ಪುತ್ತೂರು : ವಿಶ್ವ ಮಹಿಳಾ ದಿನಾಚರಣೆ

Update: 2016-03-28 11:42 GMT
 ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ.

ಮಹಿಳೆ ತನ್ನ ಸುರಕ್ಷತೆಯೆಡೆಗೆ ಗಮನ ಹರಿಸಬೇಕು-ಸವಿತಾ ಜಯದೇವ್ ಪುತ್ತೂರು: ಆರ್ಥಿಕವಾಗಿ, ರಾಜಕೀಯ ಮತ್ತು ಸಾಮಾಜಿಕವಾಗಿ ಮುನ್ನಡೆ ಸಾಧಿಸುತ್ತಿರುವ ಮಹಿಳೆಯ ಮೇಲೆ ಮತ್ತೊಂದು ಕಡೆ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಮಹಿಳೆಯ ಮೇಲೆ ಕೇವಲ ಪುರುಷರ ದೌರ್ಜನ್ಯ ಮಾತ್ರ ನಡೆಯುತ್ತಿಲ್ಲ. ಮಹಿಳೆಯರ ಪಾಲೂ ಇದರಲ್ಲಿದೆ. ಮಹಿಳೆ ತನ್ನ ಸುರಕ್ಷತೆಯ ಕಡೆಗೆ ಗಮನ ಹರಿಸಬೇಕು ಎಂದು ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್ ಹೇಳಿದರು.

 ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತಾಲೂಕು ಮಹಿಳಾ ಮಂಡಳಗಳ ಒಕ್ಕೂಟ, ನವ್ಯಶ್ರೀ ಮಹಿಳಾ ಮಂಡಲ, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಪುತ್ತೂರು, ವನಿತಾ ಸಮಾಜ ಹಾರಾಡಿ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಪುತ್ತೂರು, ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಸೋಮವಾರ ಸಂಜೆ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಗೆ ಎಲ್ಲಿ ಗೌರವ ಸಿಗುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ಅದ್ಭುತ ಪರಿಕಲ್ಪನೆಯನ್ನು ಜಗತ್ತಿಗೆ ತೋರಿಸಿದ ಭಾರತದ ನೆಲದಲ್ಲೇ ಪ್ರಸ್ತುತ ಮಹಿಳೆಯ ಮೇಲೆ ನಾನಾ ಬಗೆಯ ದೌರ್ಜನ್ಯಗಳು ನಡೆಯುತ್ತಿರುವುದು ದುರಂತವಾಗಿದೆ. ಸಿನಿಮಾ, ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯನ್ನು ಕೆಟ್ಟದಾಗಿ ಚಿತ್ರಿಸುವ ಕೆಲಸ ನಡೆಯುತ್ತಲೇ ಇದೆ. ಇದರ ವಿರುದ್ಧ ಪ್ರಬಲ ಸಂದೇಶವನ್ನು ಮಹಿಳೆಯರು ನೀಡದಿದ್ದರೆ ಭವಿಷ್ಯ ಇನ್ನಷ್ಟು ಕರಾಳವಾಗಲಿದೆ ಎಂದ ಅವರು ಹೆಣ್ಣಿನ ಪ್ರತಿಭೆ, ಸಾಧನೆ, ಬದುಕಿನ ಆಧಾರದಲ್ಲಿ ಗೌರವ ಕೊಡಲು ಸಮಾಜ ಇನ್ನೂ ಪೂರ್ತಿಯಾಗಿ ಕಲಿತಿಲ್ಲ. ಈಗಲೂ ಮಹಿಳೆಯನ್ನು ಭೋಗದ ವಸ್ತುವೆಂದೇ ಪರಿಗಣಿಸಲಾಗುತ್ತಿದೆ. ಈ ಪರಿಗಣನೆಗೆ ಸಾಧನೆಯ ಮೂಲಕ ಮಹಿಳೆ ಇದಕ್ಕೆ ಉತ್ತರಿಸಬೇಕಾಗಿದೆ ಎಂದರು.
ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿ ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿ ಇಂದಿಲ್ಲ. ಆಕೆ ಅಬಲೆ ಎಂಬ ಪಟ್ಟ ಕಳಚಿ ಸಬಲೆಯಾಗಿದ್ದಾಳೆ. ಜತೆಗೆ ಪೂಜನೀಯಳೂ ಆಗಿದ್ದಾಳೆ. ಭಾರತದ ಮಣ್ಣು ಹೆಣ್ಣಿನ ಅಂತಃಸತ್ವವನ್ನು ಗುರುತಿಸಿದೆ ಎಂದರು.

ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾವಿತ್ರಿ ರೈ ಮತ್ತು ಕುಸುಮಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗುಣಾ ಭಟ್, ವನಿತಾ ಸಮಾಜದ ಅಧ್ಯಕ್ಷೆ ವತ್ಸಲಾ ರಾಜ್ಞಿ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವ್ಯಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್ ಸ್ವಾಗತಿಸಿದರು. ಲಯನೆಸ್ ಕ್ಲಬ್ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ಉಮಾಪ್ರಸನ್ನ ಮತ್ತು ಮೋಹಿನಿ ದಿವಾಕರ್ ನಿರೂಪಿಸಿರು.

ಸಹಕಾರಿ ಕ್ಷೇತ್ರದ ಸಾಧಕಿಯರಾದ ಸಾವಿತ್ರಿ ರೈ ಮತ್ತು ಕುಸುಮಾ ಶೆಟ್ಟಿ ಅವರನ್ನು ಸನ್ಮಾನಿಸುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News