ಕಡಬ: ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಅರಣ್ಯ ನಾಶ

Update: 2016-04-10 18:32 GMT

ಕಡಬ, ಎ.10. ಸುಬ್ರಹ್ಮಣ್ಯ ಅರಣ್ಯ ವಲಯದ ಸುಂಕದಕಟ್ಟೆ ಎಂಬಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಬೆಲೆಬಾಳುವ ಮರಮಟ್ಟು ಸಹಿತ ಅಪಾರ ಜೀವಸಂಕುಲಗಳು ಸುಟ್ಟು ನಾಶವಾದ ಘಟನೆ ರವಿವಾರ ಸಂಭವಿಸಿದೆ. ಸುಬ್ರಹ್ಮಣ್ಯ ವಲಯದ ಕೊಂಬಾರು, ಬಾರ್ಯ, ಕೊಣಾಜೆ, ಆಜನ, ಸುಂಕದಕಟ್ಟೆ ಮೊದಲಾದ ಕಡೆಗಳಿಂದ ವ್ಯಾಪಿಸಿದ ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ಅರಣ್ಯ ಪ್ರದೇಶವು ನಾಶವಾಗಿದೆ. ಸ್ಥಳೀಯರ ಪ್ರಕಾರ ನಾಲ್ಕು ದಿನಗಳ ಹಿಂದೆ ಕೊಂಬಾರು ಪ್ರದೇಶದ ಬಾರ್ಯ ಎಂಬಲ್ಲಿ ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಪೂರ್ಣವಾಗಿ ನಂದಿಸದೇ ಇದ್ದುದರಿಂದಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ. ಕೊಣಾಜೆ ಮೀಸಲು ಅರಣ್ಯ, ಕೊಂಬಾರು ಮೀಸಲು ಅರಣ್ಯ ಹಾಗೂ ಮೂಜೂರು ಮೀಸಲು ಅರಣ್ಯ ಪ್ರದೇಶದ ಅಂದಾಜು 10 ಕಿ.ಮೀ. ವ್ಯಾಪ್ತಿಯ ಸುಮಾರು 500 ಎಕರೆಗಳಿಗಿಂತಲೂ ಹೆಚ್ಚಿನ ಅರಣ್ಯ ಪ್ರದೇಶವು ಬೆಂಕಿಗಾಹುತಿಯಾಗಿದೆ. ಅಧಿಕಾರಿಗಳು ಆರಂಭದಲ್ಲೇ ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸುತ್ತಿರಲಿಲ್ಲ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಸುಬ್ರಹ್ಮಣ್ಯ ವಲಯ ರಬ್ಬರ್ ನಿಗಮದ ಸುಮಾರು 500 ರಬ್ಬರ್ ಮರಗಳು ಬೆಂಕಿಗಾಹುತಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಬ್ಬರ್ ನಿಗಮದ ಕಾರ್ಮಿಕರು ಬೆಂಕಿಯು ಉಳಿದೆಡೆ ವ್ಯಾಪಿಸದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ.

ಬೆಂಕಿ ನಂದಿಸುವ ಕಾರ್ಯ ರಾತ್ರಿಯವರೆಗೂ ಮುಂದುವರಿದಿದ್ದು, ಸ್ಥಳದಲ್ಲಿ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ. ಹನುಮಂತಪ್ಪ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ, ಸುಬ್ರಹ್ಮಣ್ಯ ವಲಯದ ಅರಣ್ಯಾಧಿಕಾರಿ ಎನ್. ಮಂಜುನಾಥ್, ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿ ತಂಡ ರಚಿಸಿಕೊಂಡು ಬೆಂಕಿ ವ್ಯಾಪಿಸದಂತೆ ತಡೆಯೊಡ್ಡುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಈಗಿರುವ ಸಲಕರಣೆಯೊಂದಿಗೆ ಇನ್ನೂ ಹೆಚ್ಚಿನ ಆಧುನಿಕ ಸಲಕರಣೆಗಳನ್ನು ಅರಣ್ಯ ಇಲಾಖೆಯು ಶೇಖರಿಸಿದ್ದರೆ ಬೆಂಕಿಯ ಜ್ವಾಲೆಗಳನ್ನು ಪ್ರಥಮ ಹಂತದಲ್ಲೇ ನಂದಿಸಬಹುದಿತ್ತು. ಒಟ್ಟಿನಲ್ಲಿ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಅರಣ್ಯ ಸಂಪತ್ತು ನಾಶವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಮೂಜೂರು ವ್ಯಾಪ್ತಿಯ ಸುಂಕದಕಟ್ಟೆ ಎಂಬಲ್ಲಿ ಅಂದಾಜು 25 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿರಬಹುದು. ಬೆಂಕಿಯನ್ನು ನಂದಿಸಿದ ಮೇಲೆ ಸಮೀಕ್ಷೆಯ ಮೂಲಕ ಸರಿಯಾದ ಮಾಹಿತಿಯನ್ನಾಧರಿಸಿ ವರದಿ ಸಲ್ಲಿಸಲಾಗುವುದು. ಮಂಜುನಾಥ್ ಎನ್., ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ.

ಊರಿನವರ ಅಸಹಕಾರ: ಬೆಂಕಿಯು ಅರಣ್ಯ ಪ್ರದೇಶದಲ್ಲೆಡೆ ವ್ಯಾಸಿದ್ದರೂ ಕೆಲವು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಊರವರ್ಯಾರೂ ಆ ಕಡೆಗೆ ಗಮನಹರಿಸದೆ ತಮ್ಮ ಪಾಡಿಗೆ ತಾವು ಎಂಬಂತೆ ವರ್ತಿಸುತ್ತಿದ್ದರು. ಬೆಂಕಿ ನಂದಿಸುವಲ್ಲಿ ಊರವರು ಅರಣ್ಯ ಇಲಾ ಖೆಯೊಂದಿಗೆ ಸಹಕರಿಸುತ್ತಿದ್ದರೆ ಸಂಜೆ ವೇಳೆಗಾಗಲೇ ಬೆಂಕಿಯನ್ನು ಹತೋಟಿಗೆ ತರಬಹುದಿತ್ತು. ಅರಣ್ಯ ಇಲಾಖೆಯ ಮೂಲಕ ಕಾಡ್ಗಿಚ್ಚಿನ ಬಗ್ಗೆ ಜನಜಾಗೃತಿ ಮೂಡಿಸಿದರೆ ಇನ್ನು ಮುಂದಾದರೂ ಸಾರ್ವಜನಿಕರು ಸಹ ಕರಿಸಬಹುದು ಎನ್ನುತ್ತಾರೆ ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಯೋರ್ವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News