ಸುಳ್ಯ: :ಬೇಂಗಮಲೆಯಲ್ಲಿ ಕೋಳಿ ತ್ಯಾಜ್ಯ ಎಸೆದವರಿಗೆ ಸ್ವಚ್ಛತೆ ಮಾಡುವ ಶಿಕ್ಷೆ

Update: 2016-03-31 16:41 GMT

ಸುಳ್ಯ: ಬೇಂಗಮಲೆ ರಸ್ತೆಬದಿ ಅರಣ್ಯದಲ್ಲಿ ಕೋಳಿ ತ್ಯಾಜ್ಯ ಎಸೆದ ಕೋಳಿ ಸಾಗಾಟ ಮಾಡುವ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತ್ಯಾಜ್ಯವನ್ನು ಅವರಿಂದಲೇ ಸ್ವಚ್ಛ ಮಾಡುವ ಶಿಕ್ಷೆ ನೀಡಿದ ಘಟನೆ ನಡೆದಿದೆ.

ಸೋಣಂಗೇರಿ-ಬೆಳ್ಳಾರೆಗೆ ರಸ್ತೆಯ ಮಧ್ಯ ಭಾಗದಲ್ಲಿ ಬೇಂಗಮಲೆ ಅರಣ್ಯ ಪ್ರದೇಶವಿದ್ದು, ಇಲ್ಲಿ ಸ್ವಚ್ಛತೆಗಾಗಿ ಐವರ್ನಾಡು ಗ್ರಾಮ ಪಂಚಾಯತ್ ಸಾಕಷ್ಟು ಕೆಲಸ, ಜತೆಗೆ ಜಾಗೃತಿಯನ್ನೂ ಮೂಡಿಸುತ್ತಿದೆ. ಆದರೆ ಇಲ್ಲಿ ನಿರಂತರ ಕೋಳಿ ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿ ಸಂಚರಿಸುವಂತಾಗಿದೆ. ಬುಧವಾರ ಸಂಜೆ ಜಿ.ಪಂ. ಸದಸ್ಯ ಮನ್ಮಥರವರು ಬೆಳ್ಳಾರೆಯಿಂದ ಸುಳ್ಯ ಕಡೆಗೆ ಬರುವ ಬೇಂಗಮಲೆ ಅರಣ್ಯ ಪ್ರದೇಶದಲ್ಲಿ ಕೋಳಿ ಸಾಗಾಟ ವಾಹನದವರು ತ್ಯಾಜ್ಯ ಎಸೆಯುವುದನ್ನು ಗಮನಿಸಿ ಸುಳ್ಯ ಪೊಲಿಸರಿಗೆ ಮಾಹಿತಿ ನೀಡಿದರು. ಪೊಲೀಸರು ವಾಹನವನ್ನು ಅರಂತೋಡು ಬಳಿ ತಡೆದು, ಎಸೆಯುತ್ತಿದ್ದ ಇಬ್ಬರನ್ನು ಪೋಲಿಸ್ ಠಾಣೆಗೆ ಕರೆಸಿ, ಅವರಿಗೆ ಬೇಂಗಮಲೆ ಸ್ವಚ್ಛತೆಯ ಶಿಕ್ಷೆ ನೀಡಿದರು.

ಇರಾಯಿತ್ ಪಾಷಾ ಮತ್ತು ಲೋಕೇಶ್ ಎಂಬವರು ಪಿರಿಯಾಪಟ್ಟಣದಿಂದ ಬೆಳ್ಳಾರೆಗೆ ಬಂದು ಕೋಳಿಗಳನ್ನು ಮಾರಾಟ ಮಾಡಿ, ಹಿಂತಿರುಗುವ ವೇಳೆ ಅವರ ಕೋಳಿ ತ್ಯಾಜ್ಯವನ್ನು ಬೆಳ್ಳಾರೆ ಅಂಗಡಿಯೊಬ್ಬರು ಕೋಳಿ ವಾಹನದಲ್ಲೆ ಹಾಕಿದರು. ಇದನ್ನು ಇರಾಯಿತ್ ಪಾಷಾ ಮತ್ತು ಲೋಕೇಶ್ ಬೇಂಗಮಲೆ ರಸ್ತೆ ಬದಿಯ ಅರಣ್ಯದಲ್ಲಿ ಎಸೆದರು. ಪೊಲೀಸ್ ಠಾಣೆಯಲ್ಲಿ ಅವರು ತಪ್ಪೊಪ್ಪಿಕೊಂಡರು. ಅವರೊಂದಿಗೆ ಮಾತುಕತೆ ನಡೆಸಿ ಬೇಂಗಮಲೆ ಅರಣ್ಯದಲ್ಲಿದ್ದ ಕೋಳಿ ತ್ಯಾಜ್ಯವನ್ನು ಶುಚಿತ್ವಗೊಳಿಸುವ ಶಿಕ್ಷೆ ನೀಡಿದ್ದಾರೆಂದು ತಿಳಿದು ಬಂದಿದೆ. ಮಾತುಕತೆ ವೇಳೆ ಜಿ.ಪಂ. ಸದಸ್ಯ ಮನ್ಮಥ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ, ಎಸ್‌ಐ. ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News