ದ.ಕ.ದಲ್ಲಿ 13,516 ಬಿಪಿಎಲ್ ಕಾರ್ಡ್ ರದ್ದು

Update: 2016-04-08 18:03 GMT

ಮಂಗಳೂರು, ಎ.8: ‘ಬಡವರ ಬಂಧು’ ಎಂದೇ ಗುರುತಿಸಿಕೊಂಡಿರುವ ಬಿಪಿಎಲ್ ಪಡಿತರ ಚೀಟಿ(ಅಕ್ಷಯ)ಗೆ ಸಂಚಕಾರ ಎದುರಾಗಿದೆ. ಕಳೆದ ಜಿಪಂ-ತಾಪಂ ಚುನಾವಣೆಯ ಕಣ ರಂಗೇರುತ್ತಿರುವ ಹೊತ್ತಲ್ಲಿ ಸರಕಾರವು ಸದ್ದಿಲ್ಲದೆ ಪಡಿತರ ಚೀಟಿಗಳ ‘ಪರಿಷ್ಕರಣೆ’ ನಡೆಸಿದೆ. ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯು ಕಳೆದ ಅಕ್ಟೋಬರ್ ಅಂತ್ಯಕ್ಕೆ ರಾಜ್ಯಾದ್ಯಂತ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಯಾವುದೇ ಮುನ್ಸೂ ಚನೆ ನೀಡದೆ ರದ್ದುಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2,18,000 ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ. ಈ ಪೈಕಿ 13,516 ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹ ಎಂಬ ಕಾರಣ ನೀಡಿ ಆಹಾರ ಪೂರೈಕೆ ಇಲಾಖೆಯು 2015ರ ಅಕ್ಟೋಬರ್ ಅಂತ್ಯಕ್ಕೆ ರದ್ದುಗೊಳಿಸಿದೆ. ಇವುಗಳಲ್ಲಿ ಬಹುಪಾಲು ಕಾರ್ಡ್‌ಗಳ ರದ್ದತಿಗೆ ಮಿತಿಗಿಂತ ಅಧಿಕ ವಿದ್ಯುತ್ ಬಿಲ್ ಕಾರಣವಾಗಿದೆ. ಉಳಿದಂತೆ ನಾಲ್ಕು ಚಕ್ರಗಳ ವಾಹನ ಹೊಂದಿರುವುದು, ಒಂದೇ ಆಧಾರ್ ಕಾರ್ಡ್ ಅಥವಾ ಒಂದೇ ಮತದಾರರ ಗುರುತಿನಚೀಟಿಯನ್ನು ಬಳಸಿ ಒಂದಕ್ಕಿಂತ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವುದು, ಸರಕಾರಿ ಅಥವಾ ಕಾರ್ಪೊರೇಟ್ ನೌಕರರು, ನವೀಕರಣಗೊಳಿಸದ ಹಾಗೂ ಪ್ರಸ್ತುತ ಅಸ್ತಿತ್ವದಲ್ಲಿರದ ಕುಟುಂಬಗಳ ಹೆಸರಿನಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವುದು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 ದ.ಕ. ಜಿಲ್ಲೆಯಲ್ಲಿ ಅನರ್ಹ ಮಾನದಂಡದನ್ವಯ ಅತ್ಯಧಿಕ ಬಿಪಿಎಲ್ ಕಾರ್ಡ್‌ಗಳನ್ನು ಕಳೆದುಕೊಂಡಿರುವ ತಾಲೂಕುಗಳಲ್ಲಿ ಮಂಗಳೂರಿಗೆ ಅಗ್ರಸ್ಥಾನ. ಈ ತಾಲೂಕಿನಲ್ಲಿ 4,732 ಬಿಪಿಎಲ್ ಕಾರ್ಡ್‌ಗಳು ರದ್ದುಗೊಂಡಿವೆ. ಸುಳ್ಯ ತಾಲೂಕಿ ನಲ್ಲಿ ಅತೀ ಕಡಿಮೆ ಅಂದರೆ, 1,202 ಪಡಿತರ ಚೀಟಿಗಳು ರದ್ದುಗೊಂಡಿವೆ. ಪ್ರತಿ ತಿಂಗಳು ಸರಾಸರಿ 450 ರೂ.ಗಿಂತ ಅಧಿಕ ವಿದ್ಯುತ್ ಬಿಲ್ ಪಾವತಿಸುತ್ತಿರುವ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹವಾಗುತ್ತವೆ. ಈ ಮಾನದಂಡದನ್ವಯ ದ.ಕ. ಜಿಲ್ಲೆಯಲ್ಲಿ 4,444 ರೇಶನ್ ಕಾರ್ಡ್‌ಗಳು ರದ್ದಾಗಿವೆ. ಈ ಪೈಕಿ ಬಂಟ್ವಾಳ ತಾಲೂಕು ಒಂದರಲ್ಲೇ 2,120 ರದ್ದುಗೊಳಿಸಲಾಗಿದೆ. ಸರಕಾರದ ಈ ಹಠಾತ್ ಕ್ರಮದಿಂದಾಗಿ ದ.ಕ. ಜಿಲ್ಲೆಯಲ್ಲಿ ಸಾವಿರಾರು ಬಡ ಕುಟುಂಬಗಳು ಸಂಕಷ್ಟಕ್ಕೊಳಗಾಗಿದ್ದರೆ, ರಾಜ್ಯ ದಲ್ಲಿ ಲಕ್ಷಾಂತರ ಕುಟುಂಬಗಳು ಬಿಪಿಎಲ್ ಸೌಲಭ್ಯ ಗಳಿಂದ ವಂಚಿತಗೊಂಡಿವೆ. 

