ಗ್ರಾಮ ಗ್ರಾಮಗಳಲ್ಲಿ ಆಯುಷ್ ಕೇಂದ್ರ - ಶ್ರೀಪಾದ್ ನಾಯಕ್

Update: 2016-04-06 10:00 GMT

ಕಿನ್ನಿಗೋಳಿ, ಎ.5: ಕಳೆದ ಬಜೆಟ್‌ನಲ್ಲಿ ಆಯುಷ್ ಇಲಾಖೆಗೆ 600 ಕೋಟಿ ರೂ. ಮೀಸಲಾಗಿರಿಸಿದ್ದರೆ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ 1200  ಕೋಟಿ ರೂ.ಗಳನ್ನು ಇಡಲಾಗಿದೆ. ಪ್ರತಿ ಗ್ರಾಮಗಳಲ್ಲಿ ಆಯುಷ್ ಕೇಂದ್ರ, ಯೋಗ ಕೇಂದ್ರಗಳನ್ನು, ಆಯುರ್ವೇದ ಆಸ್ಪತ್ರೆಗಳನ್ನು ತೆರೆಯಲು ಅನುದಾನ ನೀಡಲಾಗುವುದು. ಈಗಾಗಲೇ 14 ರಾಜ್ಯಗಳಿಂದ ಈ ಬಗ್ಗೆ ಪ್ರಸ್ತಾವನೆ ಬಂದಿದೆ ಎಂದು ಕೆಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಹೇಳಿದರು.  

ಅವರು ಮಂಗಳವಾರ ಕಿನ್ನಿಗೋಳಿ ಎಳತ್ತೂರಿನ ಶಕ್ತಿದರ್ಶನ ಯೋಗಾಶ್ರಮಕ್ಕೆ ಭೇಟಿ ನೀಡಿ ಮಾತನಾಡಿದರು.

ಶಕ್ತಿದರ್ಶನ ಯೋಗಾಶ್ರಮ, ಓಂಪ್ರಕೃತಿ ಧಾಮವು ಯೋಗ ಹಾಗೂ ಗೋ ಶಾಲೆಯ ಮೂಲಕ ಮಹತ್ತರ ಕಾರ್ಯಮಾಡುತ್ತಿದೆ. ಇಂತಹ ಸಾಮಾಜಿಕ ಸ್ವಯಂಸೇವಾ ಸಂಘಟನೆಗಳಿಗೂ ಆಯುಷ್ ಇಲಾಖೆ ಯೋಗ ಮತ್ತು ಆಯುರ್ವೇದದ ಬೆಳವಣಿಗೆಯ ಕರ್ಯಗಳಿಗಾಗಿ ಅನುದಾನ ನೀಡಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯನ್ನು ಕಾಣುತ್ತಿದ್ದೇವೆ. ಇಲ್ಲಿಗೆ ಆಯುರ್ವೇದ ವೈದ್ಯರನ್ನು ನೇಮಿಸುವ ಚಿಂತನೆಯಿದೆ ಎಂದವರು ತಿಳಿಸಿದರು.
 

 ಯೋಗಾಶ್ರಮದ ಮುಖ್ಯಸ್ಥರಾದ ದೇವದಾಸ್ ರಾವ್ ಮಾತನಾಡಿ ಯೋಗ ನಮ್ಮ ಶ್ರೇಷ್ಟತೆಗಳಲ್ಲಿ ಒಂದು. ಯೋಗ ಪಾಠವನ್ನು ಉಚಿತವಾಗಿ ಮಾಡುತ್ತಿರುವ ನಾವು ಮುಂದಿನ ದಿನಗಳಲ್ಲಿ ಐಪಿಎಸ್ ಐಎಎಸ್ ಅಧಿಕಾರಿಗಳಿಗೆ ಮಾಡಲಿದ್ದೇವೆ. ಸ್ವದೇಶೀ ಗೋವುಗಳ ರಕ್ಷಣೆ ನಮ್ಮ ಕರ್ತವ್ಯ. ಇವತ್ತು ನಮ್ಮ ಗೋಶಾಲೆಯಲ್ಲಿ 200ಕ್ಕೂ ಹೆಚ್ಚು ಗೋವುಗಳಿವೆ. ಗೋವಿನ ಹಾಲು ಶ್ರೇಷ್ಟವಾದದ್ದು ಎಂದರು.ಇದೇ ವೇಳೆ ಆಶ್ರಮದ ವಿದ್ಯಾರ್ಥಿಗಳು ಶ್ರೀಪಾದ ನಾಯಕರ ಎದುರು ಯೋಗ ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News