ಜಿಲ್ಲೆಯ ಪ್ರಥಮ ಬಯೋಗ್ಯಾಸ್ ಘಟಕ ಉದ್ಘಾಟನೆಗೆ ಸಿದ್ಧ

Update: 2016-03-31 18:13 GMT

ಮುಹಮ್ಮದ್ ಶರೀಫ್ ಕಾರ್ಕಳ
ಕಾರ್ಕಳ, ಮಾ.31: ಉಡುಪಿ ಜಿಲ್ಲೆಯ ಪ್ರಪ್ರಥಮ ಬಯೋಗ್ಯಾಸ್ ಘಟಕ ಕಾರ್ಕಳದಲ್ಲಿ ಪುರಸಭೆ ವ್ಯಾಪ್ತಿಯ ತೆಳ್ಳಾರು ಹತ್ತನೆ ವಾರ್ಡ್‌ನ ಶಬರಿ ಆಶ್ರಮದ ಆವರಣದಲ್ಲಿ ಸ್ಥಾಪನೆಗೊಂಡಿದ್ದು, ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಡಂಪಿಂಗ್ ಯಾರ್ಡ್ ಬಳಕೆಯಲ್ಲಿದ್ದರೂ, ಮುಂದೊಂದು ದಿನ ನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಬಹುದು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಒಂದು

ಹಂತದಲ್ಲಿ ಇದು ಪ್ರಥಮ ಪ್ರಯೋಗವೆನಿಸಿದರೂ, ಮುಂದೆ ಅದೇ ದೂರದೃಷ್ಟಿಯನ್ನಿಟ್ಟುಕೊಂಡ ಕಾರ್ಕಳ ಪುರಸಭೆಯು ಕಸದಿಂದ ರಸ ಎನ್ನುವ ಪ್ರಯತ್ನಕ್ಕೆ ಈ ಬಯೋಗ್ಯಾಸ್ ಘಟಕ ಮಾದರಿಯಾಗಲಿದೆ. ಉಡುಪಿ ಜಿಲ್ಲೆಯಲ್ಲೇ ಪ್ರಥಮವಾಗಿ ಬಾರಿಗೆ ಈ ಯೋಜನೆಯನ್ನು ಕಾರ್ಕಳದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದೀಗ ಘಟಕ ಸ್ಥಾಪನೆಗೊಂಡಿದ್ದು, ಅಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಉತ್ಪಾದನೆಯಾಗುವ ಮಾನವ ತ್ಯಾಜ್ಯ ಹಾಗೂ ಪು ಸಭೆ ವ್ಯಾಪ್ತಿಯಲ್ಲಿ ಉತ್ಪಾದಿತ ಹಸಿ-ಒಣ ಕಸಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಉತ್ಪಾದಿತ ಗ್ಯಾಸ್ ಹಾಗೂ ವಿದ್ಯುಚ್ಛಕ್ತಿ ಹಾಸ್ಟೆಲ್‌ಗೆ ಬಳಕೆಯಾಗಲಿದೆ.

ಎಂಟು ಟನ್ ಘನತ್ಯಾಜ್ಯ: ಪುರಸಭೆ ವ್ಯಾಪ್ತಿಯು 23.06 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, 93 ಕಿ.ಮೀ ಉದ್ದದ ರಸ್ತೆ ಹೊಂದಿದೆ. 10,500 ಕಟ್ಟಡಗಳಿವೆ. 25,800 ಜನಸಂಖ್ಯೆ ಹೊಂದಿದೆ. ದಿನವೊಂದಕ್ಕೆ ಸರಾಸರಿ 8 ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪುರಸಭೆಯು ಆರು ವಾಹನಗಳಿಂದ ಪ್ರತಿ ದಿನ ಎಲ್ಲಾ ಕಟ್ಟಡಗಳಿಂದ ವರ್ಗೀಕೃತ ಘನತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಕರಿಯಕಲ್ಲು ಪ್ರದೇಶದಲ್ಲಿನ 20.03 ಎಕ್ರೆ ಹೊಂಡಭರ್ತಿ ಜಾಗದಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ. ತ್ಯಾಜ್ಯದ ಪ್ರಾಥಮಿಕ ಸಂಗ್ರಹಣೆಯಲ್ಲಿ ಶೇ.95ರಷ್ಟು ತ್ಯಾಜ್ಯದ ವರ್ಗೀಕರಣದಲ್ಲಿ ಶೇ.70ರಷ್ಟು ಪ್ರಗತಿ ಸಾಧಿಸಲಾಗಿದೆ. 2014-15ನೆ ಸಾಲಿನ 13ನೆ ಹಣಕಾಸು ಮತ್ತು ರಾಜ್ಯ ಆಯ-ವ್ಯಯದ ಅನುದಾನದಲ್ಲಿ 37 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೋಳ್ಳತ್ತಿರುವ ಈ ಬಯೋಗ್ಯಾಸ್ ಘಟಕಕ್ಕೆ ಪ್ರತಿ ದಿನಕ್ಕೆ 2 ಟನ್ ತಾಜ್ಯವನ್ನು ಉಪಯೋಗಿಸಿ ಬಯೋಗ್ಯಾಸ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

 ಎರಡರಿಂದ ಮೂರು ಸಿಲಿಂಡರ್: ಪ್ರತಿ ದಿನ ಗ್ಯಾಸ್ ಉತ್ಪಾದನೆಗೊಂಡ ಎರಡರಿಂದ ಮೂರು ಸಿಲಿಂಡರ್‌ಗಳನ್ನು ಪಡೆಯಬಹುದಾಗಿದೆ. ಅಲ್ಲದೆ ಉಳಿದ ಗ್ಯಾಸನ್ನು ವಿದ್ಯುಚ್ಛಕ್ತಿಗೆ ಪರಿವರ್ತಿಸಿ ನಿರಂತರ ಐದು ಗಂಟೆಗಳ ಕಾಲ ಉರಿಸಬಹುದು. ಇದರಿಂದಗ್ಯಾಸ್ ಸಮಸ್ಯೆ ಮತ್ತು ವಿದ್ಯುಚ್ಛಕ್ತಿ ಸಮಸ್ಯೆಯನ್ನು ನೀಗಿಸಬಹುದು. ಬಯೋಗ್ಯಾಸ್ ಪ್ರಕ್ರಿಯೆ ಮುಗಿದ ಬಳಿಕ ಅದರಲ್ಲಿ ದೊರೆಯುವ ಲವಣ, ಖನಿಜಾಂಶದಿಂದ ಸೇರಿರುವ ತ್ಯಾಜ್ಯ ನೀರು ಮತ್ತು ಗೊಬ್ಬರವನ್ನು ಗಿಡಗಳಿಗೆ ಮತ್ತು ತೋಟಗಳಿಗೆ ಬಳಸುವುದರಿಂದ ಫಲವತ್ತಾದ ಬೆಳೆಗಳನ್ನು ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News