ಭೂಮಾಲಕರ ಅಕ್ರಮ ವಶದಲ್ಲಿದ್ದ ದಲಿತರ ಜಮೀನು ಕಂದಾಯ ಇಲಾಖೆ ಸುಪರ್ದಿಗೆ

Update: 2016-03-30 18:41 GMT

ಬೆಳ್ತಂಗಡಿ, ಮಾ.30: ತಾಲೂಕಿನ ಕಡಿರುದ್ಯಾವರ ಗ್ರಾಮದ ಕಿಲ್ಲೂರು ಕೊಪ್ಪದ ಗುಂಡಿಯಲ್ಲಿ ಭೂಮಾಲಕರ ಅಕ್ರಮ ವಶವಾಗಿದ್ದ ದಲಿತರಿಗೆ ಮೀಸಲಿರಿಸಲಾಗಿದ್ದ ಡಿಸಿ ಮನ್ನಾ ಜಮೀನನ್ನು ಕಂದಾಯ ಇಲಾಖೆ ಬುಧವಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಬೆಳ್ತಂಗಡಿಯ ಕಂದಾಯ ನಿರೀಕ್ಷಕ ರವಿಕುಮಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಾಯದೊಂದಿಗೆ ಸರ್ವೇ ನಡೆಸಿದರು. ಕಡಿರುದ್ಯಾವರದಲ್ಲಿ 8.71 ಎಕ್ರೆ ಡಿಸಿ ಮನ್ನಾ ಜಮೀನಿದ್ದು, ಇದರಲ್ಲಿ 2.5 ಎಕ್ರೆ ಜಮೀನನ್ನು ಮನೋಜ್, ಒಂದು ಎಕ್ರೆ ಜಮೀನನ್ನು ಅಬ್ರಹಾಂ ಹಾಗೂ ಎರಡು ಎಕ್ರೆ ಜಮೀನನ್ನು ಶಶಿಧರ ರಾವ್ ಎಂಬವರು ಅತಿಕ್ರಮಣ ಮಾಡಿರು ವುದು ಸರ್ವೇಯಲ್ಲಿ ಸ್ಪಷ್ಟಗೊಂಡಿತ್ತು. ಇದರಲ್ಲಿ ಮನೋಜ್ ಎಂಬವರ ಬಳಿ ಇದ್ದ ಒಂದು ಎಕ್ರೆ ಜಮೀನನ್ನು ಬುಧವಾರ ಕಂದಾಯ ಇಲಾಖೆಯ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಉಳಿದ ಜಮೀನಿನಲ್ಲಿ ಅತಿಕ್ರಮಣಕಾರರು ಕೃಷಿ ಮಾಡಿಕೊಂಡಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ. ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಸೋಮವಾರ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಡಿಸಿ ಮನ್ನಾ ಜಮೀನಿನ ಅತಿಕ್ರಮಣದ ಬಗ್ಗೆ ವಿಸ್ತೃತವಾದ ಚರ್ಚೆ ನಡೆದಿತ್ತು. ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಇದೀಗ ಮೊದಲ ಬಾರಿಗೆ ಡಿಸಿ ಮನ್ನಾ ಜಮೀನು ಅತಿಕ್ರಮಣಕಾರರ ತೆರವಿಗೆ ತಾಲೂಕು ಆಡಳಿತ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News