ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯತ್ನ: ಸಚಿವ ಯು.ಟಿ.ಖಾದರ್

Update: 2016-03-28 08:48 GMT

ಕೊಣಾಜೆ, ಮಾ. 28: ‘ಹರೇಕಳದಲ್ಲಿ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ತೆರೆದ ಬಾವಿ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ, ಇದರಿಂದಾಗಿ ಈ ಭಾಗದಲ್ಲಿ ನೀರಿನ ಸಮಸ್ಯೆಯು ಖಂಡಿತಾ ಬಗೆಹರಿಯಲಿದ್ದು ಗ್ರಾಮಸ್ಥರು ನೀರಿನ ಹಂಚಿಕೆ ವಿಷಯದಲ್ಲಿ ಸಮಿತಿ ರಚನೆ ಮಾಡಿಕೊಂಡು ಉತ್ತಮವಾದ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ಹರೇಕಳ ಗ್ರಾಮದ ಬೈತಾರ್‌ನ ಕುತ್ತಿಮುಗೇರುವಿನಲ್ಲಿ ನಿರ್ಮಾಣಗೊಂದ ತೆರೆದ ಬಾವಿ ರವಿವಾರ ಗ್ರಾಮಸ್ಥರಿಗೆ ಸಮರ್ಪಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ಗ್ರಾಮದಲ್ಲಿ ತೆರೆದ ಬಾವಿ ನಿರ್ಮಿಸಲಾಗಿದ್ದರೂ ಹಳದಿ ನೀರು ಸಿಕ್ಕಿದ್ದರಿಂದ ನಿಷ್ಪ್ರಯೋಜಕವಾಗಿತ್ತು. ಈ ಬಾರಿಯೂ ಅದೇ ಸಮಸ್ಯೆ ಮರುಕಳಿಸುವ ಭೀತಿಯಿತ್ತಾದರೂ ಅದು ನೀಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ 5 ಲಕ್ಷ ಅನುದಾನದಲ್ಲಿ ಬಾವಿ ನಿರ್ಮಾಣಗೊಂಡಿದ್ದು, ತಮ್ಮ 15 ಲಕ್ಷ ನಿಧಿಯಲ್ಲಿ ಪಂಪ್, ಪೈಪ್‌ಲೈನ್ ಅಳವಡಿಸಲಾಗಿದೆ. ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

 ಕ್ಷೇತ್ರದ ವಿವಿದ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಸಂಸದ, ವಿವಿಧ ಸಚಿವರು, ಮಾಜಿ ಮುಖ್ಯಮಂತ್ರಿಗಳೂ ಬಂದು ಹೋಗಿರುವ ತಲಪಾಡಿಯಿಂದ ಪಂಜಾಳ ರಸ್ತೆ 3.50 ಕೋಟಿಯಲ್ಲಿ ಕಾಮಗಾರಿ ನಡೆದಿದೆ.

ಉಳ್ಳಾಲ-ತೊಕ್ಕೊಟ್ಟು ರಸ್ತೆ 10.5 ಕೋಟಿಯಲ್ಲಿ ನಡೆಯುತ್ತಿದೆ, ಬೈತಾರ್ ರಸ್ತೆಗೆ 10 ಲಕ್ಷ ಮೀಸಲಿಡಲಾಗಿದೆ. ಕೆಲವು ದೊಡ್ಡ ರಸ್ತೆ ಕಾಮಗಾರಿ ಮಳೆಗಾಲದ ಬಳಿಕ ಆರಂಭಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಹರೇಕಳ ಮಾತನಾಡಿ, ತೆರೆದ ಬಾವಿ ನಿರ್ಮಾದಿಂದ ಬೈತಾರ್, ದೇರಿಕಟ್ಟೆ ಉಂಬುದ, ಕೊಜಪಾಡಿ, ಕೊಜಪಾಡಿ ಸೈಟ್, ರಾಜಗುಡ್ಡೆ, ಕೊರಪಾದೆ, ದೆಬ್ಬೇಲಿ, ಕುತ್ತಿಮುಗೇರು ಪ್ರದೇಶ ನೀರಿನ ಸಮಸ್ಯೆಯಿಂದ ಮುಕ್ತಗೊಳ್ಳಲಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ಅದ್ಯಕ್ಷೆ ಅನಿತಾ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಮಹಾಬಲ ಹೆಗ್ಡೆ, ಮಾಜಿ ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ, ತಾಲೂಕು ಪಂಚಾಯತ್  ಸದಸ್ಯೆ ಶಶಿಪ್ರಭಾ ಶೆಟ್ಟಿ, ಅಬ್ದುಲ್ ಜಬ್ಬಾರ್, ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ರಫೀಕ್, ಪ್ರಮುಖರಾದ ಪ್ರಭಾಕರ ಭಂಡಾರಿ ದೆಬ್ಬೇಲಿಗುತ್ತು, ಶೇಖರ್ ಗಟ್ಟಿ, ಜನಾರ್ದನ ಗಟ್ಟಿ, ಬದ್ರಿಯಾ ಮಸೀದಿ ಅಧ್ಯಕ್ಷ ಮಜೀದ್, ಝಕರಿಯಾ ಮಲಾರ್, ಹರೇಕಳ ಹಾಗೂ ಅಂಬ್ಲಮೊಗರು ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News