ಜಗತ್ತಿನಲ್ಲಿ 422 ಮಿಲಿಯನ್ ಮಧುಮೇಹ ಪೀಡಿತರು: ಪ್ರಿಯಾಂಕಾ ಮೇರಿ ಫ್ರಾನ್ಸಿಸ್

Update: 2016-04-07 18:17 GMT

ಮಣಿಪಾಲ, ಎ.7: ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶದ ಪ್ರಕಾರ 1980ರಲ್ಲಿ 180 ಮಿಲಿಯನ್ ಯುವ ಜನತೆ ಯಲ್ಲಿದ್ದ ಮಧುಮೇಹ ಕಾಯಿಲೆಯು 2014ರ ಅವಧಿಗೆ 422 ಮಿಲಿಯನ್ ಸಂಖ್ಯೆಗೆ ಏರಿಕೆಯಾಗಿದೆ. ಅರಿವು ಮೂಡಿಸುವುದರಿಂದ ಮಾತ್ರ ಈ ಕಾಯಿಲೆಯ ನಿಯಂತ್ರಣ ಸಾಧ್ಯ ಎಂದು ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಸಹ ಯೋಗದಲ್ಲಿ ಮಣಿಪಾಲದ ಶಿರಡಿ ಸಾಯಿಬಾಬ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರು ವಾರ ಆಯೋಜಿಸಲಾದ ವಿಶ್ವ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಧುಮೇಹ ಕಾಯಿಲೆ ಮೊದಲು ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಶ್ರೀಮಂತರು ಡಯಟ್ ಮುಖಾಂತರ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟು ಕೊಂಡಿದ್ದಾರೆ. ಮಧ್ಯಮ ಮತ್ತು ಬಡ ವರ್ಗದ ಜನರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಬದಲಾದ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಒತ್ತಡದ ಬದುಕಿನಿಂದ ಬಡವ-ಶ್ರೀಮಂತ ಎನ್ನದೆ ಪ್ರತಿಯೊಬ್ಬರಿಗೂ ಮಧುಮೇಹ ಬರುತ್ತಿದೆ ಎಂದರು.

ಒತ್ತಡರಹಿತ ಜೀವನ ಮತ್ತು ಉತ್ತಮ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಈ ಕುರಿತು ಎಲ್ಲರಿಗೂ, ಅದರಲ್ಲೂ ಮಕ್ಕಳು ಮತ್ತು ಯುವಜನತೆಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಮಾತನಾಡಿ, ವಿಶ್ವದಲ್ಲಿ ಮಧುಮೇಹದಲ್ಲಿ ಭಾರತ 2ನೆ ಸ್ಥಾನದಲ್ಲಿದೆ. ಜಂಕ್‌ಫುಡ್ ಸೇವನೆ, ಧೂಮ ಪಾನ ಹಾಗೂ ಮದ್ಯಪಾನದಿಂದ ದೂರ ಉಳಿದರೆ ಮಧುಮೇಹ ಬರುವ ಸಾಧ್ಯತೆ ಕಡಿಮೆಯಾಗಿರುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಡೀನ್ ಡಾ. ಅನೀಸ್ ಜಾರ್ಜ್ ವಹಿಸಿದ್ದರು. ಮಣಿಪಾಲ ಸಮುದಾಯ ಆರೋಗ್ಯ ಸೇವೆಯ ಮುಖ್ಯಸ್ಥ ಡಾ.ಶಶಿಧರ ವೈ.ಎನ್. ಸ್ವಾಗತಿಸಿದರು. ಉಪನ್ಯಾಸಕಿ ಸಂಧ್ಯಾ ಪ್ರಭು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News