ಚುಟುಕು ಸುದ್ದಿಗಳು

Update: 2016-03-29 18:18 GMT

ಪಿಲಿಕುಳಕ್ಕೆ ಬಸ್ ಸಂಚಾರ ಕಡ್ಡಾಯ: ಆರ್‌ಟಿಒ
ಮಂಗಳೂರು, ಮಾ. 29: ಸ್ಟೇಟ್‌ಬ್ಯಾಂಕ್, ಕಂಕನಾಡಿ, ಮಂಗಳಾದೇವಿ ಮತ್ತು ಸುರತ್ಕಲ್ ಪ್ರದೇಶಗಳಿಂದ ಮೂಡುಶೆಡ್ಡೆ ಮತ್ತು ಪಿಲಿಕುಳಕ್ಕೆ ಸಂಚರಿಸುವ ಎಲ್ಲ ಖಾಸಗಿ ಬಸ್‌ಗಳು ಹಾಗೂ ಕೆಎಸ್ಸಾರ್ಟಿಸಿ ನರ್ಮ್ ಬಸ್ ಪಿಲಿಕುಳಕ್ಕೆ ಕಡ್ಡಾಯವಾಗಿ ಸಂಚರಿಸಬೇಕು ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟನೆಯ ಮೂಲಕ ಎಚ್ಚರಿಸಿದ್ದಾರೆ. ಕೆಲವು ಬಸ್‌ಗಳು ಪಿಲಿಕುಳಕ್ಕೆ ಸಂಚರಿಸದಿರುವ ಬಗ್ಗೆ ಹಲವಾರು ದೂರುಗಳು ಬಂದಿರುತ್ತಿವೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪಿಲಿಕುಳ ಪ್ರದೇಶಕ್ಕೆ ಸಂಚರಿಸುವ ಎಲ್ಲ ಪರವಾನಿಗೆದಾರರ, ಬಸ್ ಮಾಲಕರ ಹಾಗೂ ದ.ಕ. ಬಸ್ ಮಾಲಕರ ಸಂಘದ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿ ಎಲ್ಲ ಬಸ್‌ಗಳು ಕಡ್ಡಾಯವಾಗಿ ಪಿಲಿಕುಳಕ್ಕೆ ಸಂಚರಿಸಬೇಕೆಂದು ಸೂಚಿಸಲಾಗಿದೆ. ಪಿಲಿಕುಳ ಮೃಗಾಲಯದ ಬಳಿ ಇರುವ ಔಟ್ ಪೋಸ್ಟನಲ್ಲಿರುವ ಹಾಜರಿ ಪುಸ್ತಕದಲ್ಲಿ ಕಡ್ಡಾಯವಾಗಿ ಬಸ್‌ಗಳ ನಿರ್ವಾಹಕರು/ಚಾಲಕರು ಸಂಚರಿಸುವ ಎಲ್ಲಾ ಟ್ರಿಪ್ಪುಗಳಲ್ಲಿ ಸಹಿ ಮಾಡಬೇಕೆಂದು ತಿಳಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಎ.2: ಗುತ್ತಿಗಾರಿನಲ್ಲಿ ಅಂತಾರಾಜ್ಯ ಸಾಂಸ್ಕೃತಿಕ ವಿನಿಮಯ
ಸುಳ್ಯ, ಮಾ.29: ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವು ಎ.2ರಂದು ಗುತ್ತಿಗಾರು ಗ್ರಾಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಿಸಿಆರ್‌ಟಿ ಘಟಕ ಸುಳ್ಯ ಹಾಗೂ ಗುತ್ತಿಗಾರು ಹಿ.ಪ್ರಾ.ಶಾಲಾ ಜಂಟಿ ಆಶ್ರಯದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಚಿನ್ನಪ್ಪಗೌಡ ಎಂ. ಸುದ್ದಿಕಾಗೋಷ್ಠಿಯಲ್ಲಿ ತಿಳಿಸಿದರು. ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಜಿಪಂ ಸದಸ್ಯೆ ಆಶಾತಿಮ್ಮಪ್ಪಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಮೂರು ರಾಜ್ಯಗಳ ಕಲಾಪ್ರದರ್ಶನ ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ಜರಗಲಿದೆ. ಇದೊಂದು ಸಾಂಸ್ಕೃತಿಕ ಬೆಸುಗೆಯ ಕಾರ್ಯಕ್ರಮ. ತಮ್ಮ ತಮ್ಮ ರಾಜ್ಯ ಕಲಾಪರಂಪರೆಯನ್ನು ಪ್ರಕಟಪಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತದೆ. ಜೊತೆಗೆ ಎಲಿಮಲೆ ಸರಕಾರಿ ಪ್ರೌಢಶಾಲೆಗೂ ಹೊರರಾಜ್ಯಗಳ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ ಎಂದರು. ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಸಿ.ಎ. ಸುದ್ದಿ ಗೋಷ್ಠಿಯಲ್ಲಿದ್ದರು.

