ಮಂಗಳೂರು : ನೂತನವಾಗಿ ಮೇಯರ್ ಆಗಿ ಆಯ್ಕೆಯಾದ ಹರಿನಾಥ್ ಅವರಿಗೆ ಸನ್ಮಾನ ಕಾರ್ಯಕ್ರಮ

Update: 2016-04-10 11:45 GMT

ಮಂಗಳೂರು, ಎ.10: ನೂತನವಾಗಿ ಮೇಯರ್ ಆಗಿ ಆಯ್ಕೆಯಾದ ಹರಿನಾಥ್ ಅವರನ್ನು ಇಂದು ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಮೊಹಮ್ಮದ್ ಮಸೂದ್ ಅವರು ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಆಸ್ಕರ್ ಫೆರ್ನಾಂಡಿಸ್ ಅವರುಗಳು ಕಾರ್ಯಕರ್ತರಿಗಾಗಿ ಮಾಡಿದ ಸೇವಾ ಕಾರ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಹಾಗೂ ಪಕ್ಷದ ಏಳಿಗೆಗೆ ದುಡಿದ ನಾಯಕರಿಗೆ ಕೊಡುವ ಗೌರವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಹೊಸ ಕಾರ್ಯಕರ್ತರನ್ನು ಹಿರಿಯ ನಾಯಕರುಗಳು ಗೌರವದಿಂದ ನೋಡುವುದು ಕಡಿಮೆಯಾಗುತ್ತಿದೆ ಎಂದು ಹೇಳಿದರು.

  ಜರ್ನಾರ್ದನ ಪೂಜಾರಿ ಅವರು ಅಧಿಕಾರದಲ್ಲಿರುವಾಗ ಹಲವಾರು ಯೋಜನೆಗಳ ಮೂಲಕ ಪಕ್ಷದ ಏಳಿಗೆಗೆ ಶ್ರಮಿಸಿದ್ದರು. ಅವರು ಬಡವರಿಗೆ ಹಾಗೂ ಅಶಕ್ತರಿಗೆ ಮಾಡಿದ ಸಹಾಯಹಸ್ತದಿಂದ ಕಾಂಗ್ರೆಸ್ ಬಲಿಷ್ಠಗೊಂಡಿತು ಎನ್ನುವುದರಲ್ಲಿ ಸಂದೇಹವಿಲ್ಲ. ಇದೀಗ ಅವರಿಗೆ ಕೊಡುವ ಗೌರವ ಕಡಿಮೆಯಾಗುತ್ತಿ ದ್ದು ಈ ರೀತಿ ಮಾಡುವುದು ತರವಲ್ಲ ಎಂದು ಅವರು ಹೇಳಿದರು.

  ರಾಜ್ಯದಲ್ಲಿ ಸರಕಾರ ಮೂರು ಗುಂಪುಗಳಾಗಿ ವಿಭಜನೆಯಾಗಿದೆ. ಇದರಿಂದಾಗಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಮೇಯರ್ ಅವರು ಗುಂಪುಗಾರಿಕೆಗೆ ಅವಕಾಶ ನೀಡಬಾರದು. ಮೇಯರ್ ಅವರ ಆಯ್ಕೆಗೆ ಕಾಂಗ್ರೆಸ್‌ನ ಒಂದು ಬಣ ಬೆಂಬಲ ನೀಡಿರಬಹುದು. ಆದರೆ ಅವರ ಆಯ್ಕೆ ನಂತರ ನಗರದ ಎಲ್ಲ ಜನರಿಗೂ ಮೇಯರ್‌ಆಗಿ ಅಧಿಕಾರ ನಡೆಸಬೇಕು. ಪಾಲಿಕೆಯಲ್ಲಿ ಅಧಿಕಾರಿಗಳ ಅಧಿಕಾರ ನಡೆಯುತ್ತಿದೆ. ಪಾಲಿಕೆಯ ಎಂಜಿನಿಯರ್‌ಗಳು ಗುತ್ತಿಗೆದಾರರು ಆಳ್ವಿಕೆಯಲ್ಲಿ ಕೂಡಾ ಪ್ರಭಾವ ಬೀರಬಹುದು. ಆದರೆ ಮೇಯರ್, ಕಾಂಗ್ರೆಸ್ ಪಕ್ಷದವರು, ಕಾರ್ಯಕರ್ತರು ಜನರೊಂದಿಗೆ ಸೇರಿಕೊಂಡು ಜನರಿಗಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಅಧಿಕಾರಿಗಳಿಂದ ಸರ್ಮಪಕವಾಗಿ ಕೆಲಸ ಮಾಡಿಸುವುದು ಪಕ್ಷದ ನಾಯಕರ ಜವಾಬ್ದಾರಿ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಪಕ್ಷದವರು ಮುಜುಗುರ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ಕೆಲಸ ಮಾಡಿಸಿ ಜನರಿಗೆ ಸೇವೆ ಒದಗಿಸುವಲ್ಲಿ ಪಕ್ಷದ ಸಮಸ್ತರ ಜವಬ್ದಾರಿ ಇದೆ ಎಂದು ಅಭಿಪ್ರಾಯಪಟ್ಟರು.

