ಮಂಗಳೂರು: ವಾಮಾಚಾರಕ್ಕೆ ಮಗು ಬಲಿ ಪ್ರಕರಣ - ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2016-03-31 13:05 GMT

  ಮಂಗಳೂರು, ಮಾ. 31: ಯೆಯ್ಯಡಿ ಶರಬತ್‌ಕಟ್ಟೆ ಬಳಿ 2010ರ ಡಿಸೆಂಬರ್ 16 ರಂದು ಕುಟುಂಬದೋಷ ಮತ್ತು ಪ್ರೇತಭಾಧೆ ನಿವಾರಣೆಗಾಗಿ ಮೂರು ವರ್ಷದ ಮಗುವೊಂದನ್ನು ಬಲಿನೀಡಿದ ವಾಮಾಚಾರ ಪ್ರಕರಣದ ಆರೋಪಿಗಳಿಬ್ಬರಿಗೆ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಆರೋಪಿ ಕಮಲಾಕ್ಷ (80) ಮತ್ತು ಆತನ ಸಾಕುಪುತ್ರಿ ಚಂದ್ರಕಲಾ (30) ಅವರುಗಳು ತಮ್ಮ ಮನೆ ಸಮೀಪದ ಬಳಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ಬಿಹಾರ ಮೂಲದ ಫೀರಣ್ ಕುಮಾರ್ ಝಾ ಮತ್ತು ಅಂಜಲಿದೇವಿಯವರ ಮೂರು ವರ್ಷದ ಪುತ್ರಿ ಪ್ರಿಯಾಂಕ ಳನ್ನು ವಾಮಾಚಾರಕ್ಕೆ ಬಲಿ ನೀಡಿದ್ದರು. ಪ್ರಕರಣದ ವಿಚಾರಣೆಯು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು ಬುಧವಾರದಂದು ಪ್ರಕರಣದ ತೀರ್ಪು ನೀಡಲಾಗಿತ್ತು. ಇಂದು ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಶಿಕ್ಷೆ ಪ್ರಕಟಿಸಿದ್ದಾರೆ.

 ಆರೋಪಿ ಕಮಲಾಕ್ಷ ನಿಗೆ ಸೆಕ್ಷನ್ 302 ಪ್ರಕಾರ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 5 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ. ಸೆಕ್ಷನ್ 201 ರ ಪ್ರಕಾರ ಸಾಕ್ಷನಾಶ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟು 3 ವರ್ಷ ಕಾರಗೃಹ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಲಾಗಿದೆ.ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 1 ವರ್ಷ ಕಾರಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.

 ಆರೋಪಿ ಚಂದ್ರಕಲಾಗೆ ಸೆಕ್ಷನ್ 302 ರ ಪ್ರಕಾರ ಜೀವಾವಧಿ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 5 ವರ್ಷ ಕಾರಾಗೃಹ ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಸೆಕ್ಷನ್ 201 ರ ಪ್ರಕಾರ ಸಾಕ್ಷನಾಶ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟು 3 ವರ್ಷ ಕಾರಗೃಹ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಲಾಗಿದೆ.ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 1 ವರ್ಷ ಕಾರಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.

   ದಂಡ ಹಣದಲ್ಲಿ ಹತ್ತು ಸಾವಿರವನ್ನು ಸರಕಾರಕ್ಕೆ ಪಾವತಿಸಬೇಕಾಗಿದ್ದು ಉಳಿದ ಹಣವನ್ನು ಮೃತ ಬಾಲಕಿ ಪ್ರಿಯಾಂಕಳ ತಂದೆ ಫೀರಣ್‌ಕುಮಾರ್ ಝಾ ಅವರಿಗೆ ನೀಡುವಂತೆ ಆದೇಶಿಸಿದೆ. ಅದೇ ರೀತಿ ಮೃತ ಬಾಲಕಿಯ ತಂದೆ ಸಂತ್ರಸ್ತ ಪರಿಹಾರ ನಿಧಿಯನ್ನು ಪಡೆಯಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸನ್ನು ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಸಿಕ್ಯೂಶನ್ ಪರವಾಗಿ ಆರಂಭದಲ್ಲಿ ಸರಕಾರಿ ಅಭಿಯೋಜಕ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರೆ ಬಳಿಕ ಹರೀಶ್ಚಂದ್ರ ಉದ್ಯಾವರ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News