ಪುತ್ತೂರು ಜಾತ್ರಾ ಮಹೋತ್ಸವದ ಸಿದ್ಧತಾ ಸಭೆ
ಮಂಗಳೂರು, ಮಾ. 29: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಸಿದ್ಧತೆ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಉಪ ಆಯುಕ್ತರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಕಚೇರಿಯಲ್ಲಿ ಸಭೆ ನಡೆಯಿತು.ಈವರೆಗೆ ನಡೆದಿರುವ ಸಿದ್ಧತೆಗಳ ಬಗ್ಗೆ ಪರಿಶೀಲಿಸಲಾಯಿತಲ್ಲದೆ, ಭಕ್ತರು ಮತ್ತು ಸಾರ್ವಜನಿಕರಿಗೆ ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಚರ್ಚಿಸಲಾಯಿತು. ಕುಡಿಯುವ ನೀರಿನ ವ್ಯವಸ್ಥೆ, ದೀಪದ ವ್ಯವಸ್ಥೆ, ಶುಚಿತ್ವದ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಪಕ್ಕದಲ್ಲಿ ಹರಿಯುವ ತೋಡನ್ನು ಶುಚಿಗೊಳಿಸುವುದು, ಭಕ್ತಾದಿಗಳಿಗೆ ಭೋಜನ ವ್ಯವಸ್ಥೆ, ವಾಹನಗಳ ನಿಲುಗಡೆ ಮುಂತಾದ ವಿಷಯಗಳ ಕುರಿತು ಕೂಲಂಕಷವಾಗಿ ಚರ್ಚಿಸಿ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಎಲ್ಲ ವಿಷಯಗಳ ಬಗ್ಗೆ ಕ್ರಮ ವಹಿ ಸಲು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರಿಗೆ ಸೂಚಿಸಲಾಯಿತು. ಸಭೆಯಲ್ಲಿ ಪುತ್ತೂರು ಉಪ ವಿಭಾಗದ ಸಹಾಯಕ ಕಮಿ ಷನರ್, ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

ಪುತ್ತೂರು ದೇವಳ ಆಮಂತ್ರಣ ವಿವಾದ ಹೈಕೋರ್ಟ್ ತೀರ್ಪು ಇಂದಿಗೆ ಮುಂದೂಡಿಕೆ
ಪುತ್ತೂರು, ಮಾ.29: ಇಲ್ಲಿನ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿವಾದಕ್ಕೆ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ಹೈಕೋರ್ಟ್ ಮತ್ತೆ ಬುಧವಾರಕ್ಕೆ ಮುಂದೂಡಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರ ಹೆಸರನ್ನು ಮುದ್ರಿಸಿರುವುದನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿ ಬಗ್ಗೆ ಮಾ.18ರಂದು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಮಾ.21ಕ್ಕೆ ಮುಂದೂಡಿತ್ತು. ಅಂದಿನ ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು ದಾಖಲೆಗಳ ಹಾಜರುಪಡಿಸಲು ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ಮಾ.24ಕ್ಕೆ ಮುಂದೂಡಿತ್ತು. ಬಳಿಕ ಮಾ.29ಕ್ಕೆ ಮುಂದೂಡಲಾಗಿತ್ತು. ಅದರಂತೆ ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಮತ್ತೆ ನಾಲ್ಕನೇ ಬಾರಿಗೆ ಬುಧವಾರಕ್ಕೆ ಮುಂದೂಡಿದೆ. ಬುಧವಾರ ತೀರ್ಪು ಇಲ್ಲವೇ ಮಧ್ಯಾಂತರ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ತಿಳಿಸಿದ್ದಾರೆ.

