ಪುತ್ತೂರು : ದೇವಳ ಆಮಂತ್ರಣ ವಿವಾದ: ಹೈಕೋರ್ಟು ತೀರ್ಪು ಬುಧವಾರಕ್ಕೆ ಮುಂಡೂಡಿಕೆ

Update: 2016-03-29 14:02 GMT

  ಪುತ್ತೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿವಾದಕ್ಕೆ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ಹೈಕೋರ್ಟು ಮತ್ತೆ ಬುಧವಾರಕ್ಕೆ ಮುಂದೂಡಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರನ್ನು ಮುದ್ರಿಸಿರುವುದನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿ ಬಗ್ಗೆ ಕಳೆದ ಮಾರ್ಚ್ 18ರಂದು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾ.21ಕ್ಕೆ ಮುಂದೂಡಿತ್ತು. ಮಾ.21ರಂದು ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು ದಾಖಲೆಗಳ ಹಾಜರುಪಡಿಸಲು ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ಮಾ.24ಕ್ಕೆ ಮುಂದೂಡಿತ್ತು. ಆದರೆ ಅಂದು ನಡೆದ ವಿಚಾರಣೆಯ ವೇಳೆ ಮೂರನೇ ಬಾರಿಗೆ ಮತ್ತೆ ಮಾ.29ಕ್ಕೆ ಮುಂದೂಡಲಾಗಿತ್ತು. ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಮತ್ತೆ ನಾಲ್ಕನೇ ಬಾರಿಗೆ ಬುಧವಾರಕ್ಕೆ ಮುಂದೂಡಿದೆ. ಬುಧವಾರ ತೀರ್ಪು ಇಲ್ಲವೇ ಮಧ್ಯಾಂತರ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ಅವರು ತಿಳಿಸಿದ್ದಾರೆ. ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರನ್ನು ಮುದ್ರಿಸಿರುವ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ರಿಟ್ ಅರ್ಜಿಯಲ್ಲಿ ಕರ್ನಾಟಕ ಸರ್ಕಾರದ ಕಂದಾಯ ಮತ್ತು ಮುಜರಾಯಿ ಇಲಾಖೆಯ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು, ದ.ಕ. ಜಿಲ್ಲಾ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ಇಲಾಖೆಯ ಆಯುಕ್ತರು, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಆಡಳಿತಾಧಿಕಾರಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ಹಾಗೂ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿತ್ತು.  ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವಕ್ಕೆ ಸಂಬಂಧಿಸಿ ಫೆ. 18 ರಂದು ಮುದ್ರಿಸಲಾದ ಆಮಂತ್ರಣ ಪತ್ರಿಕೆಯಲ್ಲಿ ಐದನೇ ಪ್ರತಿವಾದಿಯಾಗಿರುವ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಹೆಸರು ಮುದ್ರಿಸಿರುವುದರಿಂದ ಈ ಆಮಂತ್ರಣ ಪತ್ರಿಕೆಯನ್ನು ವಿತರಿಸಬಾರದು. ಅಲ್ಲದೆ ಐದನೇ ಪ್ರತಿವಾದಿಯವರು ದೇವಾಲಯದ ಆಡಳಿತಾತ್ಮಕ ವಿಷಯದಲ್ಲಿ ಪ್ರವೇಶ ಮಾಡಬಾರದು. ಮತ್ತು ಈ ಕುರಿತು ಸಮಸ್ಯೆ ಪರಿಹಾರಾತ್ಮಕ ಮಧ್ಯಂತರ ಆದೇಶವನ್ನು ನ್ಯಾಯಾಲಯ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿತ್ತು. ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ಅವರು ವಾದಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News