ಡಿಜಿಟಲ್ ತಂತ್ರಜ್ಞಾನದಿಂದ ಶಿಕ್ಷಣ ಕ್ಷೇತ್ರದ ಮೇಲೆ ಮಹತ್ತರ ಪ್ರಭಾವ : ಡಾ. ವಿ.ಕೆ. ಸಾರಸ್ವತ್

Update: 2016-03-30 10:57 GMT

ಮಂಗಳೂರು, ಮಾ. 29: ಡಿಜಿಟಲ್ ತಂತ್ರಜ್ಞಾನವು ಇಂದು ಶಿಕ್ಷಣ, ಆರೋಗ್ಯ, ಕೃಷಿ, ಉತ್ಪಾದನೆ, ಸಂಚಾರ ಮಾತ್ರವಲ್ಲದೆ ಸೇವೆಗಳ ವಿತರಣೆಯಲ್ಲೂ ಹಾಸುಹೊಕ್ಕಿರುವುದು ಮಾತ್ರವಲ್ಲದೆ, ಶಿಕ್ಷಣದ ಎಲ್ಲಾ ಕ್ಷೇತ್ರಗಳು ಹಾಗೂ ವಿಧಗಳಲ್ಲೂ ಇದು ಮಹತ್ತರವಾದ ಪ್ರಭಾವವನ್ನು ಬೀರುತ್ತಿದೆ ಎಂದು ಭಾರತ ಸರಕಾರದ ನೀತಿ ಆಯೋಗದ ಸದಸ್ಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ರಕ್ಷಣೆ)ಯ ಮಾಜಿ ಮಹಾ ನಿರ್ದೇಶಕ ಡಾ. ವಿಜಯ್ ಕುಮಾರ್ ಸಾರಸ್ವತ್ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆದ 34ನೆ ಘಟಿಕೋತ್ಸವ ಭಾಷಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.ಶಿಕ್ಷಣ ಕ್ಷೇತ್ರದಲ್ಲಿಂದು ಡಿಜಿಟಲ್ ಇನ್‌ಫೋರ್ಮೇಶನ್, ಕಂಪ್ಯೂಟರ್, ಕಮ್ಯುನಿಕೇಶನ್ ಅತೀ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ಮಹಿಳೆಯರು ಶಿಕ್ಷಣದ ಈ ಡಿಜಿಟಲ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಮಾತ್ರವಲ್ಲದೆ ಉನ್ನತ ಶಿಕ್ಷಣದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಕೂಡಾ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಡಿಜಿಟಲ್ ಇಂಡಿಯಾ ಕಾರ್ಯಕ್ರಮ’ ಮಹತ್ವದ್ದಾಗಿದೆ ಎಂದು ಡಾ. ಸಾರಸ್ವತ್ ವಿಶ್ಲೇಷಿಸಿದರು.

ಡಿಜಿಟಲ್ ತಂತ್ರಜ್ಞಾನದ ಈ ಕ್ರಾಂತಿಯ ನಡುವೆಯೂ, ತಳ ಮಟ್ಟದ ಅಭಿವೃದ್ಧಿಯಲ್ಲಿ ಪ್ರಾಥಮಿಕ ಅಗತ್ಯಗಳನ್ನು ಪರಿಗಣಿಸದಿದ್ದಲ್ಲಿ ಜನತೆಯ ಒಳಿತನ್ನು ಕಡೆಗಣಿಸಿದಂಗಾಗಬಹುದು. ಇದೇ ವೇಳೆ ಉನ್ನತ ಮಟ್ಟದ ಡಿಜಿಟೈಸೇಶನ್ ಸಾಮಾಜಿಕ ನ್ಯಾಯ, ಮಾನವ ಅಭಿವೃದ್ಧಿ ಮತ್ತು ಅಗತ್ಯ ಸೇವೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಲಿದೆ. ಈ ಉದ್ದೇಶವನ್ನು ಪೂರೈಸಬೇಕಾದರೆ ಡಿಜಿಟೈಸೇಶನ್, ಸಾಂಪ್ರದಾಯಿಕ ಆರ್ಥಿಕತೆ ಮತ್ತು ಸಾಮಾಜಿಕ ಅಭಿವೃದ್ಧಿ ನೀತಿಗಳಿಗೆ ಪೂರಕವಾಗಿರಬೇಕು ಎಂದು ಅವರು ಸಲಹೆ ನೀಡಿದರು.

