಜಿಸಲಾಗಿದೆ.ಕಳೆದ ಸಾಲಿನಲ್ಲಿ (2015-16)4.70 ಕೋಟಿ ರೂ ಕೊರತೆಯಾಗಿತ್ತು.ಕಳೆದ ವರ್ಷವೂ ಕೊರತೆ ಬಜೆಟ್ ಮಂಡಿಸಲಾಗಿತ್ತು. ಕಳೆದ ಬಾರಿಗೆ ಹೋಲಿಸಿದಾಗ ಈ ಬಾರಿ ಕೊರತೆಯ ಪ್ರಮಾಣ 17ಲಕ್ಷ ರೂ ಹೆಚ್ಚಾಗಿದೆ ಎಂದು ರೇಗೊ ತಿಳಿಸಿದರು.
  ಆದಾಯದ ಮೂಲಗಳಾಗಿ ಯೋಜನೇತರ ವಲಯದಿಂದ 159.73ಕೋಟಿ ರೂ ನಿರೀಕ್ಷಿಸಲಾಗಿದ್ದು ,2015-16ನೆ ಸಾಲಿನಲ್ಲಿ 139.14 ಕೋಟಿ ರೂ ಆಗಿತ್ತು.ಯೋಜನೆಯ ಆದಾಯ 59.08 ಕೋಟಿ ರೂ ಹಾಗೂ ಯೋಜನೇತರ ಖರ್ಚು 155.21 ಕೋಟಿ ರೂ,ಯೋಜನೆಯ ಖರ್ಚು 68.47 ಕೋಟಿ ರೂ ಎಂದು ಅಂದಾಜಿಸಲಾಗಿದೆ.ಪ್ರಸಕ್ತ ಸಾಲಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿ ನಿಲಯ ನಿರ್ಮಾಣ(800ಲಕ್ಷ.ರೂ)ಉಡುಪಿ ತೆಂಕನಿಡಿಯೂರು ಕಾಲೇಜಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ (50ಲಕ್ಷ),ತ್ಯಾಜ್ಯ ಸಂಸ್ಕರಣೆ(40ಲಕ್ಷ),ಲೆಡ್ ಬಲ್ಭು ಅಳವಡಿಕೆ (25ಲಕ್ಷ),ಉಪನ್ಯಾಸಕರ ಕೊಠಡಿ ನಿರ್ಮಾಣ(300ಲಕ್ಷ),ಆಡಳಿತ ಸೌಧದ ಬಳಿ ಕಚೇರಿ ಸಂಕೀರ್ಣ ನಿರ್ಮಾಣ(200ಲಕ್ಷ),ಉಡುಪಿಯ ಬೆಳಪುವಿನಲ್ಲಿ ಸುಧಾರಿತ ಸಂಶೋಧನಾ ಕೇಂದ್ರ ಅಭಿವೃದ್ಧಿ (200ಲಕ್ಷ),ಪರೀಕ್ಷಾ ಭವನ ನಿರ್ಮಾಣ(100ಲಕ್ಷ), ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರ ನಿರ್ಮಾಣ(100ಲಕ್ಷ),ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರ ಅಭಿವೃದ್ಧಿ(200ಲಕ್ಷ) ಮೊದಲಾದ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹಣಕಾಸು ಅಧಿಕಾರಿ ತಿಳಿಸಿದರು.
   ವೇದಿಕೆಯಲ್ಲಿ ಆಡಳಿತ ಕುಲಸಚಿವ ಕೆಂಪೇಗೌಡ,ಪರೀಕ್ಷಾಂಗ ಕುಲಸಚಿವ ಎ.ಎಂ. ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News