ಪುತ್ತೂರು: ಕುಡಿಯುವ ನೀರಿಗೆ ಕ್ರಮ ಅಗತ್ಯ ಕ್ರಮ ಕೈಗೊಳ್ಳಿ ಅಧಿಕಾರಿಗಳಿಗೆ ಶಾಸಕಿ ಸೂಚನೆ

Update: 2016-04-07 12:00 GMT

 ಪುತ್ತೂರು: ಬಿಸಿಲು ಹೆಚ್ಚುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಂಜಿನೀಯರಿಂಗ್ ವಿಭಾಗವೂ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಪಟ್ಟಂತೆ ಆಟ ಆಡಬೇಡಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪುತ್ತೂರು ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀರಿಗಾಗಿ ಕೊಳವೆ ಬಾವಿ ತೆಗೆದರೆ ತತ್‌ಕ್ಷಣ ವಿದ್ಯುತ್ ಸಂಪರ್ಕ ನೀಡಬೇಕು. ಸಮಸ್ಯೆ ಕುರಿತು ಮಾಹಿತಿ ತಿಳಿದರೆ ಕೂಡಲೇ ಸ್ಪಂದನೆ ನೀಡಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು. ಈ ಕುರಿತಂತೆ ಯಾವುದೇ ಆರೋಪಗಳು ಕೇಳಿಬರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ಸ್ಥಳ ತನಿಖೆ ಮಾಡದೇ ಕ್ರಮ ಕೈಗೊಳ್ಳಲಾಗಿದೆ. ಬಿಲ್ ಆದರೆ ಕೆಲಸ ಇಲ್ಲ, ಕೆಲಸ ಆಗಿದ್ದರೆ ಬಿಲ್ ನೀಡಲಿಲ್ಲ ಎಂಬ ದೂರಿದೆ. ಒಟ್ಟಿನಲ್ಲಿ ಅವ್ಯವಸ್ಥೆ ತಲೆದೋರಿದೆ. ಮಾಡಾವು- ಪಲ್ಲತ್ತಡ್ಕದಲ್ಲಿ ಕೆಲಸವೇ ಆಗಿಲ್ಲ. ಆದರೆ ಬಿಲ್ ಆಗಿದೆ. ಮುಂದಿನ ದಿನಗಳಲ್ಲಿ ಸಹಾಯಕ ಆಯುಕ್ತರನ್ನು ಕರೆದುಕೊಂಡು ಎಲ್ಲಾ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಅವರು ಪುತ್ತೂರು ತಾಲೂಕಿನ ಸುಳ್ಯ ವಿಧಾನಸಭಾ ಕ್ಷೇತ್ರದ 35 ಗ್ರಾಮಗಳ ನೀರಿನ ವ್ಯವಸ್ಥೆಗಾಗಿ 10 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಪ್ರಶ್ನಿಸಿದರು. ಪುತ್ತೂರಿನಲ್ಲಿ 12 ಗ್ರಾಮಗಳಿಗೆ ತಲಾ 10 ಲಕ್ಷದಂತೆ ಅನುದಾನ ನೀಡಿದ್ದೇವೆ. ಸುಳ್ಯ ವಿಧಾನಸಭಾ ಕ್ಷೇತ್ರವಾದ್ದರಿಂದ ಅಲ್ಲಿನ ಶಾಸಕರ ಗಮನ ಸೆಳೆಯುವ ಕೆಲಸವಾಗಬೇಕು ಎಂದು ಶಾಸಕಿ ಈ ಸಂದರ್ಭದಲ್ಲಿ ಸೂಚಿಸಿದರು.

ವಿದ್ಯುತ್ ಯಾಕೆ ಇಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ಒರಟಾಗಿ ವರ್ತಿಸುತ್ತಾರೆ ಎನ್ನುವುದಕ್ಕೆ ನಿದರ್ಶನ ಸಿಕ್ಕಿದೆ. ಪತ್ರಕರ್ತರೊಬ್ಬರು ಇದರ ಆಡಿಯೋ ರೆಕಾರ್ಡರನ್ನು ತನಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದ ಶಾಸಕಿ ಅವರು ಸಭೆಯಲ್ಲಿ ಮೈಕ್ ಮುಂದೆ ಮೊಬೈಲ್ ಪ್ಲೇ ಮಾಡಿದರು. ಪ್ರತಿ ಬಾರಿಯೂ ಕೆಪಿಟಿಸಿಎಲ್ ಅಧಿಕಾರಿಗಳು ಜಂಪರ್ ಕಟ್ ಆದ ಬಗ್ಗೆ ತಿಳಿಸುತ್ತಾರೆ. ಮುಂದಿನ ಸಭೆಗೆ ಕೆಪಿಟಿಸಿಎಲ್ ಅಧಿಕಾರಿಗಳು ಹಾಜರಿರಬೇಕು ಎಂದು ಸೂಚನೆ ನೀಡಿದರು.