‘ಡಿಜಿಟಲ್ ಇಂಡಿಯಾ’ವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಡಿ 2018ರ ಅಂತ್ಯಕ್ಕೆ ಭಾರತವು ‘ಸುಸಜ್ಜಿತ ಡಿಜಿಟಲ್ ಆರ್ಥಿಕ’ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಅಂದಾಜಿನ ಪ್ರಕಾರ ಸಮಗ್ರ ಗ್ರಾಮೀಣ ಭಾರತವನ್ನು ಒಳಗೊಂಡು 2,50,000 ಗ್ರಾಮ ಪಂಚಾಯತ್‌ಗಳು ಬ್ರಾಡ್‌ಬ್ಯಾಂಡ್ ಸೌಕರ್ಯವನ್ನು ಹೊಂದಲಿವೆ. ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಅಂತರ್ಜಾಲದ ಬಳಕೆ ವೃದ್ದಿಯಾಗಲಿದ್ದು, ಆನ್‌ಲೈನ್ ವೈದ್ಯಕೀಯ ಸಮಾಲೋಚನೆ, ವೈದ್ಯಕೀಯ ದಾಖಲೆಗಳ ಆನ್‌ಲೈನ್ ನಿರ್ವಹಣೆ ಮತ್ತು ಶಿಫಾರಸು ಹೊಂದಿದ ಔಷಧಿಗಳ ಮಾರಾಟ ಕೂಡಾ ಆನ್‌ಲೈನ್‌ನಲ್ಲೇ ನಡೆಯಲಿದೆ. ಇದಲ್ಲದೆ, ರೋಗಿಗಳ ಮಾಹಿತಿಯೂ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ರೈತರು ಕೂಡಾ ತಮಗೆ ಬೇಕಾದ ಸಾಮಗ್ರಿಗಳನ್ನು ಆನ್‌ಲೈನ್‌ನಲ್ಲೇ ಖರೀದಿಸುವ ಮತ್ತು ವಸ್ತುಗಳ ನೈಜ ಬೆಲೆಯನ್ನೂ ಆನ್‌ಲೈನ್‌ನಲ್ಲೇ ಪಡೆಯಲಿದ್ದಾರೆ. ಪಾನ್ ಇಂಡಿಯಾ ನೆಟ್‌ವರ್ಕ್‌ನಿಂದಾಗಿ ತುರ್ತು ಸೇವೆಗಳು ಕೂಡಾ ಸಂಚಾರಿ ರೂಪದಲ್ಲಿ ಲಭ್ಯವಾಗಲಿವೆ. 2019ರೊಳಗೆ 2.5 ಲಕ್ಷ ಗ್ರಾಮಗಳು ದೂರವಾಣಿ ಸಂಪರ್ಕದೊಂದಿಗೆ ಬ್ರಾಡ್‌ಬ್ಯಾಂಡ್  ವ್ಯವಸ್ಥೆಗೊಳಪಡಲಿವೆ. 4,00,000 ಸಾರ್ವಜನಿಕ ಇಂಟರ್‌ನೆಟ್ ಆ್ಯಸೆಸ್ ಪಾಯಿಂಟ್, ಶಾಲೆ- ಕಾಲೇಜುಗಳು ಮತ್ತು ನಾಗರಿಕರಿಗೆ ವೈಫೈ ಹಾಟ್‌ಸ್ಪಾಟ್ಸ್, 1.7 ಕೋಟಿ ನೇರವಾಗಿ ಐಟಿ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯುವ ನಿರೀಕ್ಷೆಯೂ ಈ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ್ದಾಗಿದೆ ಎಂದವರು ಹೇಳಿದರು.

