ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ: ಅಮರನಾಥ ಶೆಟ್ಟಿ ಒತ್ತಾಯ

Update: 2016-04-02 09:32 GMT

ಮಂಗಳೂರು, ಎ. 2: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದು ಅನಿವಾರ್ಯ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಅಮರನಾಥ ಶೆಟ್ಟಿ ಒತ್ತಾಯಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ಲೋಕಾಯುಕ್ತಕ್ಕೆ ನೇಮಕಾತಿ ಮಾಡುವ ಬದಲು ರಾಜ್ಯ ಸರಕಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಗೆ ಅಧಿಸೂಚನೆ ಹೊರಡಿಸಿರುವುದು ಲೋಕಾಯುಕ್ತವನ್ನು ದುರ್ಬಲಗೊಳಿಸುವ ಹುನ್ನಾರ ಎಂದು ಆರೋಪಿಸಿದರು.

ಡಾ. ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಬಹಳಷ್ಟು ಉತ್ತಮ ಕೆಲಸಗಳಾಗಿವೆ. ಆದರೆ ನ್ಯಾ. ಭಾಸ್ಕರ್ ರಾವ್‌ರವರ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಬಳಿಕ ಅದಕ್ಕೆ ಅರ್ಹರನ್ನು ನೇಮಕಾತಿ ಮಾಡುವ ಬದಲು ಭ್ರಷ್ಟಾಚಾರಕ್ಕೆ ಮತ್ತಷ್ಟು ಕಾರಣವಾಗುವ ಎಸಿಬಿ ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಪ್ರತಿಪಕ್ಷ ಮಾತ್ರವಲ್ಲದೆ ಕಾಂಗ್ರೆಸ್‌ನಿಂದಲೂ ಪ್ರಬಲವಾದ ವಿರೋಧವಿರುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾಕಾಗಿ ಹಠ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.


ದ್ವಿತೀಯ ಪಿಯುಸಿಯ ಮರು ಪರೀಕ್ಷೆಯ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ  ಕುರಿತು ಮಾತನಾಡಿದ ಅವರು, ಇದಕ್ಕೆ ಕಾರಣರಾದವರನ್ನು ಅಮಾನತು ಮಾಡುವುದಲ್ಲ, ಬದಲಾಗಿ ಅವರನ್ನು ಜೈಲಿಗಟ್ಟಬೇಕು ಅಥವಾ ಕೆಲಸದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಮರಳಿನ ಅಭಾವ ಜನಸಾಮಾನ್ಯರನ್ನು ಕಂಗೆಡಿಸಿದ್ದು, ವಿದ್ಯುತ್ ದರ ಏರಿಕೆಯೂ ಸಮಸ್ಯಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.
ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ರಾಜ್ಯ ಸರಾಕರ ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ ಹೇಳಿರುವ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದರು.


ಕೆಪಿಎಸ್‌ಸಿ ನೇಮಕಾತಿ ಹಾಗೂ ವಿದ್ಯುತ್ ದರ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ವಕ್ಫ್ ಬೋರ್ಡ್‌ನಲ್ಲೂ ಅವ್ಯವಹಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.


ಗೋಷ್ಠಿಯಲ್ಲಿ ಜೆಡಿಎಸ್ ನಾಯಕರಾದ ಚಂಗಪ್ಪ, ರಾಮ್ ಗಣೇಶ್, ರತ್ನಾಕರ ಸುವರ್ಣ, ರಹೀಂ, ವಸಂತ ಪೂಜಾರಿ, ಗೋಪಾಲಕೃಷ್ಣ ಅತ್ತಾವರ, ಯುವಜನತಾದಳ ರಾಜ್ಯ ಉಪಾಧ್ಯಕ್ಷ ಅಶ್ವಿನ್ ಪಿರೇರಾ, ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ, ಮುನೀರ್ ಮುಕ್ಕಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News