ಅಜ್ಜರಕಾಡು ಸರಕಾರಿ ವಸತಿಗೃಹಗಳಲ್ಲಿ ಸರಣಿ ಕಳ್ಳತನ

Update: 2016-04-05 18:30 GMT

ಉಡುಪಿ, ಎ.5: ಅಜ್ಜರಕಾಡುವಿನಲ್ಲಿರುವ ಸರಕಾರಿ ನೌಕರರ ಮೂರು ವಸತಿ ಗೃಹಗಳಿಗೆ ಎ.4ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

 ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸುಧಾಕರ್ ಎಂಬವರು ಕೆಲಸ ನಿಮಿತ್ತ ತಮ್ಮ ಊರಿಗೆ ಹೋಗಿದ್ದ ವೇಳೆ ಅಜ್ಜರಕಾಡಿನಲ್ಲಿರುವ ಅಗ್ನಿಶಾಮಕ ದಳದ ವಸತಿ ಗೃಹದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಮ್‌ನ ಕಪಾಟಿನಲ್ಲಿಟ್ಟಿದ್ದ 3 ಚಿನ್ನದ ಸರಗಳು, ಬ್ರಾಸ್‌ಲೈಟ್, ಉಂಗುರ, ಒಂದು ಜೊತೆ ಕಿವಿಯೊಲೆ ಸೇರಿದಂತೆ 58 ಗ್ರಾಂ ತೂಕ ಚಿನ್ನಾಭರಣ ಗಳನ್ನು ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ನಂತರ ಕಳ್ಳರು ಅಲ್ಲೇ ಸಮೀಪದಲ್ಲಿರುವ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿ ಕುಮಾರ್‌ರ ವಸತಿ ಗೃಹದ ಎದುರಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ, ಬೆಡ್‌ರೂಮ್‌ನ ಕಪಾಟನ್ನು ಒಡೆದು ಅದರೊಳಗಿದ್ದ 2 ಜೊತೆ ಕಿವಿಯ ಓಲೆ, ಬೆಳ್ಳಿಯ 3 ಜೊತೆ ಕಾಲು ಚೈನು, 500 ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಅಂದಾಜು ಮೌಲ್ಯ ಸುಮಾರು 12,000 ರೂ. ಆಗಿದೆ. ಇವರು ಎ.1ರಂದು ಕುಟುಂಬ ಸಮೇತವಾಗಿ ತಮ್ಮ ಸ್ವಂತ ಊರು ಮಂಡ್ಯಕ್ಕೆ ತೆರಳಿದ್ದರು. ಅಲ್ಲಿಂದ ಕಳ್ಳರು ಶ್ರೀನಿವಾಸ ಶೇಟ್ ಎಂಬವರ ವಸತಿ ಗೃಹಕ್ಕೆ ನುಗ್ಗಿ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಶ್ರೀನಿವಾಸ ಶೇಟ್ ವಾರದ ಹಿಂದೆ ಕುಟುಂಬದೊಂದಿಗೆ ಶಿರಸಿಗೆ ಹೋಗಿದ್ದು, ಅವರು ಮರಳಿದ ಬಳಿಕವಷ್ಟೇ ಕಳವಾದ ಸೊತ್ತುಗಳ ಬಗ್ಗೆ ಮಾಹಿತಿ ದೊರೆಯಬೇಕಾಗಿದೆ. ಇದೆಲ್ಲವೂ ಒಂದೇ ಕಳ್ಳರ ತಂಡ ನಡೆಸಿದ ಕೃತ್ಯವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News