ಪ್ರಸಿದ್ಧ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಬೆಂಗಳೂರಿನ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮತ್ತು ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಉಪಸ್ಥಿತರಿದ್ದರು. ಕುಲಪತಿ ಪ್ರೊಘಿ.ಕೆ.ಭೈರಪ್ಪ, ಕುಲಸಚಿವರಾದ ಪ್ರೊ.ಟಿ.ಡಿ.ಕೆಂಪರಾಜು ಮತ್ತು ಡಾ.ಎ.ಎಂ.ಖಾನ್ ಭಾಗವಹಿಸಿದ್ದರು.

ಪದವಿ ಪ್ರದಾನ ಸಮಾರಂಭದಲ್ಲಿ 55 ಮಂದಿಗೆ ಡಾಕ್ಟರೇಟ್ ಪದವಿ, 39 ಮಂದಿಗೆ ಚಿನ್ನದ ಪದಕ ಮತ್ತು 72 ಮಂದಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಇಕ್ಲಾಸ್ ಅಹಮ್ಮದ್‌ಗೆ ಮರಣೋತ್ತರ ಪಿಎಚ್‌ಡಿ

ನಗರದ ಎಕ್ಕೂರಿನಲ್ಲಿರುವ ಮೀನುಗಾರಿಕೆ ಕಾಲೇಜಿನ ಅಸೋಸಿಯೇಟ್ ಪ್ರೊೆಸರ್ ಆಗಿದ್ದ ಇಕ್ಲಾಸ್ ಅಹಮದ್ ಅವರು ಅನ್ವಯಿಕ ಪ್ರಾಣಿಶಾಸ ವಿಭಾಗದಲ್ಲಿ ಪಿಎಚ್‌ಡಿಗಾಗಿ ಪ್ರಬಂಧ ಮಂಡಿಸಿದ್ದು, ಮಂಗಳೂರು ವಿಶ್ವವಿದ್ಯಾಲಯ ಪ್ರಬಂಧವನ್ನು ಅಂಗೀಕರಿಸಿತ್ತು. ಆದರೆ ಈ ನಡುವೆ ಇಕ್ಲಾಸ್ ಅಹಮ್ಮದ್‌ರವರು ಅಪಘಾತದಿಂದ ಮೃತರಾಗಿದ್ದರು. ಇಂದು ನಡೆದ ಘಟಿಕೋತ್ಸವದಲ್ಲಿ ಅವರಿಗೆ ನೀಡಲಾದ ಪಿಎಚ್‌ಡಿ ಪದವಿಯನ್ನು ಘೋಷಿಸಲಾಯಿತು.

ಎರಡು ಚಿನ್ನದ ಪದಕ

ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ರಾಜೀಶ್ ಕುಮಾರ್ ಟಿ.ವಿ., ಅನ್ವಯಿಕ ಸಸ್ಯಶಾಸ ವಿಭಾಗದ ಹೀನಾ ಖದೀಜಾ, ಕೈಗಾರಿಕಾ ರಸಾಯನಶಾಸ ವಿಭಾಗದ ಮಾಧವ ಜಿ., ಭೌತಶಾಸ ವಿಭಾಗದ ನಮೃತಾ ಜಿ.ಎನ್., ಮಾನವ ಪ್ರಜ್ಞೆ ಮತ್ತು ಯೋಗಶಾಸ ವಿಭಾಗದ ದೀಪಾ ಟಿ.ಎಸ್., ಪುತ್ತೂರು ಶ್ರೀವಿವೇಕಾನಂದ ಕಾಲೇಜಿನ ರಾಜ್ಯಶ್ರೀ ಅಡ್ಯಂತ್ತಾಯ ಬಿ., ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ ವಿಭಾಗದ ವಿದ್ಯಾರ್ಥಿನಿ ಬಾಲಶ್ರೀ ಎಸ್.ವಿ., ಮೂಡುಬಿದ್ರಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿನಿ ಕೀರ್ತನಾ ಬೋಪಣ್ಣ ಸಿ. ತಲಾ ಎರಡು ಚಿನ್ನದ ಪದಕ ಪಡೆದುಕೊಂಡರು.

ಪ್ರಮಾಣ ಪತ್ರದಲ್ಲಿ ತಪ್ಪು

ಈ ಬಾರಿಯೂ ಪದವಿ ಪ್ರಮಾಣ ಪತ್ರದಲ್ಲಿ ತಪ್ಪುಗಳು ನುಸುಳಿವೆ. ಬಿಎಸ್‌ಸಿ ಆನಿಮೇಶನ್ ಆ್ಯಂಡ್ ವಿಷ್ಯುವಲ್ ಎೆಕ್ಟ್ಸ್ ಬದಲು ಬಿಎಸ್‌ಸಿ ಆನಿಮೇಶನ್ ಆ್ಯಂಡ್ ವಿಷ್ಯುವಲ್ ಆರ್ಟ್ಸ್ ಎಂದಾಗಿದೆ.

ಅಮ್ಮನ ಕನಸು ನನಸಾಗಿಸುವಾಸೆ: ಚೈತ್ರಾ

‘‘ನಾನು ನಾಲ್ಕನೇ ತರಗತಿಯಲ್ಲಿರುವಾಗಲೇ ತಂದೆ ತೀರಿಕೊಂಡಾಗ ಅಮ್ಮ ಕೂಲಿ ಕೆಲಸ ಮಾಡಿ ಅಕ್ಕ ಮತ್ತು ನನ್ನನ್ನು ಓದಿಸಿದರು. ಅಕ್ಕ ಚಿತ್ರಾ ಈಗ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಅಮ್ಮನಿಗೆ ನೆರವಾಗುತ್ತಾ, ನನ್ನ ಓದಿಗೆ ಅಮ್ಮನ ಜತೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಾನು ನನ್ನ ಅಮ್ಮನ ಕನಸಿನಂತೆ ಉಪನ್ಯಾಸಕಿ ಆಗಬೇಕೆಂಬ ಆಸೆ ಹೊಂದಿದ್ದೇನೆ. ಬಿಎಡ್ ಮಾಡಿ ಉಪನ್ಯಾಸಕಿಯಾಗುವ ಜತೆ ಪಿಎಚ್‌ಡಿ ಮಾಡುವ ಗುರಿಯೂ ಇದೆ. ಅಮ್ಮ ನನಗಾಗಿ ಪಟ್ಟ ಕಷ್ಟ, ಶ್ರಮಕ್ಕೆ ಪ್ರತಿಯಾಗಿ ನಾನಿಂದು ಈ ಗೌರವ ಪಡೆಯಲು ಸಾಧ್ಯವಾಗಿದೆ’’.

ಇದು ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪ್ರದಾನ ಸಮಾರಂಭದಲ್ಲಿ ಸ್ನಾತಕೋತ್ತರ ಇತಿಹಾಸ ವಿಭಾಗದಲ್ಲಿ ಎರಡು ಚಿನ್ನದ ಪದಕ ಹಾಗೂ ಐದು ನಗದು ಬಹುಮಾನಗಳನ್ನು ಪಡೆದ ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಅವರ ಮನದಾಳದ ಮಾತು.ಮಲ್ಪೆ ನಿವಾಸಿಯಾಗಿರುವ ಚೈತ್ರಾ ಆದಿದ್ರಾವಿಡ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿ.