ಸರಕಾರಿ ಸೌಲಭ್ಯಗಳೂ ಸಿಗದು!
ಬಿಪಿಎಲ್ ಕಾರ್ಡ್ ಕಳೆದುಕೊಳ್ಳುವುದರಿಂದ ಪಡಿತರ ಸೌಲಭ್ಯ ಮಾತ್ರವಲ್ಲ, ಹಲವು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಉದಾ ಹರಣೆಗೆ ವಾಜಪೇಯಿ ಆರೋಗ್ಯಶ್ರೀ ಯೋಜನೆ, ಮೀಸಲಾತಿ ಇತ್ಯಾದಿ ಸೌಲಭ್ಯಗಳು ಸಿಗದಂತಾಗುತ್ತದೆ.
ಅನ್ನಭಾಗ್ಯ’ ಸೇರಿದಂತೆ ಬಡವರಿಗೆ ನೀಡುತ್ತಿ ರುವ ಉಚಿತ ಯೋಜನೆಗಳು ರಾಜ್ಯ ಸರಕಾರದ ಖಜಾನೆಗೆ ಭಾರೀ ಹೊಡೆತ ನೀಡುತ್ತಿವೆ. ಅನ್ನಭಾಗ್ಯ ಯೋಜನೆಗೆ ಪ್ರತೀ ತಿಂಗಳು ಕೋಟ್ಯಂತರ ರೂ. ವ್ಯಯವಾಗುತ್ತಿದೆ. ಆದರೆ ಅನರ್ಹರು ಈ ಯೋಜನೆಯನ್ನು ದುರುಪಯೋಗಪಡಿ ಸಿಕೊಳ್ಳುತ್ತಿರುವುದರಿಂದ ರಾಜ್ಯ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನರ್ಹ ಪಡಿತರ ಚೀಟಿಯನ್ನು ಪತ್ತೆಹಚ್ಚಿ ರದ್ದುಗೊಳಿಸುವುದು ಅನಿವಾರ್ಯ ಎಂದು ಸರಕಾರ ಸಮಜಾಯಿಷಿ ನೀಡುತ್ತಿದೆ. ಸರಕಾರದ ಈ ಏಕಾಏಕಿ ಕ್ರಮದಿಂದ ಅನ್ಯಾಯವಾಗಿದೆ ಎಂಬುದು ಬಡವರ ಅಳಲು.
‘‘ಬಿಪಿಎಲ್‌ಗಿರುವ ಮಾನದಂಡವೇನೋ ಸರಿ. ಆದರೆ ವಿದ್ಯುತ್ ಬಿಲ್ ಆಧಾರದಲ್ಲಿ ಬಡವರನ್ನು ಸೌಲಭ್ಯ ವಂಚಿತರನ್ನಾಗಿಸುವುದು ಎಷ್ಟು ಸಮರ್ಪಕ?. ನನ್ನ ಮನೆ ಯಲ್ಲಿ ಆರೇಳು ಮಂದಿಯಿದ್ದಾರೆ. ಇದರಿಂದ ಸಹಜ ವಾಗಿಯೇ ಮನೆಯಲ್ಲಿ ವಿದ್ಯುತ್ ಬಳಕೆ ಅಧಿಕವಾಗಿದೆ. ಇದನ್ನೇ ಮಾನದಂಡವನ್ನಾಗಿಸಿ ನಮ್ಮ ಕಾರ್ಡನ್ನು ರದ್ದು ಗೊಳಿಸಲಾಗಿದೆ. ನನ್ನೊಬ್ಬನ ದುಡಿಮೆಯೇ ಕುಟುಂಬದ ಆದಾಯವಾಗಿದ್ದು, ಸರಕಾರದ ಈ ಕ್ರಮದಿಂದ ಜೀವನ ಮತ್ತಷ್ಟು ದುಸ್ತರವಾಗಿದೆ’’ ಎಂದು ಬೇಸರಿಸುತ್ತಾರೆ ವಿಟ್ಲದ ರಹ್ಮಾನ್. ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಸೇರಿದಂತೆ ಐವರು ಮಕ್ಕಳು. ತುಂಬಿದ ಮನೆಯಲ್ಲಿ ಅವಶ್ಯವಿರುವಷ್ಟು ವಿದ್ಯುದ್ದೀಪಗಳು, ಈ ಬಿಸಿಲ ಬೇಗೆಯಿಂದ ಪಾರಾಗಲು ಮಕ್ಕಳು ಫ್ಯಾನ್‌ಗಳ ಮೊರೆ ಹೋಗುವುದು ಸಾಮಾನ್ಯ. ಇದರಿಂದ ವಿದ್ಯುತ್ ಬಿಲ್ 450 ರೂ. ಮೀರಿರುತ್ತದೆ. ಆದರೆ ಮನೆಯಲ್ಲಿ ದುಡಿಯುವ ಕೈಗಳು ಮಾತ್ರ ಎರಡೇ ಇರುವುದು. ದಿನದೂಡಲು ಹೆಣಗಾಡುತ್ತಿರುವ ಈ ಕುಟುಂಬದ ಆಧಾರಸ್ತಂಭದಂತಿದ್ದ ಬಿಪಿಎಲ್ ಪಡಿತರ ಚೀಟಿ ಇದೀಗ ರದ್ದುಗೊಂಡಿದೆ. ಅದಕ್ಕೆ ಕಾರಣ ಮಿತಿ ಮೀರಿರುವ ವಿದ್ಯುತ್ ಬಿಲ್. ಇದೇ ರೀತಿ ಜಿಲ್ಲೆಯಲ್ಲಿ ಹಲವು ಕುಟುಂಬಗಳು ಬಿಪಿಎಲ್ ಪಡಿತರ ಕಾರ್ಡ್ ರದ್ದು ಗೊಂಡಿರುವುದರಿಂದ ಸಂಕಷ್ಟಕ್ಕೊಳಗಾಗಿವೆ. 