ವಿದ್ಯುತ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ 20 ಮೆಗಾ ವ್ಯಾಟ್ ಹೆಚ್ಚುವರಿ ಅಗತ್ಯದ ಬಗ್ಗೆ ತಿಳಿಸಲಾಯಿತು. ಈ ಬಗ್ಗೆ ಇಲಾಖೆ ಎಂಡಿಗೆ ಮನವಿ ಮಾಡಲಾಗಿದೆ. ಇದು ಪುತ್ತೂರು ತಾಲೂಕಿಗೇ ಬಳಕೆಯಾಗಬೇಕು ಎಂದು ಶಾಸಕಿ ಹೇಳಿದರು. ಮಾಡಾವು ಸಬ್‌ಸ್ಟೇಷನ್ ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿ ಇದೆ ಇದು ನಿಜವೇ ಎನ್ನುವುದನ್ನು ತಿಳಿಸಬೇಕು ಎಂದರು.

ಉಪ್ಪಿನಂಗಡಿ ಮೆಸ್ಕಾಂ ವ್ಯಾಪ್ತಿಯಲ್ಲಿ ತುರ್ತು ಸಂದರ್ಭ ಜೀಪ್‌ನ ಅವಶ್ಯಕತೆ ಇದೆ. ಕಳೆದ ಮೂರು ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂಭತ್ತು ತಿಂಗಳಾಯಿತು. ಇನ್ನು ಪ್ರಸವ ಯಾವಾಗ ಎಂದು ನಾಮನಿರ್ದೇಶಿತ ಸದಸ್ಯ ಅಶ್ರಫ್ ಬಸ್ತಿಕಾರ್ ಪ್ರಶ್ನಿಸಿದರು. ಉತ್ತರಿಸಿದ ಲೋಹಿತ್, ಈ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ. ಮಳೆಗಾಲದ ಮೊದಲು ವಾಹನ ಬರುವ ಸೂಚನೆ ಇದೆ ಎಂದರು.

ಕಡಬದಲ್ಲಿ ವಿಶೇಷ ತಹಸೀಲ್ದಾರ್ ಇದ್ದರೂ, ಪಡಿತರ ಕೇಂದ್ರದ ಅಧಿಕಾರವಿಲ್ಲ. ಅದಕ್ಕಾಗಿ ಕಡಬದವರು ಪುತ್ತೂರಿಗೆ ಬರಬೇಕು. ಆದ್ದರಿಂದ ಕಡಬದಲ್ಲೂ ಪಡಿತರ ಕೇಂದ್ರ ತೆರೆಯಬೇಕು ಎಂದು ಜಿಪಂ ಸದಸ್ಯ ಪಿ.ಪಿ.ವರ್ಗೀಸ್ ಸಭೆಯಲ್ಲಿ ಮನವಿ ಮಾಡಿದರು. ಸಿಬ್ಬಂದಿ ಭರ್ತಿಯಾದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಸಣ್ಣರಂಗಯ್ಯ ತಿಳಿಸಿದರು.

ಸರ್ಕಾರದ ಯೋಜನೆಗಳ ಪೂರ್ಣತೆಗೆ ಮರಳಿನ ಕೊರತೆಯಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಅಗತ್ಯ ಕಾಮಗಾರಿ ಕಡೆ ಮರಳು ನೀಡುವಂತೆ ಹಾಗೂ ಅಕ್ರಮವಾಗಿ ಸಾಗಿಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ಶಾಸಕಿ ಸೂಚಿಸಿದರು. ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗುವುದು ಎಂದರು.

 ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಸ್ವಾಗತಿಸಿ ಕಲಾಪ ನಿರ್ವಹಿಸಿದರು. ಪುತ್ತೂರು ತಹಶೀಲ್ದಾರ್ ಸಣ್ಣ ರಂಗಯ್ಯ, ಕಡಬ ತಹಶೀಲ್ದಾರ್ ಬಿ. ಲಿಂಗಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News