'ಭಾರತ್ ಮಾತಾ ಕಿ ಜೈ’ ಎನ್ನಲು ಮುಸ್ಲಿಮರಿಗೆ ಅನುಮತಿಯಿಲ್ಲ: ಜಮಾಅತೆ ಇಸ್ಲಾಮೀ ಹಿಂದ್

Update: 2016-04-04 13:32 GMT

ನವದೆಹಲಿ: “ಭಾರತ್ ಮಾತಾ ಕಿ ಜೈ" ಎನ್ನಲು ಮುಸ್ಲಿಮರಿಗೆ ಅನುಮತಿಯಿಲ್ಲ. ಇದರ ಕುರಿತು ದಾರುಲ್ ಉಲೂಮ್ ದೇವುಬಂದ್ ಹೊರಡಿಸಿದ ಫತ್ವಾಕ್ಕೆ ನಮ್ಮ ಬೆಂಬಲವಿದೆ” ಎಂದು ಜಮಾಅತೆ ಇಸ್ಲಾಮೀ ಹಿಂದ್ ಅಖಿಲ ಭಾರತ ಅಧ್ಯರಾದ ಮೌಲಾನ ಜಲಾಲುದ್ದೀನ್ ಉಮರಿಯವರು ಹೇಳಿದರು.

ಜಮಾಅತ್ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರನ್ನು  ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.


“ಕೋಮುವಾದಿ ಹಾಗೂ ಫ್ಯಾಸಿಸ್ಟ್ ಬಣಗಳಿಂದ ಸಮಾಜವನ್ನು ಒಡೆಯುವ ಸಂಚು ಹೂಡಿ, ರಾಷ್ಟ್ರೀಯತೆಯ ವಿವಾದವನ್ನು ಉದ್ದೇಶಪೂರ್ವಕವಾಗಿ ಎತ್ತಿ ಹಿಡಿಯಲಾಗುತ್ತಿದೆ. ದೇಶದ, ಜನತೆಯ ಏಕತೆ ಹಾಗೂ ಸಮಗ್ರತೆಯನ್ನು ಹಾನಿಗೊಳಿಸುವ ಕೆಲಸ ನಡೆಸುತ್ತಿದೆ. ತಮ್ಮ ತತ್ವಗಳನ್ನು ವಿರೋಧಿಸುವವರು ಹಾಗೂ ಅಲ್ಪಸಂಖ್ಯಾತರನ್ನು ಗುರುತಿಸಿ ತಮ್ಮ ರಾಜಕೀಯ ಅಧಿಕಾರವನ್ನು ಬಲಗೊಳಿಸಲು ರಾಷ್ಟ್ರೀಯತೆ ಎಂಬ ವಿವಾದಕ್ಕೆ ಕಿಚ್ಚು ಹಚ್ಚಿರುವುದು ಅದರ ಹಿಂದಿರುವ ಉದ್ದೇಶ. ಅದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಫ್ಯಾಸಿಸ್ಟ್  ಬಣಗಳು ಸಮಾಜವನ್ನು ಒಡೆದು ಚುನಾವಣೆಯ ಪ್ರಯೋಜನ ಪಡೆದುಕೊಳ್ಳಲು ಬಯಸುತ್ತಿರುವುದು ಮತ್ತೊಂದು ಕಾರಣವಾಗಿದೆ.

ಆಡಳಿತ ವಿಭಜನಾ ನೀತಿಯನ್ನು ಪಾಲಿಸುತ್ತಿರುವವರು, ಎರಡು ವರ್ಷಗಳಿಂದ ಕೇಂದ್ರದಲ್ಲಿರುವ ಎನ್.ಡಿ.ಎ. ಸರಕಾರದ ಶೋಚನೀಯ ಕಾರ್ಯ ನಿರ್ವಹಣೆಯಿಂದ ಮತದಾರರೆಲ್ಲಿ ನಮ್ಮಿಂದ ವಿಮುಖರಾಗುತ್ತಾರೋ ಎಂದು ಆತಂಕಕ್ಕೀಡಾಗಿದ್ದಾರೆ. ಒತ್ತಾಯ ಪೂರ್ವಕವಾಗಿ ಜನರನ್ನು ರಾಷ್ಟ್ರೀಯತೆ ಹಾಗೂ ದೇಶಭಕ್ತಿಯನ್ನು ಸಾಬೀತುಪಡಿಸಬೇಕೆಂದು ಅವರ ಮೇಲೆ ದೌರ್ಜನ್ಯ ನಡೆಸುವ ಫ್ಯಾಸಿಸ್ಟ್ ತಂತ್ರವನ್ನು ಈ ಬಣಗಳು ಪಾಲಿಸುತ್ತಿರುವುದು ಖೇದಕರ. ಲತೆಹಾರ್ (ಜಾರ್ಖಂಡ್)ನಲ್ಲಿ ಗೋಹತ್ಯೆಯ ಹೆಸರಲ್ಲಿ ಅಮಾಯಕ ಮುಸ್ಲಿಮರ ಕೊಲೆ ಹಾಗೂ ಕೆಲವು ಘೋಷಣೆಗಳನ್ನು ಕಡ್ಡಾಯವಾಗಿ ಹೇಳಬೇಕೆಂದು ಬೇಡಿಕೆಯಿಡುತ್ತಿರುವುದು ಅಂತಾರಾಷ್ಟ್ರೀಯ ಸಮುದಾಯಗಳ ಮುಂದೆ ನಮ್ಮ ದೇಶವನ್ನು ತಲೆ ತಗ್ಗುವಂತೆ ಮಾಡಿದೆ.

ಬ್ರುಸೆಲ್ಸ್ ಹಾಗೂ ಲಾಹೋರ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ. ಇಸ್ಲಾಮ್ ಅಮಾಯಕರ ಹತ್ಯೆಯನ್ನು ಖಂಡಿಸುತ್ತದೆ ಹಾಗೂ ಜೀವನದ ಪಾವಿತ್ರ್ಯತೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ಕೋಲ್ಕತ್ತಾ ಫ್ಲೈ ಓವರ್‍ನ ಪತನದಿಂದಾದ ಸಾವು, ನೋವು ದುಃಖಕರ ವಿಷಯವಾಗಿದೆ” ಎಂದು ಜಮಾಅತ್ ಕಾರ್ಯದರ್ಶಿ ಸಲೀಮ್ ಇಂಜಿನಿಯರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News