ಅರ್ಹರ ಕಾರ್ಡ್‌ಗಳೂ ರದ್ದಾಗಿವೆ
ಮಿತಿಗಿಂತ ಅಧಿಕ ವಿದ್ಯುತ್ ಬಳಕೆ ಹಾಗೂ ಯಾವುದೇ ಭಾರೀ ವಾಹನಗಳನ್ನು ಹೊಂದಿರದ ಹಲವು ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಯೂ ಅನರ್ಹ ಗೊಂಡಿವೆ. ಈ ಬಗ್ಗೆ ಆಹಾರ ಪೂರೈಕೆ ಇಲಾಖೆಯನ್ನು ಸಂಪರ್ಕಿಸಿದರೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸು ತ್ತಾರೆ. ಆಧಾರ್ ನಂಬರ್ ಜೋಡಣೆ, ಚುನಾವಣಾ ಗುರುತುಚೀಟಿಯ ಲಿಂಕ್ ಮಾಡಿಸುವಿಕೆ ಅಂತ ಅಲೆದಾಡಿ ಕಾರ್ಡ್ ಸರಿಪಡಿಸಿಕೊಂಡ ಬೆನ್ನಲ್ಲೇ ಮಾಡದ ತಪ್ಪಿಗೆ ಮತ್ತೆ ಸರಕಾರಿ ಕಚೇರಿ ಅಲೆಯುವ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘‘ಪುನರ್ ಪರಿಶೀಲನೆ ಇಲ್ಲ, ಹೊಸ ಕಾರ್ಡ್‌ಗೆ ಮತ್ತೆ ಅರ್ಜಿ’’ 
ಪಡಿತರ ಚೀಟಿಯ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಗಳು ಜನಸಾಮಾನ್ಯರ ಗೊಂದಲ ವನ್ನು ಇನ್ನಷ್ಟು ಹೆಚ್ಚಿಸುತ್ತಿವೆ.
ಇತ್ತೀಚೆಗೆ ದ.ಕ. ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಬಿ.ರಮಾನಾಥ ರೈ, ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಿರುವುದರ ಬಗ್ಗೆ ಪುನರ್‌ಪರಿಶೀಲಿಸಿ ಅರ್ಹ ರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡಿ ಎಂದು ಅಧಿಕಾರಿ ಗಳಿಗೆ ಸೂಚಿಸಿದ್ದಾರೆ.
 ಇದೇ ರೀತಿ ಇತ್ತೀಚೆಗೆ ಉಡುಪಿಯಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ‘‘ಮಿತಿಗಿಂತ ಅಧಿಕ ವಿದ್ಯುತ್ ಬಿಲ್‌ನಿಂದಾಗಿ ರದ್ದುಗೊಂಡಿರುವ ಬಿಪಿಎಲ್ ಪಡಿತರದಾರರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ. ಅದರನ್ವಯ ಪುನರ್ ಪರಿಶೀಲನೆ ನಡೆಸಿ ಕಾರ್ಡ್ ನೀಡು ವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’’ ಎಂದಿದ್ದಾರೆ. ಆದರೆ ಆಹಾರ ಪೂರೈಕೆ ಇಲಾಖೆಯ ಅಧಿಕಾರಿಗಳು ಮಾತ್ರ ರದ್ದುಗೊಂಡಿರುವ ಬಿಪಿಎಲ್ ಕಾರ್ಡ್‌ಗಳ ಪುನರ್ ಪರಿಶೀಲನೆಗೆ ಅವಕಾಶವಿಲ್ಲ ಎನ್ನುತ್ತಾರೆ. ಒಮ್ಮೆ ರದ್ದುಗೊಂಡ ಪಡಿತರ ಚೀಟಿಯನ್ನೇ ಪುನರ್ ಪರಿಶೀಲಿಸಿ ನೀಡಲು ಅವಕಾಶವಿಲ್ಲ. ಪ್ರಸ್ತುತ ಬಿಪಿಎಲ್ ಕಾರ್ಡ್ ರದ್ದುಗೊಂಡಿರುವ ಕುಟುಂಬಗಳು ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಅರ್ಹತೆಗನುಗುಣವಾಗಿ ಪಡಿತರ ಚೀಟಿ ನೀಡಲಾಗುವುದು ಎಂದು ಆಹಾರ, ನಾಗರಿಕ ಪೂರೈಕೆ ಇಲಾಖೆಯ ದ.ಕ. ಜಿಲ್ಲಾ ನಿರ್ದೇಶಕ ರಾಜು ಮೊಗೇರ ಸ್ಪಷ್ಟಪಡಿಸಿದ್ದಾರೆ.

