ಪುತ್ತೂರು : ಸರ್ಕಾರಿ ಭೂಮಿಯ ಅತಿಕ್ರಮಣ ತೆರವಿಗೆ ಆಗ್ರಹಿಸಿ ಪ್ರತಿಭಟನೆ

Update: 2016-04-04 11:48 GMT

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಬರುವ ಪಡ್ನೂರು ಗ್ರಾಮದ ಪಡ್ಡಾಯೂರು ಮತ್ತು ಕಸಬಾ ಗ್ರಾಮದ ನಂದಿಲದಲ್ಲಿ ನಗರಸಭಾ ಸದಸ್ಯರಿಂದ ಕಾನೂನು ಬಾಹಿರವಾಗಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಆರ್.ಸಿ.ಸಿ ಮನೆ ನಿರ್ಮಿಸಿದ್ದು, ಈ ಮನೆಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ಪುತ್ತೂರಿನ ಮಿನಿವಿಧಾನ ಸೌಧದ ಮುಂಬಾಗದಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ಸಡೆಯಿತು. ಸಭೆಯಲ್ಲಿ ಮಾತನಾಡಿದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಶೇಷಪ್ಪ ಬೆದ್ರಕಾಡು ಅವರು ನಗರಸಭಾ ವ್ಯಾಪ್ತಿಯಲ್ಲಿ ಅದೆಷ್ಟೋ ಬಡ ಜನರು, ಅಂಗವಿಕಲರು, ನಿರಾಶ್ರಿತರು ಮನೆ ಇಲ್ಲದೆ ಕಷ್ಟದಲ್ಲಿದ್ದಾರೆ. ಅವರಿಗೆ ಮನೆ ನಿವೇಶ ನೀಡಲು ಸ್ಥಳದ ಕೊರತೆ ಎಂದು ಇಲಾಖೆಯವರು ಹೇಳುತ್ತಿದ್ದಾರೆ, ಆದರೆ ಪಡ್ಡಾಯೂರು ಸಮೀಪದ ಪಳ್ಳ ಎಂಬಲ್ಲಿ ಸರ್ವೆ ನಂ.64/2ಎ 1 ರಲ್ಲಿರುವ 13.44 ಎಕ್ರೆ ಸರ್ಕಾರಿ ಭೂಮಿಯನ್ನು ನಗರಸಭಾ ಸದಸ್ಯ ಹರೀಶ್ ನಾಕ್ ಮಾಲ್ತೊಟ್ಟು, ಗೋಪಿಭಟ್ ಮತ್ತು ಇತರರು ಅತಿಕ್ರಮಣ ಮಾಡಿಕೊಂಡು 1 ವರ್ಷದ ಹಿಂದೆಯೇ ಅದಕ್ಕೆ ತಂತಿ ಬೇಲಿ ಅಳವಡಿಸಿ ಸ್ವಾಧೀನದಲ್ಲಿರಿಸಿಕೊಂಡಿದ್ದಾರೆ. ಅಲ್ಲದೆ ಅದರಲ್ಲಿ ಎರಡು ಮನೆಯನ್ನೂ ನಿರ್ಮಿಸಿಕೊಂಡಿದ್ದಾರೆ. ನಂದಿಲ ಎಂಬಲ್ಲಿ ಸರ್ವೆ ನಂ. 7/4ಎ1 ರಲ್ಲಿರುವ ಸರ್ಕಾರಿ ಜಮೀನಿನನ್ನು ನಗರಸಭೆಯ ಸದಸ್ಯ ವಿಶ್ವನಾಥ ಗೌಡ, ಅವರ ಸಹೋದರರಾದ ಶೇಖರ, ಮತ್ತು ರಾಮಣ್ಣ ಗೌಡ ಅತಿಕ್ರಮಣ ಮಾಡಿಕೊಂಡಿದ್ದು, ಅಲ್ಲಿ ಒಂದು ವರ್ಷದ ಹಿಂದೆಯೇ ಎರಡು ಆರ್.ಸಿ.ಸಿ ಮನೆ ನಿರ್ಮಿಸಿದ್ದಾರೆ. ಇಲಾಖೆಯ ಪರವಾನಿಗೆಯನ್ನು ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಈ ತನಕ ಯಾವುದೇ ಪ್ರಯೋಜವಾಗಿಲ್ಲ. ಇದರಲ್ಲಿ ನಗರಸಭೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ತಕ್ಷಣವೇ ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹಿರಿಸಿ ಅಕ್ರಮ ಕಟ್ಟಡ ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ದಲಿತ್ ಸೇವಾ ಸಮಿತಿ ತಾಲೂಕು ಸಮಿತಿಯ ಅಧ್ಯಕ್ಷ ಗಿರಿಧರ್ ನಾಕ್ ಮಾತನಾಡಿ ನೆಲೆ ಇಲ್ಲದ ಬಡವರು ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ಬದುಕುಕಟ್ಟಿಕೊಳ್ಳಲು ಮುಂದಾದರೆ ನಗರಸಭೆಯ ಅಧಿಕಾರಿಗಳು ಪೊಲೀಸರೊಂದಿಗೆ ಬಂದು ಮನೆಯನ್ನು ತೆರವುಗೊಳಿಸುವ ಮೂಲಕ ಅವರನ್ನು ಬೀದಿಗೆ ತಳ್ಳುತ್ತಾರೆ. ಆದರೆ ನಗರಸಭೆಯ ಸದಸ್ಯರು ಸರ್ಕಾರಿ ಸ್ಥಳವನ್ನು ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿಕೊಂಡರೆ ಯಾರೂ ಅದನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಈ ವಿಚಾರದಲ್ಲಿ ಉಪವಿಭಾಗಾಧಿಕಾರಿಗಳು , ತಹಶೀಲ್ದಾರರು, ನಗರಸಭೆ ಅಧಿಕಾರಿಗಳು ಮತ್ತು ಗ್ರಾಮಕರಣಿಕರು ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಿನಿ ವಿಧಾನಸೌಧದ ಕಚೇರಿಯಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಕಮಿಷನರ್ ಇಲ್ಲದ ಕಾರಣ ಡೆಪ್ಯುಟಿ ತಹಶೀಲ್ದ್ದಾರ್ ಗುಡ್ಡಪ್ಪ ಶೆಟ್ಟಿ , ಸರ್ವೇ ಇಲಾಖೆಯ ಸುಪರ್‌ವೈಸರ್ ದೇವಿಪ್ರಸಾದ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ತಹಶೀಲ್ದಾರ್ ಪರೀಕ್ಷಾ ಕರ್ತವ್ಯಕ್ಕೆ ಹಾಗೂ ಸಹಾಯಕ ಕಮಿಷನರ್ ಮಂಗಳೂರಿಗೆ ತೆರಳಿರುವ ಕುರಿತು ಮಾಹಿತಿ ನೀಡಿ ಪ್ರತಿಭಟನಾಕರರ ಮನವಿಯನ್ನು ನೀಡುವಂತೆ ವಿನಂತಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಈಗಾಗಲೇ ಹಲವು ಬಾರಿ ಮನವಿ ನೀಡಲಾಗಿದೆ. ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ ಬಂದು ಕ್ರಮದ ಕುರಿತು ಭರವಸೆ ನೀಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಯು. ವಿಟ್ಲ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಮೋದ್, ಜತೆ ಕಾರ್ಯದರ್ಶಿ ಶೋಭಾ, ತಾಲೂಕು ಮಾಜಿ ಉಪಾಧ್ಯಕ್ಷೆ ಆಶಲತಾ ಸೊರಕೆ, ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್, ಕೇಪು ಶಾಖೆ ಅಧ್ಯಕ್ಷ ಸದಾಶಿವ, ರಾಜು ಹೊಸಮಠ, ದಲಿತ್ ಸೇವಾ ಸಮಿತಿಯ ಪಡ್ಡಾಯೂರು ಘಟಕದ ಅಧ್ಯಕ್ಷ ಸುರೇಂದ್ರ ನಾಯ್ಕ, ಸಂಘಟನೆಯ ಮುಖಂಡರಾದ ಸುರೇಶ್ ಕುಂಬ್ರ, ಧನಂಜಯ ಬಲ್ನಾಡು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News