ಮೃತ ರೈತರ ಕುಟುಂಬಕ್ಕೆ ಎಸ್‌ಸಿಡಿಸಿಸಿಯಿಂದ ಪರಿಹಾರ ಧನ ವಿತರಣೆ

Update: 2016-04-05 18:44 GMT


 

 ಮಂಗಳೂರು, ಎ.5: ದ.ಕ. ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ನ ಶತಮಾನೋತ್ಸವ ಹಾಗೂ ಹೊಸ ಕಟ್ಟಡ ಉದ್ಘಾಟನೆಯಂದು ಘೋಷಿಸಿದಂತೆ 2014-15ನೆ ಸಾಲಿನಲ್ಲಿ ಜಿಲ್ಲಾ ಬ್ಯಾಂಕ್‌ನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಹಾಗೂ ಸಹಕಾರಿ ಸಂಘಗಳ ಸ್ವಂತ ಬಂಡವಾಳದಿಂದ ಗರಿಷ್ಠ 1 ಲಕ್ಷ ರೂ. ಬೆಳೆ ಸಾಲ ಪಡೆದು ಮೃತರಾದ ರೈತರ ಕುಟುಂಬಗಳಿಗೆ ಶೇ.50 ರಷ್ಟು ಪರಿಹಾರ ಧನ ವಿತರಣೆಯನ್ನು ವಿತರಿಸುವ ಕಾರ್ಯ ಇಂದು ನಡೆಯಿತು.

ಬ್ಯಾಂಕ್‌ನ ಮೊಳಹಳ್ಳಿ ಶಿವರಾವ್ ಸ್ಮಾರಕ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲ ರೈತ ಕುಟುಂಬಗಳ ವಾರಸುದಾರರಿಗೆ ಪರಿಹಾರ ಧನ ವಿತರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಹಕಾರಿ ಸಂಘಗಳು ರೈತರ ಸ್ವಾಭಿಮಾನದ ಜೀವನಕ್ಕೆ ಪೂರಕವಾಗಿದ್ದು, ಈ ಸಂಘಗಳು ನಷ್ಟದಲ್ಲಿದ್ದರೆ ರೈತರಿಗೆ ಶಾಪ ಎಂದು ಅಭಿಪ್ರಾಯಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನಬಾರ್ಡ್‌ನ ಡಿಡಿಎಂ ಪ್ರಸಾದ್ ರಾವ್ ಮಾತನಾಡಿ, ಸಹಕಾರಿ ಸಂಘಗಳು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ಹೆಚ್ಚಿನ ಜನರನ್ನು ಒಳಪಡಿಸುವ ಕಾರ್ಯ ಮಾಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಗ್ರಾಮೀಣ ರೈತರಿಗೆ ಕೊಂಡಿಯಾಗಿ ಸಹಕಾರಿ ಕ್ಷೇತ್ರ ಸೇವೆ ಸಲ್ಲಿಸುತ್ತಿದೆ. ಸಹಕಾರಿ ಕ್ಷೇತ್ರದಿಂದ ಬಂದಿರುವ ರಾಜಕಾರಣಿಗಳು ಇರುವುದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ಇತರ ಜಿಲ್ಲೆಗಳಲ್ಲಿರುವ ರಾಜಕೀಯ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಇಲ್ಲದಿರುವುದರಿಂದ ಕ್ಷೇತ್ರ ಬೆಳೆಯಲು ಕಾರಣವಾಗಿದೆ ಎಂದರು. 459 ಕುಟುಂಬಗಳಿಗೆ 1.28 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಪರಿಹಾರ ಧನವನ್ನು ಒದಗಿಸಲಾಗುತ್ತಿದ್ದು, ಇಂದು ಕೆಲವರಿಗೆ ಸಾಂಕೇತಿಕ ವಾಗಿ ವಿತರಿಸಲಾಗಿದೆ. ಉಳಿದವರಿಗೆ ಆಯಾಯ ಸಹಕಾರಿ ಸಂಘಗಳ ಮೂಲಕ ವಿತರಿಸುವುದಾಗಿ ಸಂಘಟಕರು ಈ ಸಂದರ್ಭ ತಿಳಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ ಬಿ.ಕೆ. ಹಾಗೂ ಬ್ಯಾಂಕ್‌ನ ನಿರ್ದೇಶಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ವಿಶ್ವನಾಥ ನಾಯರ್ ವಂದಿಸಿದರು. ನಿರ್ದೇಶಕ ಕೆ.ಎಸ್. ದೇವರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News