ಹೈಕಮಾಂಡ್ ಅವರು ಮುಖ್ಯ ಸ್ಥಾನಗಳಿಗೆ ಯಾರನ್ನು ಆಯ್ಕೆ ಮಾಡುತ್ತಾರೋ ಅವರನ್ನು ಗೌರವಿಸುವುದು ಎಲ್ಲರ ಅಗತ್ಯವಾಗಿದೆ. ಹಾಗೆಯೇ ಮುಖ್ಯ ಸ್ಥಾನದಲ್ಲಿರುವವರು ಕಾರ್ಯಕರ್ತರನ್ನು ಗೌರವಿಸುವುದು ಕೂಡಾ ಅಷ್ಟೇ ಅನಿವಾರ್ಯವಾಗಿದೆ. ಅಧಿಕಾರವೇ ಎಲ್ಲ ಅಲ್ಲ. ಅದಕ್ಕಿಂತ ಮಾನವೀಯತೆ ದೊಡ್ಡದು ಎಂದರು.

   ಮನಪಾ ಸದಸ್ಯ ಅಬ್ದುಲ್ ರ್ರವೂಫ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಕೊರತೆ ಇದ್ದು ನಮ್ಮಲ್ಲೇ ಭಿನ್ನಾಭಿಪ್ರಾಯ ಜಾಸ್ತಿ ಇದೆ. ಸಂಘಟನೆಯಲ್ಲಿ ಕಾರ್ಯಕರ್ತರ ಪಾಲು ಮಹತ್ವರವಾಗಿದೆ. ಆದರೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಾರ್ಯಕರ್ತರನ್ನು ಮರೆಯದೇ ಓಲೈಸುವ ಕೆಲಸವಾಗಬೇಕು. ತದನಂತರ ಪಕ್ಷವನ್ನು ಸಂಘಟಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಯರ್ ಹರಿನಾಥ್, ಪಕ್ಷವು ನನಗೆ ಎಲ್ಲವನ್ನು ಕೊಟ್ಟಿದೆ. ಕಾರ್ಯಕರ್ತರ ದುಡಿಮೆಯಿಂದ ಇಷ್ಟರ ಮಟ್ಟಿಗೆ ಬೆಳೆದುಕೊಂಡಿದ್ದೇನೆ. ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಟಿ.ಕೆ. ಸುಧೀರ್, ರಮಾನಂದ ಪೂಜಾರಿ,ಲಲಿತಾ ಡಿ ರಾವ್,ಸದಾಶಿವ ಅಮೀನ್. ಕರುಣಾಕರ್ ಶೆಟ್ಟಿ, ಅಬೂಬಕ್ಕರ್, ಕಾರ್ಪೋರೇಟರ್ ವಿನಯ್‌ರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News