ಭಟ್ಕಳ : ಶ್ರೀರಾಮಸೇನೆ ಘಟಕ ಉದ್ಘಾಟನೆ

Update: 2016-03-31 13:56 GMT

ಭಟ್ಕಳ : ಶ್ರೀ ರಾಮ ಸೇನೆಯ ಕಾಯ್ಕಿಣಿ ಬಸ್ತಿ ವಲಯ ಘಟಕವನ್ನು ಬಸ್ತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಟಪದ ಆವರಣದಲ್ಲಿ ಊರಿನ ಗಣ್ಯರಾದ ಲಚ್ಮಯ್ಯ ನಾಯ್ಕ ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಬಸವರಾಜ್ ಬೂದಿಯಾಳ್ ನಮ್ಮ ಭಾರತ ದೇಶವನ್ನು ನಾವು ಸ್ತ್ರೀಗೆ ಹೋಲಿಸುತ್ತೇವೆ. ನಮ್ಮ ದೇಶವನ್ನು ಭಾರತಾಂಬೆ ಎಂತಲೂ ಕರೆಯುತ್ತೇವೆ. ನಾವು ನಮ್ಮ ಜನ್ಮ ಭೂಮಿಯನ್ನು ಭಾರತ ಮಾತೆ ಎನ್ನುವ ಹಾಗೆ ಪಾಕಿಸ್ತಾನ ಮಾತೆ, ಅಮೇರಿಕ ಮಾತೆ, ಲಂಡನ್ ಮಾತೆ ಎಂದರೆ ಅದಕ್ಕೆ ಯಾವುದೇ ಅರ್ಥವಿಲ್ಲ. ಆದರೆ ನಮ್ಮ ಭಾರತ ಮಾತೆ ಎಂದರೆ ಪ್ರತಿಯೊಬ್ಬ ಭಾರತೀಯನ ಕಣ್ಣು ಮುಂದೆ ನಮ್ಮ ತಾಯಿ ಮುಂದೆ ಬರುತ್ತಾಳೆ. ಅದು ನಮ್ಮ ದೇಶದ ಹಿರಿಮೆ. ದೇಶದ ಋಣ ನಾವ್ಯಾರು ತೀರಿಸಲು ಸಾಧ್ಯವಿಲ್ಲ. ನಾವೆಲ್ಲಾ ಒಟ್ಟಾಗಿ ದೇಶದಲ್ಲಿನ ನೀಚರನ್ನು ಹೊರಹಾಕುವ ಮೂಲಕ ದೇಶದಲ್ಲಿ ಹುಟ್ಟಿದ ಋಣ ತೀರಿಸಬೇಕು ಎಂದು ಕರೆ ನೀಡಿದರು. ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯಂತ ನಾಯ್ಕ ಮುರ್ಡೇಶ್ವರ ಅವರು ಮಾತನಾಡಿ ಹಿಂದೂಗಳಿಗೆ ತೊಂದರೆಯಾದಾಗ ನಾವೆಲ್ಲಾ ಹಿಂದೂಗಳು ಎಂಬ ಭಾವನೆಯಿಂದ ಸಮಸ್ಯೆಯನ್ನು ಪರಿಹರಿಸುವಲ್ಲಿ ಕೈಜೋಡಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ನಾವು ನಮ್ಮ ನಮ್ಮೊಳಗೆ ವೈಮನಸ್ಸನ್ನು ಬಿತ್ತುವುದು, ಕಚ್ಚಾಡುವುದು ಸರಿಯಲ್ಲ. ನಮ್ಮ ಜಗಳದಲ್ಲಿ ಇನ್ನೊಬ್ಬರು ಲಾಭ ಪಡೆಯಲು ಹವಣಿಸುತ್ತಾರೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದರು. ವಲಯ ಘಟಕದ ಉದ್ಘಾಟನೆಯ ಪೂರ್ವ ಬೃಹತ್ ಬೈಕ್ ರ್ಯಾಲಿಯು ಬಸ್ತಿಯಿಂದ ಮಠದ ಹಿತ್ಲಲವರೆಗೆ ತೆರಳಿ ಅಲ್ಲಿ ಸುಭಾಸ್ ಚಂದ್ರ ಬೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಬೈಕ್ ರ್ಯಾಲಿಯು ಬಸ್ತಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮುರ್ಡೇಶ್ವರ ಪೇಟೆ ಮಾರ್ಗವಾಗಿ ಬಸ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆವರಣಕ್ಕೆ ಬಂದು ತಲುಪಿತು. ಕಾರ್ಯಕ್ರಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ವಲಯ ಮಟ್ಟದ ಶ್ರೀ ರಾಮ ಸೇನೆಯ ಅಧ್ಯಕ್ಷ ಹಾಗೂ ಸದಸ್ಯರಿಗೆ ವೇದಿಕೆಯಲ್ಲಿನ ಗಣ್ಯರಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕಾ ಘಟಕದ ಅಧ್ಯಕ್ಷರಾದ ಬಾಬು ಮೋಗೇರ, ಸುರೇಶ ನಾಯ್ಕ, ಉದಯ ದೇವಾಡಿಗ, ಮಹಾಬಲೇಶ್ವರ ನಾಯ್ಕ, ಶ್ರೀಧರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News