 ಸ್ವಚ್ಛತೆ: ಮೂಡುಬಿದಿರೆ ಸಿವಿಲ್ ಕೋರ್ಟ್ ಪ್ರಥಮ
ಮೂಡುಬಿದಿರೆ, ಮಾ.29: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಸರಕಾರಿ ಕಚೇರಿ ಮತ್ತು ಕಟ್ಟಡಗಳಿಗೆ ಮೂಡುಬಿದಿರೆ ಪುರಸಭೆಯು ನಡೆಸಿದ ವೌಲ್ಯ ಮಾಪನದಲ್ಲಿ ಮೂಡುಬಿದಿರೆ ಸಿವಿಲ್ ಕೋರ್ಟ್ ಪ್ರಥಮ ಹಾಗೂ ಪುರಸಭೆಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಸಮುದಾಯ ಆರೋಗ್ಯ ಕೇಂದ್ರ 3ನೆ ಸ್ಥಾನ, ಉಪ ಖಜಾನೆ-4ನೆ, ಬಿಎಸ್ಸೆನ್ನೆಲ್ ಅಂಚೆ ಕಚೇರಿ-5ನೆ ಸ್ಥಾನ, ಅರಣ್ಯ ಇಲಾಖೆ-6ನೆ, ಶಿಕ್ಷಣ ಇಲಾಖೆ-7ನೆ, ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ-8ನೆ ಸ್ಥಾನ ಹಾಗೂ ಮೂಡುಬಿದಿರೆ ಅಗ್ನಿಶಾಮಕ ಹಳೆ ಕಟ್ಟಡಕ್ಕೆ 9ನೆ ಸ್ಥಾನ ಲಭಿಸಿದೆ. ಕಚೇರಿಗಳ ಒಳಗೆ ಮತ್ತು ಹೊರಗೆ ಕಸ ವಿಲೇವಾರಿ, ಸಾರ್ವಜನಿಕರಿಗೆ ಉಪಯೋಗವಾಗುವಂತೆ ನೀರಿನ ವ್ಯವಸ್ಥೆ, ನೂತನ ಮಾದರಿಯ ನಳ್ಳಿ ವ್ಯವಸ್ಥೆ, ಶೌಚಾಲಯದಲ್ಲಿ ನೂತನ ಮಾದರಿಯ ವ್ಯವಸ್ಥೆ ಹಾಗೂ ಕಚೇರಿಯ ಆವರಣದಲ್ಲಿರುವ ನಿರುಪಯುಕ್ತ ವಸ್ತುಗಳ ವಿಲೇವಾರಿ ಬಗ್ಗೆ ವೌಲ್ಯ ಮಾಪನದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿತ್ತು.

ಎ.5ರಂದು ನೌಕಾ ದಿನಾಚಾರಣೆ
 ಮಂಗಳೂರು, ಮಾ.29: ನವಮಂಗಳೂರು ಬಂದರು ಮಂಡಳಿಯ ರಾಷ್ಟ್ರೀಯ ನೌಕಾ ದಿನಾಚರಣಾ ಸಮಿತಿ ವತಿಯಿಂದ ಎ.5ರಂದು ಅಪರಾಹ್ನ 3:30ಕ್ಕೆ ಬಂದರು ಮಂಡಳಿಯ ಆಡಳಿತ ಕಚೇರಿ ಸಭಾಂಗಣದಲ್ಲಿ 53ನೆ ರಾಷ್ಟ್ರೀಯ ನೌಕಾ ದಿನಾಚರಣೆ ನಡೆಯಲಿದೆ. ಚೆನ್ನೈನ ಎಂ.ಎಂ.ಡಿ.ಯ ಮಾಜಿ ಮುಖ್ಯ ಅಧಿಕಾರಿ ಪೂರ್ಣೇಂದು ಮಿಶ್ರ ಮುಖ್ಯ ಅತಿಥಿಗಳಾಗಿರುವರು. ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಪಿ.ಸಿ. ರೀದಾ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಸುರೇಶ್ ಪಿ. ಶಿರ್ವಾಡ್‌ಕರ್ ವಿಶೇಷ ಅತಿಥಿಗಳಾಗಿರುವರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

            