ಮಹಿಳಾ ವಿಷಯದಲ್ಲಿ ಪಿಎಚ್‌ಡಿ ಮಾಡುವ ಗುರಿ:ಅಂಬಿಕಾ

‘‘ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮ ಹಾಗೂ ದೊಡ್ಡಪ್ಪನ ಆಶ್ರಯದಲ್ಲಿ ಬೆಳೆದವಳು. ತನ್ನ ಮಕ್ಕಳಂತೇ ನನ್ನನ್ನು ಅವರು ಸಾಕಿ ಸಲಹಿದ್ದಾರೆ. ಪ್ರಸ್ತುತ ಸಂತೆಕಟ್ಟೆ ಮಿಲಾಗ್ರಿಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದೇನೆ. ಪದವಿ ಬಳಿಕ ಬಿಎಡ್ ಮಾಡಿ ಬಳಿಕ ವಿವಾಹವಾಗಿ ಪತಿಯ ಪ್ರೋತ್ಸಾಹದೊಂದಿಗೆ ಸ್ನಾತಕೋತ್ತರ ಪದವಿ ಮಾಡಿದ್ದೇನೆ. ಇನ್ನು ಎರಡು ವರ್ಷಗಳ ಬಳಿಕ ಮಹಿಳಾ ವಿಷಯದಲ್ಲಿ ಪಿಎಚ್‌ಡಿ ಮಾಡುವ ಗುರಿ ಹೊಂದಿದ್ದೇನೆ’’ ಎಂದು ಉಡುಪಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ಅಂಬಿಕಾರ ಮಾತು.ಕನ್ನಡ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಸಹಿತ ಒಂದು ಚಿನ್ನದ ಪದಕ ಮತ್ತು ಐದು ನಗದು ಬಹುಮಾನವನ್ನು ಇವರು ಪಡೆದುಕೊಂಡಿದ್ದಾರೆ.

ಜನರ ವಿಶ್ವವಿದ್ಯಾನಿಲಯದಿಂದ ದೊರೆತ ಪದವಿ ಮಹತ್ವದ್ದು: ಎಸ್.ಎಲ್. ಭೈರಪ್ಪ

ಮಂಗಳೂರು, ಮಾ. 30: ಹಲವಾರು ಕ್ಷೇತ್ರಗಳಲ್ಲಿನ ಸಂಶೋಧನೆಗಾಗಿ ಹಲವಾರು ಪದವಿ, ಪುರಸ್ಕಾರಗಳು ಲಭ್ಯವಾಗಿವೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ಆಡಳಿತ, ಸಾಹಿತ್ಯ ಸಹಿತ ನಾನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜನರ ವಿಶ್ವವಿದ್ಯಾನಿಲಯವಾಗಿ ಗುರುತಿಸಿಕೊಂಡಿರುವ ಮಂಗಳೂರು ವಿವಿಯಿಂದ ದೊರಕಿದ ಈ ಗೌರವ ಡಾಕ್ಟರೇಟ್ ಅತ್ಯಂತ ಮಹತ್ವದ್ದು ಎಂದು ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅಭಿಪ್ರಾಯಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಸಂಸತ ಹಂಚಿಕೊಂಡ ಅವರು, ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಲೇಖಕರ ನಂಟಿದೆ. ಸೇಡಿಯಾಪು ಕೃಷ್ಣಭಟ್, ಗೋವಿಂದ ಪೈಯಂತಹ ಮಹಾನ್ ಸಾಹಿತಿಗಳು ಹುಟ್ಟಿದ ನಾಡಿದು. ಇಲ್ಲಿ ವಿದ್ವಾನ್‌ಗಳ ಸಾಂದ್ರತೆ ಅಧಿಕ. ಯಕ್ಷಗಾನ ಸಂಗೀತ, ಕೃಷಿಯನ್ನು ವಿಜ್ಞಾನವಾಗಿ ಮೈಗೂಡಿಸಿಕೊಂಡ ಜಿಲ್ಲೆ ಇದು. ಲೇಖಕನಾಗಿ ಮಾತನಾಡುವುದಾದರೆ ನನ್ನ ಯಾವುದೇ ಪುಸ್ತಕ ಹೊರಬಂದಾಗ ಅತೀ ಹೆಚ್ಚು ಮಾರಾಟವಾಗುವ ಜಿಲ್ಲೆಯೂ ದಕ್ಷಿಣ ಕನ್ನಡ ಎಂಬ ಅಭಿಮಾನ ನನಗಿದೆ. ಹಾಗಾಗಿ ಇಲ್ಲಿನ ವಿಶ್ವವಿದ್ಯಾನಿಲಯದಿಂದ ಸಿಕ್ಕಿದ ಗೌರ ನನಗೆ ವಿಶೇಷ ಎಂದು ಹೇಳಿದರು.

