ಬೀದಿಗೆ ಬಂದ ಬೀದಿಬದಿ ವ್ಯಾಪಾರಿಗಳ ಬದುಕು

Update: 2016-04-03 18:11 GMT


ಮಂಗಳೂರು, ಎ.3: ನಗರಗಳು ಮಾಲ್ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದರೂ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ದಿನಬಳಕೆಯ ವಸ್ತುಗಳು ಸಿಗುವುದು ಬೀದಿಬದಿ ವ್ಯಾಪಾರಿಗಳ ಬಳಿ. ಆದ್ದರಿಂದ ಜನಸಾಮಾನ್ಯರಿಗೆ ಬೀದಿಬದಿಯಲ್ಲಿ ವಸ್ತುಗಳನ್ನು ಖರೀದಿಸುವುದು ಅಗತ್ಯವಾಗಿಬಿಟ್ಟಿದೆ. ಆದರೆ ಸದಾ ಅತಂತ್ರ ಸ್ಥಿತಿಯಲ್ಲಿ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳಿಗೆ ಕಾನೂನಿನ ರಕ್ಷಣೆಯಿದ್ದರೂ ಅದನ್ನು ತಮ್ಮ ರಕ್ಷಣೆಗೆ ಬಳ ಸಲು ಸಾಧ್ಯವಿಲ್ಲದಂತಾಗಿದೆ.

ಇದಕ್ಕಿದ್ದಂತೆ ರಾತ್ರಿ ಬೆಳಗಾಗುವುದರೊಳಗೆ ಬೀದಿಬದಿಯ ವ್ಯಾಪಾರಿ ಗಳ ಅಂಗಡಿಗಳನ್ನು ಬುಲ್ಡೋಜರ್‌ಗಳು ಅಪ್ಪಚ್ಚಿ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿವೆ. ಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಿ ಹೋರಾಟ ಮಾಡಿದ ಫಲವಾಗಿ 2012ರಲ್ಲಿ ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಹಕ್ಕುಗಳ ರಕ್ಷಣಾ ಮಸೂದೆ-2012 ಲೋಕ ಸಭೆಯಲ್ಲಿ ಮಂಡನೆಯಾಗಿ ಜಾರಿ ಯಾಗಿದೆ. ದೇಶದ ಸರ್ವೋಚ್ಚ ನ್ಯಾಯಾಲಯವೂ ಕೂಡ ಜನಸಾಮಾನ್ಯರ ಬದುಕಿಗೆ ಪೂರಕವಾದ ಬೀದಿಬದಿ ವ್ಯಾಪಾರವನ್ನು ರಕ್ಷಿಸುವಲ್ಲಿ ಸ್ಥಳೀಯಾಡಳಿತ ಮುತುವರ್ಜಿ ವಹಿಸಬೇಕೆಂದು ತೀರ್ಪು ನೀಡಿದೆ. ಸರಕಾರ ಬೀದಿಬದಿ ವ್ಯಾಪಾರಿಗಳಿಗೆ ನೀಡಬೇಕಿದ್ದ ಗುರುತು ಚೀಟಿಯನ್ನು ಸರಿಯಾಗಿ ಇನ್ನೂ ವಿತರಿಸಿಲ್ಲ.

ಮಂಗಳೂರು ನಗರದಲ್ಲಿ 1,200ಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿದ್ದಾರೆ. ಆದರೆ ಕೇವಲ 208 ಮಂದಿಗೆ ಸರಕಾರದ ಗುರುತು ಚೀಟಿಯನ್ನು ನೀಡಲಾಗಿದೆ. 325 ಮಂದಿಯ ಗುರುತುಚೀಟಿ ಮುದ್ರಣವಾಗಿ ತಯಾರಾ ಗಿದ್ದರೂ ಇನ್ನು ವಿತರಿಸಲಾಗಿಲ್ಲ. ಇದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಅಧಿಕೃತ ದಾಖಲೆಯಿಲ್ಲದಂತಾಗಿದೆ.

