ಆತೂರು : ಎಸ್‌ಕೆಎಸ್‌ಎಸ್‌ಎಫ್, ಎಸ್‌ವೈಎಸ್ ವತಿಯಿಂದ ಸಾಮೂಹಿಕ ವಿವಾಹ

Update: 2016-04-11 13:08 GMT

 ಕಡಬ, ಎ.11. ನಾವುಗಳು ನಮ್ಮ ಮಕ್ಕಳ ಮದುವೆಯನ್ನು ಇಸ್ಲಾಮೀಕರಣ ಮಾಡಿದಾಗ ಮಾತ್ರ ಮುಸ್ಲಿಂ ಸಮುದಾಯದಲ್ಲಿ ಕಾಡುತ್ತಿರುವ ವರದಕ್ಷಿಣೆ ಪಿಡುಗು ದೂರ ಮಾಡಲು ಸಾಧ್ಯ ಇದೆ ಎಂದು ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಹೇಳಿದರು.

   ಅವರು ಭಾನುವಾರ ಆತೂರು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ಎಸ್‌ಕೆಎಸ್‌ಎಸ್‌ಎಫ್, ಎಸ್‌ವೈಎಸ್ ವತಿಯಿಂದ ಹಮ್ಮಿಕೊಳ್ಳಲಾದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು. ಇಸ್ಲಾಂ ತಿಳಿಸಿರುವ ಪ್ರಕಾರ ವಧುದಕ್ಷಿಣೆ ನೀಡಿ ಅತ್ಯಂತ ಸರಳವಾಗಿ ಮದುವೆ ಆಗುವಂತದ್ದು, ಆದರೆ ಇದು ಆಚರಣೆಯಲ್ಲಿ ಇಲ್ಲ, ಬದಲಾಗಿ ವರದಕ್ಷಿಣೆಯು ತಾಂಡವಾಡುತ್ತಿದೆ. ಹೀಗಾಗಿ ಅದೆಷ್ಟೋ ಬಡ ಹೆಣ್ಣು ಮಕ್ಕಳು ಮದುವೆ ಪ್ರಾಯ ದಾಟಿ ಮನೆಯಲ್ಲಿ ಉಳಿಯುವಂತಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಪ್ರತಿಯೋರ್ವರೂ ಇಸ್ಲಾಮೀಕರಣದ ಮದುವೆಗೆ ಒತ್ತು ಕೊಡಬೇಕು ಎಂದ ಅವರು ನಮ್ಮ ಯುವ ಸಮೂಹ ಸರಳ ಮತ್ತು ಸಾಮೂಹಿಕ ವಿವಾಹಗಳಿಗೆ ಆಕರ್ಷಿತರಾಗಬೇಕು ಎಂದರು.  ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮುದಾಯದಲ್ಲಿರುವ ಬಡ ಹೆಣ್ಣು ಮಕ್ಕಳ ವಿವಾಹ ನೆರವೇರಿಸುವಂತದ್ದು ಅತ್ಯಂತ ಪುಣ್ಯದ ಕಾರ್ಯ, ಅದು ದೇವರು ಮೆಚ್ಚುವ ಸೇವೆ ಎಂದ ಅವರು ಇದೇ ರೀತಿಯ ಸಹಕಾರ ದೊರಕಿದಲ್ಲಿ ಇದೇ ಸಂಘಟನೆ ವತಿಯಿಂದ ಮುಂದಿನ ವರ್ಷ ಕನಿಷ್ಠ 10 ಜೋಡಿ ಮದುವೆ ಕಾರ್ಯಕ್ರಮ ನಡೆಸುವ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.  ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಫೈಝಿ ಮಾತನಾಡಿದರು. ಎಸ್‌ಕೆಎಸ್‌ಎಸ್‌ಎಫ್, ಎಸ್‌ವೈಎಸ್ ಆತೂರು ಶಾಖೆ ಇದರ ಗೌರವಾಧ್ಯಕ್ಷ ಡಾ ಕೆ.ಎಂ. ಶಾಹ್ ಮುಸ್ಲಿಯಾರ್ ನಿಖಾಹ ನಡೆಸಿಕೊಟ್ಟರು. ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನೀಫ್ ಫೈಝಿ, ಅಧ್ಯಕ್ಷ ಅಯ್ಯೂಬ್ ಹಾಜಿ, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹೆಚ್. ಆದಂ, ಮಾಜಿ ಅಧ್ಯಕ್ಷರಾದ ಬಿ.ಕೆ. ಮಹಮ್ಮದ್ ಹಾಜಿ ಕುಂಡಾಜೆ, ಪಿ. ಆದಂ, ಎನ್. ಎ. ಇಸಾಕ್, ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೇಜಾಲ್, ಎಸ್‌ಕೆಎಸ್‌ಎಸ್‌ಎಫ್. ಉಪ್ಪಿನಂಗಡಿ ವಲಯ ಅಧ್ಯಕ್ಷ ಅಶ್ರಫ್ ಕೊಳ್ಳೇಜಾಲ್, ಕಡಬ ವಲಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಆತೂರು ಎಸ್‌ವೈಎಸ್ ಕಾರ್ಯದರ್ಶಿ ಆದಂ ಹೇಂತಾರ್, ಕೊಲ ಸೌಹಾರ್ದ ವೇದಿಕೆ ಮಾಜಿ ಅಧ್ಯಕ್ಷ ನಝೀರ್ ಕೊಲ, ಕೋಲ್ಪೆ ಮಸೀದಿ ಅಧ್ಯಕ್ಷ ಕೆ.ಕೆ. ಮಹಮ್ಮದ್, ನೀರಾಜೆ ಮದ್ರಸ ಸಮಿತಿ ಅಧ್ಯಕ್ಷ ಪೊಡಿಕುಂಞ್ ನೀರಾಜೆ, ಕುದ್ಲೂರು ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮರ್ವೇಲು, ಝಕರಿಯಾ ಮುಸ್ಲಿಯಾರ್ ಕುಂಡಾಜೆ ಉಪಸ್ಥಿತರಿದ್ದರು.

  ಎಸ್‌ಕೆಎಸ್‌ಎಸ್‌ಎಫ್ ಆತೂರು ಶಾಖೆ ಅಧ್ಯಕ್ಷ ಅಬ್ದುಲ್ ಹಮೀದ್ ದಾರಿಮಿ ಸ್ವಾಗತಿಸಿ, ಕಾರ್ಯದರ್ಶಿ ಎಸ್.ಕೆ. ಸಿದ್ದಿಕ್ ವಂದಿಸಿದರು. ಹಾಜಿ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News