ಶಿವಪುರ ಕ್ರಷರ್ ಸ್ಥಗಿತಕ್ಕೆ ಆಗ್ರಹಿಸಿ ಗ್ರಾಮಸ್ಥರ ಧರಣಿ

Update: 2016-03-31 18:04 GMT

ಉಡುಪಿ, ಮಾ.31: ಪರಿಸರ ಮಾಲಿನ್ಯ ಹಾಗೂ ಸ್ಥಳೀಯರ ಆರೋಗ್ಯಕ್ಕೆ ಮಾರಕವಾಗಿರುವ ಶಿವಪುರ ಗ್ರಾಮದ ಕಲ್ಮುಂಡ ಎಂಬಲ್ಲಿ ನಡೆಯುತ್ತಿರುವ ಮೂಕಾಂಬಿಕಾ ಜಲ್ಲಿ ಕ್ರಷರ್‌ನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

20 ವರ್ಷಗಳಿಂದ ನಡೆಯುತ್ತಿರುವ ಈ ಕ್ರಷರ್‌ನಿಂದಾಗಿ ಸಮೀಪದ ಯಳಗೋಳಿ, ಕಲ್ಮುಂಡ, ಕುಂಟೆಬೆಟ್ಟು ಪ್ರದೇಶದ ನೂರು ಮನೆಗಳಲ್ಲಿ ವಾಸವಾಗಿರುವ ಕುಟುಂಬಗಳ ಬದುಕಿಗೆ ಸಮಸ್ಯೆ ಎದುರಾಗಿದೆ. ಜಲ್ಲಿ ಕ್ರಷರ್‌ನಿಂದ ಉಂಟಾಗುವ ಧೂಳಿನಿಂದ ಸಾಕಷ್ಟು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೆಚ್ಚಿನ ಮನೆಗಳು ಬಿರುಕು ಬಿಟ್ಟು ಗೋಡೆ ಪಂಚಾಂಗಗಳು ಸೀಳಿ ಹೋಗಿವೆ ಎಂದು ಸ್ಥಳೀಯ ಉದಯ ಶೆಟ್ಟಿ ಆರೋಪಿಸಿದರು.

ಕ್ರಷರ್ ಸಮೀಪದಲ್ಲೇ ಇರುವ ಎರಡು ಬಡವರ ಮನೆಗಳನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ನಿರ್ಲಕ್ಷ ವಹಿಸುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ನಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ಅವರು ನುಡಿದರು.

ಅಶೋಕ್ ಶೆಟ್ಟಿ ಮಾತನಾಡಿ, ಇಲ್ಲಿ ರಾತ್ರಿ ಹಗಲೆನ್ನದೆ ನಿರಂತರವಾಗಿ ಬಂಡೆ ಸ್ಫೋಟ ಮಾಡಲಾಗುತ್ತಿದೆ. ಸುತ್ತಲಿನ ಫಲವತ್ತಾದ ಕೃಷಿಭೂಮಿಗಳು ಬಂಜರು ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿವೆ. ಕ್ರಷರ್‌ಗೆ ತೆರಳುವ ಜಿಪಂ ರಸ್ತೆಯಲ್ಲಿ ಬೃಹತ್ ವಾಹನಗಳು ನಿರಂತರವಾಗಿ ಸಂಚರಿಸುತ್ತಿರುವುದರಿಂದ ರಸ್ತೆ ಹಾಗೂ ಸೇತುವೆ ತೀರಾ ಅಪಾಯದ ಸ್ಥಿತಿಯಲ್ಲಿದೆ ಎಂದು ದೂರಿದರು.

ಗ್ರಾಮಸ್ಥರ ವಿರೋಧವನ್ನು ಪರಿಗಣಿಸಿ ಕ್ರಷರ್‌ನ ಪರವಾನಿಗೆ ನವೀಕರಣಗೊಳಿಸಬಾರದು. 15 ದಿನಗಳ ಒಳಗೆ ಈ ಕ್ರಷರ್ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಡಿಸಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದವರು ಎಚ್ಚರಿಕೆ ನೀಡಿದರು.

ಕ್ರಷರ್ ಬಂಡೆ ಸ್ಫೋಟಗೊಳಿಸುವುದರಿಂದ ಮಕ್ಕಳು ಶಾಲೆಗೆ ತೆರಳಲು ಭಯ ಪಡುತ್ತಿದ್ದಾರೆ. ಕ್ರಷರ್ ಶಬ್ಧದಿಂದಾಗಿ ರಾತ್ರಿ ವೇಳೆ ಮಲಗಲು ಕಷ್ಟವಾಗುತ್ತಿದೆ. ಇಡೀ ಪರಿಸರ ಧೂಳುಮಯವಾಗಿದೆ. ಇಡೀ ಗ್ರಾಮವೇ ನೆಮ್ಮದಿ ಕಳೆದುಕೊಂಡಿದೆ ಎಂದು ಭೋಜ ಶೆಟ್ಟಿ ಖೇದ ವ್ಯಕ್ತಪಡಿಸಿದರು.

ಮನೆ ಬಿರುಕು ಬಿಟ್ಟಿದೆ. ಮನೆಯಲ್ಲಿರುವ 33 ವರ್ಷದ ವಿಕಲಚೇತನ ಮಗಳನ್ನು ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಯಾವಾಗ ಮನೆ ಬೀಳುತ್ತೊ ಅಥವಾ ಕ್ರಷರ್‌ನ ಸ್ಫೋಟದಿಂದ ಮಗಳ ಮೇಲೆ ಕಲ್ಲು ಬೀಳಬಹುದೊ ಎಂಬ ಆತಂಕ ಕಾಡುತ್ತಲೇ ಇದೆ. ಆಕೆ ನಡೆಯಲು ಅಶಕ್ತಳಾಗಿದ್ದಾಳೆ. ಎಲ್ಲದಕ್ಕೂ ನನ್ನನ್ನೇ ಅವಲಂಬಿಸಿದ್ದಾಳೆ ಎಂದು ವಸಂತಿ ಶೆಟ್ಟಿ ಕಣ್ಣೀರಿಟ್ಟರು.

ಯಳಗೋಳಿಯ ಕೂಕ್ರ ಮಾತನಾಡಿ, ಮೂರು ವರ್ಷಗಳ ಹಿಂದೆ ಇದೇ ಕ್ರಷರ್‌ನಿಂದ ನನ್ನ ಮನೆ ಬಿರುಕು ಬಿಟ್ಟು, ನಂತರ ಮನೆ ಕುಸಿದು ಬಿತ್ತು. ಈ ದುರಂತದಲ್ಲಿ ಮನೆಯೊಳಗಿದ್ದ ನನ್ನ ಮಗಳು ಪೂರ್ಣಿಮಾ ಮೃತಪಟ್ಟಿದ್ದಾರೆ. ಈಗ ನನಗೆ ಮನೆ ಇಲ್ಲದಾಗಿದೆ. ತುಂಬಾ ಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದೇವೆ ಎಂದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಗ್ರಾಮಸ್ಥರಾದ ಪ್ರಸನ್ನ ಶೆಟ್ಟಿ, ವಾದಿರಾಜ ಆಚಾರ್ಯ, ಸಾಧು ಒಳಗುಡ್ಡೆ, ಕಮಲಿ ಶೆಡ್ತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News