ಮಕ್ಕಳಿಗೆ ಪೋಲಿಯೊ ಹನಿ ಜತೆ ಇನ್ನು ಇಂಜೆಕ್ಷನ್!

Update: 2016-03-31 08:22 GMT

ಪೋಲಿಯೊ ವಿರುದ್ಧ ಮಕ್ಕಳಿಗೆ ಡಬ್ಬಲ್ ಸುರಕ್ಷೆ

ಮಂಗಳೂರು, ಮಾ. 31: ವಿಶ್ವವನ್ನು ಪೋಲಿಯೊ ಮುಕ್ತಗೊಳಿಸುವ ಅಭಿಯಾನದ ಅಂಗವಾಗಿ ಮಕ್ಕಳಿಗೆ ಬಾಯಿ ಮೂಲಕ ನೀಡುವ ಪೋಲಿಯೊ (ಒಪಿವಿ) ಹನಿ ಜತೆ ಇಂಜೆಕ್ಷನ್ ರೂಪದಲ್ಲಿ (ಐಪಿವಿ) ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಈ ಬಗ್ಗೆ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿಂದು ‘ಸ್ವಿಚ್’ ರಾಷ್ಟ್ರೀಯ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಪೋಲಿಯೊ ಲಸಿಕಾ ಕಾರ್ಯಪಡೆ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪೋಲಿಯೊ ಹನಿಯ ಜತೆ ನೂತನವಾಗಿ ಸೇರ್ಪಡೆಗೊಳಿಸಲಾಗುತ್ತಿರುವ ಇಂಜೆಕ್ಷನ್ ರೂಪದ ಪೋಲಿಯೊ ಲಸಿಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಫ್ಲೆಕ್ಸ್, ಕರಪತ್ರಗಳ ಮೂಲಕ ಕ್ರಮ ಕೈಗೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವುದಲ್ಲದೆ, ಸರಕಾರೇತರ ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗಳ ಸಭೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸಲಹೆ ನೀಡಿದರು. 

ಐಪಿವಿಯಿಂದ ಹೇಗೆ ಡಬ್ಬಲ್ ಸುರಕ್ಷೆ?


ಭಾರತ ಈಗಾಗಲೇ ಪೋಲಿಯೊ ಮುಕ್ತ ರಾಷ್ಟ್ರವಾಗಿದೆ. ಹಾಗಿದ್ದರೂ ನೆರೆ ರಾಜ್ಯಗಳಿಂದ ಪೋಲಿಯೋ ವೈರಾಣು ದಾಳಿ ನಡೆಸುವ ಅಪಾಯವಿರುವುದರಿಂದ ಈ ಬಗ್ಗೆ ಮುಂಜಾಗೃತಾ ಕ್ರಮವಾಗಿ ಮಕ್ಕಳಿಗೆ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ಈಗಾಗಲೇ ಪೋಲಿಯೊ ಹನಿ (ಓರಲ್ ಪೋಲಿಯೋ ವ್ಯಾಕ್ಸಿನ್)ಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಇದರ ಜತೆಗೆ ಇನ್‌ಆ್ಯಕ್ಟಿವೇಟೆಡ್ ಪೋಲಿಯೊ ವ್ಯಾಕ್ಸಿನ್ ನೀಡುವುದರಿಂದ ಮಗುವಿಗೆ ಪೋಲಿಯೊ ವೈರಾಣು ದಾಳಿ ಮಾಡುವುದರಿಂದ ಹೆಚ್ಚುವರಿ ಸುರಕ್ಷೆಯನ್ನು ಒದಗಿಸಿದಂತಾಗುತ್ತದೆ.

ಪೋಲಿಯೊ ರೋಗ ಮರುಕಳಿಸಿದರೆ ಅದು ಅತ್ಯಂತ ಅಪಾಯಕಾರಿಯಾಗಬಲ್ಲದು. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೋಲಿಯೊ ಲಸಿಕೆಯ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಂಗಳೂರು ಘಟಕದ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ. ಸತೀಶ್ಚಂದ್ರ ಮಾಹಿತಿ ನೀಡಿದರು.


‘ಮಗು ಹುಟ್ಟಿದ 6ನೆ ಮತ್ತು 14ನೆ ವಾರದಲ್ಲಿ ಪೋಲಿಯೊ ಹನಿಗಳ ಜತೆ ಈ ಐಪಿವಿ ಇಂಜೆಕ್ಷನ್ ರೂಪದ ಪೊಲಿಯೋ ಚುಚ್ಚುಮದ್ದು ನೀಡಲಾಗುತ್ತದೆ. ಎಪ್ರಿಲ್ 7ರಿಂದ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಡಾ. ಸಿಕಂದರ್ ಪಾಷಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News