ನಗರವನ್ನು ಅಂದವಾಗಿಸುವ ಹೆಸರಿನಲ್ಲಿ ಬೀದಿಬದಿ ವ್ಯಾಪಾರಸ್ಥರನ್ನು ಹತ್ತಿಕ್ಕುವ ಮೂಲಕ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ. ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಯೋಜನೆ ಇನ್ನೂ ಈಡೇರಿಲ್ಲ. ಟೌನ್ ವೆಂಡಿಂಗ್ ಕಮಿಟಿ ರಚನೆಯಾಗಿ ಹಲವು ಸಭೆಗಳು ನಡೆದರೂ ಪರ್ಯಾಯ ವ್ಯವಸ್ಥೆ ಮಾಡಲು ಮನಪಾ ಆಡಳಿತ ಮೀನಮೇಷ ಎಣಿಸುತ್ತಿದೆ. ಪರ್ಯಾಯ ವ್ಯವಸ್ಥೆಗೆ ಸ್ಥಳ ನಿಗದಿಯಾಗಿದ್ದರೂ ಆ ಬಗ್ಗೆ ಮನಪಾ ಆಡಳಿತಕ್ಕೆ ಇನ್ನೂ ಸ್ಪಷ್ಟತೆಯಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮಂಗಳೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಮೂಡು ಬಿದಿರೆ, ಬಿ.ಸಿ.ರೋಡ್, ಸಿದ್ದಕಟ್ಟೆ, ಕುತ್ತಾರ್, ಉಪ್ಪಿನಂಗಡಿ, ಸುರತ್ಕಲ್ ಮುಂತಾದ ಕಡೆಗಳಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಒಟ್ಟುಗೂಡಿಸಿ ಹಕ್ಕಿಗಾಗಿ ಹೋರಾಟವನ್ನು ನಡೆಸುತ್ತಿದೆ. ಮತ್ತೊಂದೆಡೆ ನಗರವನ್ನು ಅಂದವಾಗಿಸುವ ನೆಪದಲ್ಲಿ ಬೀದಿಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇದೆ. ಒಟ್ಟಿನಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ಅತಂತ್ರ ಬದುಕಿನ ಬಗ್ಗೆಯೆ ಚಿಂತಿತರಾಗಿದ್ದಾರೆ.

ಬೀದಿಬದಿ ವ್ಯಾಪಾರಿಗಳಿಗೆ ಶೀಘ್ರ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ವಿಳಂಬ ಮಾಡದೆ ಗುರುತಿನ ಚೀಟಿಯನ್ನು ವಿತರಿಸಬೇಕು. ಬೀದಿಬದಿ ವ್ಯಾಪಾರಕ್ಕೆ ಪರ್ಯಾಯ ಜಾಗವನ್ನು ಗುರುತಿಸಿ ಕೊಡಲಾಗಿದೆ.ಆದರೆ ಮನಪಾಕ್ಕೆ ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. ಕೇಂದ್ರ ಸರಕಾರ ಬೀದಿಬದಿ ವ್ಯಾಪಾರಿಗಳನ್ನು ಬಡವರು ಎಂದು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಮತ್ತು ಮನೆ ನಿವೇಶನವನ್ನು ನೀಡಬೇಕು.
-ಸುನೀಲ್‌ಕುಮಾರ್ ಬಜಾಲ್, ಗೌರವಾಧ್ಯಕ್ಷರು, ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ

208 ಬೀದಿಬದಿ ವ್ಯಾಪಾರಿಗಳಿಗೆ ಈಗಾಗಲೇ ಗುರುತಿನ ಚೀಟಿ ನೀಡಲಾಗಿದೆ. ಉಳಿದವರಿಗೆ ಅವರ ಪ್ರದೇಶವನ್ನು ನೋಡಿ ನೀಡುತ್ತೇವೆ. ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಜಾಗವನ್ನು ಗುರುತಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
- ಹರಿನಾಥ್, ಮನಪಾ ಮೇಯರ್

Writer - ವಿನೋದ್ ಪುದು

contributor

Editor - ವಿನೋದ್ ಪುದು

contributor

Similar News