ಅರ್ಜಿ ಆಹ್ವಾನ
ಮಂಗಳೂರು, ಮಾ. 29: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೈಕುಂಜೆ, ಬಂಟ್ವಾಳ ಇವರಿಂದ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ತುಂಬೆ ಮಾರಿಪಳ್ಳ ಅಂಗನವಾಡಿ ಕೇಂದ್ರಕ್ಕೆ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳಿಂದ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎ.22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮಾಹಿತಿಗಾಗಿ ದೂ.ಸಂ.: 08255- 232465 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ಎ.5ರಂದು ಆರ್‌ಟಿಎ ಸಭೆ
ಮಂಗಳೂರು, ಮಾ. 29: ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಪ್ರಾಧಿಕಾರದ ಸಭೆಯನ್ನು ಎ.5ರಂದು ಬೆಳಗ್ಗೆ 9:30ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಪಿಒಎಸ್ ಯಂತ್ರಗಳ ಅಳವಡಿಕೆಗೆ ಆಧಾರ್
ಉಡುಪಿ, ಮಾ.29: ಬಜೆಟ್‌ನಲ್ಲಿ ಘೋಷಣೆಯಾದಂತೆ ಪಿಒಎಸ್ ಯಂತ್ರಗಳನ್ನು ಅಳವಡಿಸಿ ಪ್ರಾಯೋಗಿಕವಾಗಿ ಪಡಿತರ ವಿತರಣೆ ಮಾಡುವ ಬಗ್ಗೆ ಕ್ರಮ ವಹಿಸಲು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಆದ್ಯತಾ ಕುಟುಂಬದವರ ಕಾರ್ಡುಗಳಿಗೆ ಜೋಡಿಸಬೇಕಾಗಿದೆ. ಈಗಾಗಲೇ ಶೇ.76ರಷ್ಟು ಅಂದರೆ 1,23,513 ಕಾರ್ಡುಗಳ ಆಧಾರ್ ಜೋಡಣೆ ಮುಕ್ತಾಯಗೊಂಡಿದ್ದು, ಜಿಲ್ಲೆಯ ಕೆಲವು ನ್ಯಾಯಬೆಲೆ ಅಂಗಡಿಗಳ ಮೂಲಕ ಆಧಾರ ಸಂಗ್ರಹಣೆ ಕುಂಟಿತಗೊಂಡಿದೆ. ಆದ್ದರಿಂದ ಜನರು ನ್ಯಾಯ ಬೆಲೆ ಅಂಗಡಿಗಳಲ್ಲಿ ಹಾಗೂ ತಾಲೂಕು ಕಚೇರಿಗಳಲ್ಲಿ ತಮ್ಮ ಆಧಾರ್ ಸಂಖ್ಯೆ ಯನ್ನು ನೀಡಿ ಸಹಕರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರಿಗೆ ಪ್ರಥಮ ಆದ್ಯತೆ: ಮೀನಾಕ್ಷಿ
ಉಡುಪಿ, ಮಾ.29: ನಗರಸಭಾ ವ್ಯಾಪ್ತಿಯ ಜನತೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪ್ರಥಮ ಆದ್ಯತೆ ನೀಡುವುದಾಗಿ ನಗರಸಭೆಯ ನೂತನ ಅಧ್ಯಕ್ಷೆ ಮೀನಾಕ್ಷಿ ಮಾಧವ ನುಡಿದರು.1997ರಿಂದ ಸತತವಾಗಿ ನಗರಸಭೆಯ ಸದಸ್ಯೆಯಾಗಿರುವ 49ರ ಹರೆಯದ ಗೃಹಿಣಿ ಮೀನಾಕ್ಷಿ ಮಾಧವ ನಗರದ ಒಳಚರಂಡಿ, ಸ್ವಚ್ಛತಾ ಕಾರ್ಯಕ್ರಮಕ್ಕೂ ಹೆಚ್ಚಿನ ಗಮನ ಹರಿಸುವುದಾಗಿ, 30 ತಿಂಗಳ ಆಡಳಿತಾವಧಿಯಲ್ಲಿ ಕಣ್ಣಿಗೆ ಕಾಣುವಂತಹ ಶಾಶ್ವತ ಕಾಮಗಾರಿಗೆ ವಿಶೇಷ ಮುತುವರ್ಜಿ ನೀಡುವುದಾಗಿ ನುಡಿದರು.ಕೊಡವೂರು ವಾರ್ಡ್‌ನಿಂದ ಮೂರು ಬಾರಿ ಸದಸ್ಯೆಯಾಗಿ ಆಯ್ಕೆಯಾಗಿದ್ದರೆ, 2002ರಲ್ಲಿ ನಾಮನಿರ್ದೇಶಿತ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾಗಿ ಅವರು ನುಡಿದರು. ಎಸ್ಸೆಸೆಲ್ಸಿ ತನಕ ಓದಿರುವ ಮೀನಾಕ್ಷಿ ನವೋದಯ ಗುಂಪಿನ ಮೇಲ್ವಿಚಾರಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.27ರ ಹರೆಯ ಬಿ.ಎ. ಎಲ್‌ಎಲ್‌ಬಿ ಪದವೀಧರೆ ಸಂಧ್ಯಾ ಕುಮಾರಿಗೆ ಪದವಿ ಮುಗಿಯುತ್ತಿದ್ದಂತೆ ರಾಜಕೀಯಕ್ಕೆ ಪ್ರವೇಶಿಸಿದ್ದು, ಇದೀಗ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಐದು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಅವರು ಅಧ್ಯಕ್ಷರೊಂದಿಗೆ ಕೈಜೋಡಿಸಿ ನಗರಸಭೆಗೆ ಉತ್ತಮ ಆಡಳಿತ ನೀಡಲು ಶ್ರಮಿಸುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News