ಕನ್ನಡದ ಜೊತೆಗೆ ಇಂಗ್ಲಿಷ್‌ಗೂ ಪ್ರಾಶಸ್ತ್ಯ: ನಕ್ಸಲ್‌ಪೀಡಿತ ಮಾಳದಲ್ಲಿ ಹೊಸ ಪ್ರಯತ್ನ
ಕಾರ್ಕಳ, ಮಾ.30: ಪಶ್ಚಿಮಘಟ್ಟದ ತಪ್ಪಲಿನಲ್ಲಿ ಪ್ರಕೃತಿ ರಮಣೀಯವಾದ ಪ್ರದೇಶವೇ ಮಾಳ. ತೀರಾ ಗ್ರಾಮೀಣ ಪ್ರದೇಶವಾದರೂ, ಆಧುನಿಕತೆಯ ಬದಲಾವಣೆಗಳಿಗೆ ಒಗ್ಗಿಕೊಂಡು ಸಾಗಿದ ಈ ಪ್ರದೇಶ ಎಲ್ಲರ ಗಮನಸೆಳೆದಿದೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಿದ ಇಲ್ಲಿನ ಪ್ರಾಥಮಿಕ ಶಾಲೆಯ ಹೆಸರು ಎಲ್ಲರಿಗೂ ಚಿರಪರಿಚಿತ. ಕನ್ನಡ ಮಾಧ್ಯಮದ ಜೊತೆ ಇಂಗ್ಲಿಷ್‌ಗೂ ಸಮಾನ ಅವಕಾಶ ನೀಡಬೇಕೆನ್ನುವ ಉದ್ದೇಶದಿಂದ ನಕ್ಸಲ್ ಪೀಡಿತ ಮಾಳ ಗ್ರಾಮದ ಗುರುಕುಲ ಅನುದಾನಿತ ಶಾಲೆಯಲ್ಲಿ ಹೊಸ ಪ್ರಯೋಗ ಆರಂಭಗೊಂಡಿದ್ದಲ್ಲದೆ, ಯಶಸ್ಸನ್ನು ಸಾಧಿಸಿದೆ.
ಕನ್ನಡದ ಜೊತೆಯಾಗಿ ಇಂಗ್ಲಿ ಷನ್ನು ಕೂಡಾ ಇಲ್ಲಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸ್ಪರ್ಧಾತ್ಮಕ ದಿನಗಳಲ್ಲಿ ನಾವೇನು ಕಡಿಮೆ ಇಲ್ಲ ಎನ್ನುವ ಹಂತದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಬೆಳೆಯುತ್ತಿದ್ದಾರೆ. ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸು ವಂತಾಗಿದೆ. ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿ ಯುತ್ತಿದ್ದು, ಅದನ್ನು ಸರಿದೂಗಿಸಬೇಕಾದರೆ ವಿನೂತನ ಪ್ರಯೋಗಗಳು ಅನಿವಾರ್ಯ. ಅದಕ್ಕಾಗಿ ಅಲ್ಲಿನ ಶಾಲಾಭಿ ವೃದ್ಧಿ ಸಮಿತಿ ಹಾಗೂ ಶಿಕ್ಷಕರು ಸೇರಿಕೊಂಡು ಶಾಲಾಭಿಮಾನಿಗಳ ಸಹಕಾರದಿಂದ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಒಂದನೆ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯ ಜೊತೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸಿ, ಶಿಕ್ಷಣ ನೀಡುತ್ತಿದ್ದಾರೆ.
