ಬಂಟ್ವಾಳ ಪುರಸಭೆ: ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ: ನೂತನ ಅಧ್ಯಕ್ಷ ಭರವಸೆ

Update: 2016-03-29 18:20 GMT

ಬಂಟ್ವಾಳ, ಮಾ. 29: ನೂತನ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ರಾಮಕೃಷ್ಣ ಆಳ್ವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪುರಸಭೆ ಸಭಾಂಗಣದಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯು ಕುಡಿಯುವ ನೀರಿನ ಕುರಿತು ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಯಿತು. ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಮೂಲಗಳಿದ್ದರೂ ಕೂಡಾ ಜನರಿಗೆ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಅಧಿಕಾರಿಗಳು ಹಾಗೂ ಆಡಳಿತ ವಿಫಲವಾಗಿದೆ ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಮುನೀಶ್ ಅಲಿ ವಿಷಯ ಪ್ರಸ್ತಾಪಿಸಿ, ಪುರಸಭೆ ವ್ಯಾಪ್ತಿಯ ಎತ್ತರ ಪ್ರದೇಶಗಳಿಗಾದರೂ ಸ್ವಲ್ಪ ಮಟ್ಟಿಗೆ ನೀರು ಪೂರೈಕೆಯಾಗುತ್ತಿದೆ. ಆದರೆ ತಗ್ಗು ಪ್ರದೇಶವಾದ ಕೆಳಗಿನ ಪೇಟೆಗೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವುದು ವಿಪರ್ಯಾಸ ಎಂದು ಗಮನ ಸೆಳೆದರು. ಇದಕ್ಕೆ ಧ್ವನಿ ಗೂಡಿಸಿದ ವಿಪಕ್ಷ ನಾಯಕ ಗೋವಿಂದ ಪ್ರಭು, ಮೂರು ತಿಂಗಳಿನಿಂದ ಪುರಸಭೆ ವ್ಯಾಪ್ತಿಯ ವಿವಿಧೆಡೆ ನೀರಿನ ಸಮಸ್ಯೆ ತಲೆದೋರಿದರೂ ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ವಿಫಲವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಭಟ್ ಹಾಗೂ ಅಧ್ಯಕ್ಷ ರಾಮಕೃಷ್ಣ ಆಳ್ವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗುವುದು. ಕೆಳಗಿನ ಪೇಟೆಗೆಯಲ್ಲಿ ನೀರಿಗೆ ಸಂಬಂಧಿಸಿದ ಕಾಮಗಾರಿಯನ್ನು ಬುಧವಾರದಿಂದಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಇಂಜಿನಿಯರ್ ಡೊಮೇನಿಕ್ ಡಿಮೆಲೊ ಮಾತನಾಡಿ, ಈಗಾಗಲೇ ತಯಾರಿಸಿದ ಎಲ್ಲ ನೀರಿನ ಕಾಮಗಾರಿಗಳನ್ನು ಶೇ. 100ರಷ್ಟು ಪೂರ್ಣಗೊಳಿಸಲಾಗಿದೆ ಎಂದರು. ಆವಾಗ ಸದಸ್ಯ ಗೋವಿಂದ ಪ್ರಭು ಈ ಬಗ್ಗೆ ದಾಖಲೆ ಒದಗಿಸುವಂತೆ ಪಟ್ಟು ಹಿಡಿದರು. ಆಗ ಡೊಮೇನಿಕ್ ಡಿಮೆಲೊ ‘8 ಲಕ್ಷ ರೂ.ವಿನ ಕಾಮಗಾರಿ ಬಾಕಿ ಉಳಿದಿದೆ’ ಎಂದಾಗ ಕುಪಿತರಾದ ಗೋವಿಂದ ಪ್ರಭು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಿರಾ? ಎಂದು ತರಾಟೆಗೆ ತೆಗೆದುಕೊಂಡರು. *ರಾಜೀನಾಮೆಗೆ ಮುಂದಾದ ಪ್ರಭು: ಅಮ್ಟಾಡಿ ಗ್ರಾಮಕ್ಕೆ ಪುರಸಭೆಯಿಂದ ನೀರು ಪೂರೈಕೆಯಾಗುತ್ತಿದ್ದರೂ ಗ್ರಾಪಂನಿಂದ ಯಾವುದೇ ನೀರಿನ ಕರ ಪುರಸಭೆಗೆ ಪಾವತಿಯಾಗುತ್ತಿಲ್ಲ. ಕರ ಪಾವತಿಸುವಂತೆ ಪಂಚಾಯತ್‌ಗೆ ಪತ್ರ ಬರೆಯಲು ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪತ್ರ ರವಾನೆಯಾಗಿದೆಯಾ? ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು.

ಈ ಸಂದರ್ಭ ಮುಖ್ಯಾಧಿಕಾರಿ ಈಗಾಗಲೇ ಪತ್ರ ರವಾನಿಸಲಾಗಿದೆ ಎಂದರು. ಆದರೆ, ಪತ್ರದ ಪ್ರತಿಯನ್ನು ಸಭೆಯಲ್ಲಿ ಪರಿಶೀಲಿಸಿದಾಗ ಮಾ.29ರಂದು ರವಾನೆಯಾಗಿರುವುದು ಬೆಳಕಿಗೆ ಬಂತು. ಇದರಿಂದ ಕುಪಿತರಾದ ಪ್ರಭು, ಅಧಿಕಾರಿಗಳು ಸದಸ್ಯರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಇದು ಚುನಾಯಿತ ಸದಸ್ಯರಿಗೆ ಮಾಡುವ ಅವಮಾನ ಎಂದು ಕಿಡಿಕಾರಿದರಲ್ಲದೆ ತನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾದರು. ಅಧ್ಯಕ್ಷ ರಾಮಕೃಷ್ಣ ಆಳ್ವ ಮಧ್ಯೆ ಪ್ರವೇಶಿಸಿ ಮುಂದಿನ ದಿನದಲ್ಲಿ ಈ ರೀತಿ ಎಡವಟ್ಟು ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎನ್ನುತ್ತಾ ಪರಿಸ್ಥಿತಿ ತಿಳಿಗೊಳಿಸಿದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಗಂಗಾಧರ, ಜಗದೀಶ್ ಕುಂದರ್, ಬಿ.ಮೋಹನ್, ಭಾಸ್ಕರ್ ಟೈಲರ್, ವಸಂತಿ ಚಂದಪ್ಪ, ಸುಗುಣ ಕಿಣಿ, ವಾಸು ಪೂಜಾರಿ, ಯಾಸ್ಮೀನ್, ಮುಮ್ತಾಝ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ‘ನೀನು ಯಾರು? ನೀನು ಯಾರು?’

ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ, ಹುದ್ದೆ ಕೈ ತಪ್ಪಿದ ಬಳಿಕ ಪಕ್ಷದ ಮುಖಂಡರ ವಿರುದ್ಧ ಮುನಿಸಿಕೊಂಡಿರುವ ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ವಿಪಕ್ಷ ಸದಸ್ಯರ ಸಾಲಿನಲ್ಲಿ ಕುಳಿತು ವಿರೋಧ ಪಕ್ಷದ ಸದಸ್ಯರಂತೆ ಚರ್ಚಿಸಿ ಸಭೆಯ ಗಮನ ಸೆಳೆದರು. ನೀರಿನ ಸಮಸ್ಯೆಗೆ ಸಂಬಂಧಿಸಿದ ಚರ್ಚೆಯ ವೇಳೆ ಸದಸ್ಯ ಮುಹಮ್ಮದ್ ಇಕ್ಬಾಲ್, ಅಧ್ಯಕ್ಷರ ಪರ ಮಾತನಾಡಿದಾಗ ಮಧ್ಯ ಪ್ರವೇಶಿಸಿದ ಸದಾಶಿವ ಬಂಗೇರ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಸಾಂವಿಧಾನಿಕ ಪದ ಬಳಸಿದರು. ಈ ವೇಳೆ ಬಂಗೇರ ಪರ ಸದಸ್ಯೆ ಚಂಚಲಾಕ್ಷಿ ನಿಂತರೆ, ಇಕ್ಬಾಲ್ ಪರ ಜಸಿಂತಾ ಹಾಗೂ ಮುಹಮ್ಮದ್ ಶರೀಫ್ ವಾದಿಸಿದರು. ಆಗ ಚಂಚಲಾಕ್ಷಿ, ಜಸಿಂತಾ, ಶರೀಫ್ ಮಧ್ಯೆ ಮಾತಿನ ಚಕಮಕಿ ನಡೆದು ‘ನೀನು ಯಾರು...? ನೀನು ಯಾರು..?’ ಎಂಬ ಪದ ಬಳಕೆಯಾಯ್ತು. ಅಧ್ಯಕ್ಷ ರಾಮಕೃಷ್ಣ ಆಳ್ವ ಮಧ್ಯ ಪ್ರವೇಶಿಸಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗೆ ಆಸ್ಪದವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿ ಚರ್ಚೆಗೆ ತೆರೆ ಎಳೆದರು. ಸ್ವೀಕರಿಸುವುದಿಲ್ಲ: ಬಂಟ್ವಾಳ ಪುರಸಭೆ ಭ್ರಷ್ಟಾಚಾರದಿಂದ ಕೂಡಿದ್ದು, ಭ್ರಷ್ಟಾಚಾರ ಮುಕ್ತ ಪುರಸಭೆಯಾಗುವ ತನಕ ಗೌರವ ಧನ, ಚಾ, ಮತ್ತು ಊಟ ಸ್ವೀಕರಿಸುವುದಿಲ್ಲ ಎಂದು ಸದಸ್ಯ ಸದಾಶಿವ ಬಂಗೇರ ಹಾಜರಿ ಪುಸ್ತಕದಲ್ಲಿ ಉಲ್ಲೇಖಿಸುವ ಮೂಲಕ ಅಚ್ಚರಿ ಮೂಡಿಸಿದರಲ್ಲದೆ ಸಭೆಯ ಅರ್ಧದಿಂದಲೇ ಎದ್ದು ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News