ಹೈನುಗಾರರು ಸರಕಾರಿ ಯೋಜನೆಗಳನ್ನು ಸದುಯೋಗಪಡಿಸಿಕೊಳ್ಳಿ: ಸಚಿವ ಬಿ.ರಮಾನಾಥ ರೈ

Update: 2016-04-10 18:30 GMT

ಬಂಟ್ವಾಳ, ಎ.10: ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹೈನುಗಾರರು ಪಶುಸಂಗೋಪನಾ ಇಲಾಖೆಯ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಪಶುಸಂಗೋಪನಾ ಇಲಾಖೆ, ದ.ಕ.ಜಿಪಂ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಗೋಳ್ತಮಜಲು ಗ್ರಾಮದ ಪ್ರಗತಿಪರ ಕೃಷಿಕ ಮುಹಮ್ಮದ್ ಮುಸ್ತಫಾರ ಮನೆಯಲ್ಲಿ ನಡೆದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಭಾ ಕಾರ್ಯಕ್ರಮವನ್ನು ತಾಪಂ ಸದಸ್ಯ ಮಹಾಬಲ ಆಳ್ವ ಉದ್ಘಾಟಿಸಿದರು. ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲುಬಾಯಿ ರೋಗವನ್ನು ನಿಯಂತ್ರಿಸುವ ಸಲುವಾಗಿ ಲಸಿಕಾ ಕಾರ್ಯಕ್ರಮವನ್ನು ದೇಶವ್ಯಾಪಿ ಏಕಕಾಲದಲ್ಲಿ ನಡೆಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಈಗಾಗಲೇ 35 ತಂಡಗಳನ್ನು ರಚಿಸಲಾಗಿದ್ದು, ಮನೆಮನೆಗೆ ತೆರಳಿ ರಾಸುಗಳಿಗೆ ಲಸಿಕೆ ನೀಡಲಾಗುತ್ತದೆ ಎಂದರು. ವೇದಿಕೆಯಲ್ಲಿ ಹಾಜಿ.ಜಿ.ಅಬ್ದುಲ್ ಖಾದರ್, ಗೋಳ್ತಮಜಲು ಗ್ರಾಪಂ ಮಾಜಿ ಅಧ್ಯಕ್ಷ ಮೋನಪ್ಪದೇವಸ್ಯ, ಉದ್ಯಮಿ ಹನೀಫ್ ಹಾಜಿ, ವೀರಕಂಬ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದಿಲೀಪ್ ಮಾರ್ತಾ, ಕನ್ಯಾನ ಭಾರತಿ ಸೇವಾ ಶ್ರಮದ ಕಾರ್ಯದರ್ಶಿ ಈಶ್ವರ ಭಟ್, ತಾಲೂಕು ಪಶು ವೈದ್ಯಾಧಿಕಾರಿ ಡಾ.ಹೆನ್ರಿ ಲಸ್ರಾದೋ, ಪ್ರಗತಿಪರ ಕೃಷಿಕ ಮುಹಮ್ಮದ್ ಮುಸ್ತಫಾ ಗೋಳ್ತಮಜಲು, ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಉಪಸ್ಥಿತರಿದ್ದರು.

ಇದೇ ವೇಳೆ ಗೋಶಾಲೆಗಳ ನಿರ್ವಹಣೆಗೆ ಪಶುಸಂಗೋಪನಾ ಇಲಾಖೆ ವತಿಯಿಂದ ನೀಡಲಾಗುವ ಪ್ರೋತ್ಸಾಹಧನದ ಚೆಕ್‌ಗಳನ್ನು ತಾಪಂ ಸದಸ್ಯ ಮಹಾಬಲ ಆಳ್ವ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News