ಸುಳ್ಯ: ಉಪಚುನಾವಣೆಯಲ್ಲಿ ನೀರಿನ ರಾಜಕೀಯ : ಕಾಂಗ್ರೆಸ್ ಆರೋಪ

Update: 2016-04-09 11:47 GMT

ಸುಳ್ಯ: ಕಂದಡ್ಕ ವಾರ್ಡ್ ಉಪ ಚುನಾವಣೆ ಪ್ರಯುಕ್ತ ಬಿಜೆಪಿ ಅಲ್ಲಿ ಕುಡಿಯುವ ನೀರಿನಲ್ಲೂ ರಾಜಕೀಯ ಮಾಡಲು ಹೊರಟಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಆರೋಪಿಸಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಂದಡ್ಕ ವಾರ್ಡ್‌ನಲ್ಲಿ ಚಂದ್ರಕುಮಾರ್ ಸದಸ್ಯರಾಗಿರುವವರೆಗೆ ಅಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆಯಿರಲಿಲ್ಲ. ಅವರ ನಿಧನದ ನಂತರ ಅಲ್ಲಿಗೆ ಬೋರ್‌ವೆಲ್ ನೀರು ಸರಬರಾಜು ಮಾಡದೆ ಅದನ್ನು 2ನೇ ವಾರ್ಡ್‌ಗೆ ವರ್ಗಾಯಿಸಲಾಯಿತು. ಪರಿಣಾಮ ಕಂದಡ್ಕದಲ್ಲಿ ಈಗ ಮಣ್ಣು ಹಾಗೂ ಕೆಸರು ಮಿಶ್ರಿತ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದ ಅವರು ಬಾಟ್ಲಿಯಲ್ಲಿ ತಂದಿದ್ದ ನೀರನ್ನು ಪ್ರದರ್ಶಿಸಿದರು. ಕಂದಡ್ಕ ಹೊಳೆಯಿಂದ ನೀರು ಲಿಫ್ಟ್ ಮಾಡುತ್ತಿದ್ದಾಗ ಹೀಗೆ ನೀರು ಹಾಳಾದುದರಿಂದ ಅಂದು ಚಂದ್ರಕುಮಾರ್ ಅದನ್ನು ನಿಲ್ಲಿಸಿದ್ದರು. ಆದರೆ ಈಗ ಮತ್ತೆ ಅಂತದೇ ನೀರು ಸರಬರಾಜು ಮಾಡಿ ಚಂದ್ರಕುಮಾರ್ ಈ ಸಮಸ್ಯೆಗೆ ಏನು ವ್ಯವಸ್ಥೆ ಮಾಡಿಲ್ಲ ಎಂದು ಬಿಂಬಿಸಲು ಬಿಜೆಪಿಯವರು ನೋಡುತ್ತಿದ್ದಾರೆ. ಆದರೆ ಮತದಾರರು ಇದಕ್ಕೆ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ. ಈ ನೀರಿನ ಸಮಸ್ಯೆಯನ್ನು ಅಲ್ಲಿ ನಿವಾಸಿಗಳು ಪಂಚಾಯತ್‌ಗೆ ಬಂದು ತಿಳಿಸಿದಾಗ ಅಲ್ಲಿ ಬೇಕಿದ್ದರೆ ನೀರು ಕುಡಿಯಿರಿ ಇಲ್ಲದಿದ್ದರೆ ನಲ್ಲಿ ಕಟ್ ಮಾಡುತ್ತೇವೆ ಎಂಬ ಉದ್ಧಟತನದ ಉತ್ತರ ನೀಡಿದ್ದಾರೆ. ನ.ಪಂ. ನಲ್ಲಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ನಡುವೆ ಸಂಬಂಧ ಸರಿಯಿಲ್ಲ. ಅಧ್ಯಕ್ಷರು ಮುಖ್ಯಾಧಿಕಾರಿಗೆ ನೋಟೀಸ್ ಕೊಡ್ತಾರೆ, ಆದರೆ ಮುಖ್ಯಾಧಿಕಾರಿ ಅದನ್ನು ನೋಡಿ ಹರಿದು ಬಿಸಾಡ್ತಾರೆ. ಈ ರೀತಿ ಅವಸ್ಥೆ ನ.ಪಂ.ನಲ್ಲಿದೆ. ಕೋಳಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅದು ಬಿಟ್ಟು ಕೋಳಿಮಾಂಸ ಮಾರಾಟವನ್ನೇ ನಿಷೇಧಿಸುತ್ತೇವೆ ಎನ್ನುವುದು ಒಳ್ಳೆಯ ನಿರ್ಧಾರವಲ್ಲ ಎಂದವರು ಹೇಳಿದರು. 4 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ 3 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದ ಅವರು, ಮೋದಿ ಸರಕಾರ ವಾಹನಗಳ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಜಾಸ್ತಿ ಮಾಡಿದೆ. 570ರೂ. ಇದ್ದ ದ್ವಿಚಕ್ರ ವಾಹನಗಳ ಇನ್ಶೂರ್ 750 ಆಗಿದೆ. 1818ರೂ ಇದ್ದ ಚತುಷ್ಕಕ್ರ ವಾಹನಗಳ ಇನ್ಶೂರೆನ್ಸ್ 2520ಕ್ಕೆ ಏರಿದೆ. 5818 ಇದ್ದ ಮಹೀಂದ್ರಾ ಜೀಪುಗಳು ಇನ್ಶೂರೆನ್ಸ್ 7525ಕ್ಕೆ ಏರಿದೆ. ಖಾಸಗಿ ಕಂಪೆನಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ವೆಂಕಪ್ಪ ಗೌಡರು ಹೇಳಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನ.ಪಂ. ಸದಸ್ಯ ಕೆ.ಎಂ.ಮುಸ್ತಫ, ದಿನೇಶ್ ಅಂಬೆಕಲ್ಲು, ಕಂದಡ್ಕ ವಾರ್ಡ್ ಚುನಾವಣಾ ಅಭ್ಯರ್ಥಿ ಶಿವಕುಮಾರ್, ಕೃಷ್ಣ ಸ್ವಾಮಿ ಮೊದಲಾದವರಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ತ್ಯಜಿಸಿ ವಿಜಯಕುಮಾರ್ ಕಂದಡ್ಕ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News