 

ಗೌರವ ಡಾಕ್ಟರೇಟ್ ಮಹತ್ವದ್ದು

ಸಾಮಾನ್ಯ ಪಿಎಚ್‌ಡಿಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ನೀಡಲಾಡುವ ಗೌರವ ಡಾಕ್ಟರೇಟ್ ಶೈಕ್ಷಣಿಕವಾಗಿ ಸಿಗುವ ಡಾಕ್ಟರೇಟರ್‌ಗಿಂತ ಭಿನ್ನ ಹಾಗೂ ಮಹತ್ವದ್ದು ಎಂದು ಡಾ.ಸಿ.ಎನ್.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ಜಯದೇವ ಸಂಸ್ಥೆಯಿಂದ ಪ್ರತಿ ವರ್ಷ 21 ಮಂದಿ ವೈದ್ಯರು ಹೃದ್ರೋಗಕ್ಕೆ ಸಂಬಂಧಿಸಿ ಸೂಪರ್ ಸ್ಪೆಷಾಲಿಟಿ ಪದವಿಯನ್ನು ಪಡೆಯುವ ಮೂಲಕ ಹೃದ್ರೋಗ ತಜ್ಞರ ಕೊರತೆಯನ್ನು ನೀಗಿಸಲು ಪ್ರಯತ್ನಿಸಲಾಗುತ್ತಿದೆ. ಮೊದಲು ಚಿಕಿತ್ಸೆ, ಬಳಿಕ ಪಾವತಿ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಜಯದೇವ ಸಂಸ್ಥೆಯ ಎಲ್ಲ ಸಿಬ್ಬಂದಿಗಳಿಗೆ ಪ್ರತಿ ವರ್ಷ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ವಿದೇಶಕ್ಕೆ ಪ್ರತಿಭಾ ಪಲಾಯವನ್ನು ತಪ್ಪಿಸಿ ದೇಶದಲ್ಲೇ ಸೇವೆ ಸಲ್ಲಿಸುವ ಮೂಲಕ ಇಲ್ಲಿನ ಜನತೆಗೆ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ಕಾಳಜಿ ವಹಿಸಲಾಗುತ್ತಿದೆ ಎಂದು ಅಭಿಪ್ರಾಯಿಸಿದರು.

ಸಾಮಾಜಿಕ ಸೇವೆಗೆ ದೊರೆತ ಮನ್ನಣೆ: ಎ.ಜೆ. ಶೆಟ್ಟಿ

ಕಳೆದ 45 ವರ್ಷದಿಂದ ಸಾರ್ವಜನಿಕ ಸೇವೆ ಸಲ್ಲಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ತಾನು ನೆರವಾಗುತ್ತಿರುವುದಕ್ಕೆ ಸಂದ ಗೌರವ ಇದಾಗಿದೆ ಎಂದು ಎ.ಜೆ.ಶೆಟ್ಟಿ ತಿಳಿಸಿದರು.

ಉಚಿತ ಚಿಕಿತ್ಸೆ, ವಿಕಲಚೇತನರಿಗೆ ಕೃತಕ ಅಂಗ, ಸಂಘ ಸಂಸ್ಥೆ, ದೇವಸ್ಥಾನ ಸಹಿತ ನಾನಾ ಕ್ಷೇತ್ರದಲ್ಲಿ ತನ್ನಿಂದಾದ ರೀತಿಯಲ್ಲಿ ನೆರವಾಗುತ್ತಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News