* 600 ರೂ.ವರೆಗೆ ವಿದ್ಯುತ್ ಬಿಲ್ ರಿಯಾಯಿತಿ
ಪ್ರತಿ ತಿಂಗಳು ಸರಾಸರಿ 450 ರೂ.ಗಿಂತ ಅಧಿಕ ವಿದ್ಯುತ್ ಬಿಲ್ ಪಾವತಿದಾರರು ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರಾಗುತ್ತಾರೆ. ಆದರೆ ಇದೀಗ ನಡೆ ಯುತ್ತಿರುವ ಅನರ್ಹರ ಪತ್ತೆ ಕಾರ್ಯಾಚರಣೆಯಲ್ಲಿ ಈ ರೀತಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಿಯಾಯಿತಿ 
ನೀಡಲಾಗಿದ್ದು, 600 ರೂ.ವರೆಗೆ ವಿದ್ಯುತ್ ಬಿಲ್ ಪಾವತಿಸುತ್ತಿರುವವರ ಕಾರ್ಡನ್ನು ರದ್ದುಗೊಳಿಸಿಲ್ಲ. ಹೊಸದಾಗಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ಈ ರಿಯಾಯಿತಿ ಇರುವುದಿಲ್ಲ.

-ರಾಜು ಮೊಗೇರ, ಆಹಾರ ಪೂರೈಕೆ ಇಲಾಖೆ ದ.ಕ. ಜಿಲ್ಲಾ ನಿರ್ದೇಶಕ

ಬಿಪಿಎಲ್ ಕಾರ್ಡ್‌ಗೆ ಯಾರು ಅರ್ಹರು..?

  • ಗ್ರಾಮೀಣ ಪ್ರದೇಶದಲ್ಲಿ 12 ಸಾವಿರ ರೂ. ಅಥವಾ ಅದಕ್ಕೂ ಕಡಿಮೆ ವಾರ್ಷಿಕ ವರಮಾನ ಹೊಂದಿರುವವರು.

  • * ಪಟ್ಟಣ ಪ್ರದೇಶದಲ್ಲಿ 17 ಸಾವಿರ ರೂ. ಅಥವಾ ಅದಕ್ಕೂ ಕಡಿಮೆ ವಾರ್ಷಿಕ ವರಮಾನ ಹೊಂದಿರುವ ಕುಟುಂಬ.

ದ.ಕ.ದಲ್ಲಿ ಬಿಪಿಎಲ್ ಕಾರ್ಡ್ ಕಳೆದುಕೊಂಡವರ ವಿವರ

  • ಮಂಗಳೂರು - 4,732

  • ಬಂಟ್ವಾಳ - 2,777

  • ಬೆಳ್ತಂಗಡಿ - 2,640

  • ಪುತ್ತೂರು - 1,365

  • ಸುಳ್ಯ - 1,202

  • ಮಂಗಳೂರು (ನಗರ) - 800

  • ಒಟ್ಟು - 13,516

Writer - ಎ.ಎಂ.ಹನೀಫ್, ಅನಿಲಕಟ್ಟೆ

contributor

Editor - ಎ.ಎಂ.ಹನೀಫ್, ಅನಿಲಕಟ್ಟೆ

contributor

Similar News