ರಾಜ್ಯ ರೇಷ್ಮೆ ನಿಗಮದಿಂದ 3 ಹೊಸ ಉತ್ಪನ್ನ ಮಾರುಕಟ್ಟೆಗೆ

Update: 2016-04-05 18:45 GMT

ಉಡುಪಿ, ಎ.5: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆಎಸ್‌ಐಸಿಎಲ್)ದ ಕರ್ನಾಟಕದ ಪಾರಂಪರಿಕ ಮೈಸೂರು ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಗರದ ಡಯಾನ ಹೊಟೇಲ್ ಸಭಾಂಗಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು.
 ನಿಗಮ ತನ್ನ ಕಾರ್ಖಾನೆಯಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ಇ-ಜಕಾರ್ಡ್ ಮಗ್ಗದಲ್ಲಿ ಯುಗಾದಿ ಹಬ್ಬದ ಸಂದರ್ಭಕ್ಕಾಗಿ ತಯಾರಿಸಿದ 1.09 ಲಕ್ಷ ರೂ. ವೌಲ್ಯದ 1.200 ಕೆ.ಜಿ.ತೂಗುವ, 700ಗ್ರಾಂ ಚಿನ್ನ, 400ಗ್ರಾಂ ಶುದ್ಧ ರೇಷ್ಮೆ ಹಾಗೂ ಬೆಳ್ಳಿಯಿಂದ ತಯಾರಿಸಿದ ‘ವೆಡ್ಡಿಂಗ್ ಕಲೆಕ್ಷನ್’ ಸೀರೆಯನ್ನು ಸಚಿವ ಸೊರಕೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಕರ್ನಾಟಕದ ಸಾಂಪ್ರದಾಯಿಕ ರೇಷ್ಮೆ ಸೀರೆಗಳತ್ತ ಯುವಜನಾಂಗವನ್ನು ಸೆಳೆಯಲು ನಿಗಮ, ಹೊಸ ಆಕರ್ಷಕ ವಿನ್ಯಾಸ, ವಿವಿಧ ಬಣ್ಣಗಳ ಸಂಯೋಜನೆ ಯೊಂದಿಗೆ ತಯಾರಿಸಿದ 28,000ರೂ. ವೌಲ್ಯದ ಮೂರು ಬಣ್ಣದ ಸೀರೆಯನ್ನು ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜಂಟ್‌ನ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ ಬಿಡುಗಡೆಗೊಳಿಸಿದರು. ಇದು ಸಹ ಶೇ.0.65 ಚಿನ್ನ, ಶೇ.65 ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ.
ಮೂರು ಬಣ್ಣದ ಅಪ್ಪಟ ಚಿನ್ನ-ರೇಷ್ಮೆಯಿಂದ ತಯಾರಿಸಿದ 28ರಿಂದ 29,000ರೂ.ವೌಲ್ಯದ ಸೀರೆಯನ್ನು ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬಿಡುಗಡೆಗೊಳಿಸಿದರು. ಈ ಸೀರೆಯ ಮೇಲೆ ನೀರು, ಎಣ್ಣೆ, ಹಾಲು ಸೇರಿದಂತೆ ಯಾವುದೇ ದ್ರವ ಬಿದ್ದರೂ ಹಾಳಾಗುವುದಿಲ್ಲ ಎಂದು ನಿಗಮದ ಅಧಿಕಾರಿಗಳು ಪ್ರಾತ್ಯಕ್ಷಿಕೆಯೊಂದಿಗೆ ತೋರಿಸಿದರು.

 ಇಂದಿನಿಂದ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 8ಗಂಟೆಯವರೆಗೆ ನಡೆಯುವ ಮೈಸೂರು ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಯಶಸ್ವಿಯಾಗಲಿ ಎಂದು ಸೊರಕೆ ಹಾರೈಸಿದರು. ನಗರಸಭೆಯ ಉಪಾಧ್ಯಕ್ಷೆ ಸಂಧ್ಯಾಕುಮಾರ್ ಉಪಸ್ಥಿತರಿದ್ದರು. ಕೆಎಸ್‌ಐಸಿಎಲ್‌ನ ಅಧ್ಯಕ್ಷ ಡಿ.ಬಸವರಾಜು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿಗಮದಿಂದ ತಯಾರಾದ ಅತ್ಯಧಿಕ ಬೆಲೆಯ ‘ಥ್ರೆಡ್ಸ್ ಆಫ್ ಗೋಲ್ಡ್’ ಸೀರೆಯೂ ಇಲ್ಲಿ ಮಾರಾಟಕ್ಕಿದೆ. 1.25 ಕೆ.ಜಿ. ತೂಗುವ ಈ ಸೀರೆಯ ಬೆಲೆ 2.90 ಲಕ್ಷ ರೂ.ಗಳಾಗಿವೆ. ಇನ್ನೊಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಈಗ ‘ಸಿಎಂ ಸೀರೆ’ ಎಂದೇ ಖ್ಯಾತಿ ಪಡೆದು ಭಾರೀ ಜನಪ್ರಿಯತೆ ಪಡೆದಿರುವ 1.09ಲಕ್ಷ ರೂ.ವೌಲ್ಯದ ಸೀರೆಯೂ ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಿದೆ ಎಂದು ಬಸವರಾಜು ತಿಳಿಸಿದರು. ಸಮಾರಂಭದಲ್ಲಿ ಕೆಎಸ್‌ಐಸಿಎಲ್‌ನ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಫಿಲೋಮಿನಾ ರಾಜ್, ಜನರಲ್ ಮ್ಯಾನೇಜರ್ (ಹಣಕಾಸು) ನಾರಾಯಣ ಐತಾಳ್, ಜಿಎಂ ಎಲ್.ಎಚ್.ಭೀಮಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News