ಈ ಶಾಲೆಯಲ್ಲಿ ಏಳು ತರಗತಿಗಳಿದ್ದು, ಇಬ್ಬರು ಸರಕಾರಿ ಹಾಗೂ ಐದು ಜನ ಗೌರವ ಶಿಕ್ಷಕರಿದ್ದಾರೆ. 70 ಹುಡುಗರು- 53 ಹುಡುಗಿಯರು ಸೇರಿ 127 ವಿದ್ಯಾರ್ಥಿಗಳಿದ್ದಾರೆ. ಶಾಲಾಭಿವೃದ್ಧಿ ಸಮಿತಿ, ಮಕ್ಕಳ ಪೋಷಕರು ಹಾಗೂ ಶಿಕ್ಷಕರ ಪ್ರಯತ್ನದಿಂದ ಈ ಯಶಸ್ಸು ಸಾಧ್ಯವಾಗಿದೆ ಎನ್ನುತ್ತಾರೆ ರಾಷ್ಟ್ರಪ್ರಶಸ್ತಿ ವಿಜೇತೆ ಮುಖ್ಯ ಶಿಕ್ಷಕಿ ವಸಂತಿ ಜೋಷಿ
ರಾಷ್ಟ್ರಪ್ರಶಸ್ತಿ ಗರಿ: ತೀರಾ ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕಿ ವಸಂತಿ ಜೋಷಿ ಅವರಿಗೆ 2015-16ನೆ ಸಾಲಿನ ರಾಷ್ಟ್ರಪ್ರಶಸ್ತಿ ದೊರೆತಿದ್ದು, ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸುವ ಮೂಲಕ ಗ್ರಾಮೀಣ ಮಟ್ಟದ ಈ ಪ್ರಾಥಮಿಕ ಶಾಲೆಯು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.
ಸೌಲಭ್ಯಗಳು
ಒಂದನೆ ತರಗತಿಯಿಂದಲೇ ಇಂಗ್ಲಿಷ್ ಕಲಿಕೆ
ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ಶಿಕ್ಷಕಿ.
ಉಚಿತ ಪಠ್ಯಪುಸ್ತಕ.
ದಾನಿಗಳ ನೆರವಿನಿಂದ ಬ್ಯಾಗ್ ವಿತರಣೆ.
ಸ್ಮಾರ್ಟ್ ಬೋರ್ಡ್(ಡಿಜೆ ಮೂಲಕ ಪ್ರಾತ್ಯಕ್ಷಿಕೆ)
ಕಂಪ್ಯೂಟರ್ ಶಿಕ್ಷಣ
ಚಿಣ್ಣರ ಸಂತರ್ಪಣೆ ಉಡುಪಿಯಿಂದ ಬಿಸಿಯೂಟ, ಸಮವಸ್ತ್ರ.
ದತ್ತಿನಿಧಿ ಮೂಲಕ ವಿದ್ಯಾರ್ಥಿವೇತನ (ಪ್ರತಿಭಾನ್ವಿತ ಹಾಗೂ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ).
ಮಾಳ ಚೌಕಿ, ಪೇರಡ್ಕ, ಮೂಳೂರು, ಹೇರಿಂಜೆ ಕಡೆಗೆ ಬರುವ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ.
ಸಂಗೀತ, ಯಕ್ಷಗಾನ ತರಬೇತಿ.
ಸಂಪನ್ಮೂಲ ವ್ಯಕ್ತಿಗಳಿಂದ ಕರಕುಶಲ ವಸ್ತುಗಳ ತಯಾರಿಕೆಯ ಬಗ್ಗೆ ತರಬೇತಿ.
ಭೌತಿಕ ಸಲಕರಣೆ (ಮೈಕ್ ಸೆಟ್, ಬ್ಯಾಂಡ್ ಸೆಟ್)
ಬೇಸಿಗೆ ರಜೆಯಲ್ಲಿ ಗ್ರಾಮದಲ್ಲಿರುವ ಮನೆಗಳಿಗೆ ಹೋಗುತ್ತೇವೆ. ಹೆತ್ತವರಿಗೆ ನಮ್ಮ ಶಾಲೆಯಲ್ಲಿರುವ ಸವಲತ್ತುಗಳ ಬಗ್ಗೆ ತಿಳಿ ಹೇಳಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪ್ರೇರೇಪಿಸುತ್ತೇವೆ. ಆಂಗ್ಲ ಮಾಧ್ಯಮ ಶಾಲೆಗೆ ಸರಿಸಾಟಿಯಾಗಿ ಎಲ್ಲಾ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿದ್ದೇವೆ.
-ಗಜಾನನ ಮರಾಠೆ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ.