ಪುತ್ತೂರು : ಕೋರ್ಟುರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಆಗ್ರಹ: ಕನ್ನಡ ಸೇನೆಯ ಮುಖಂಡರಿಂದ ಅಧಿಕಾರಿಗಳಿಗೆ ಮನವಿ

Update: 2016-04-11 14:08 GMT
 ಕನ್ನಡ ಸೇನೆ ಸಂಘಟನೆಯ ಪದಾಧಿಕಾರಿಗಳು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡುತ್ತಿರುವುದು.

 ಪುತ್ತೂರು : ಪುತ್ತೂರಿನ ಬಸ್ ನಿಲ್ದಾಣದಿಂದ ಮಿನಿ ವಿಧಾನಸೌಧಕ್ಕೆ ಸಂಪರ್ಕ ಕಲ್ಪಿಸುವ ಕೋರ್ಟು ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಕನ್ನಡ ಸೇನೆ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಎ, ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಅಡೂರು, ಪ್ರಧಾನ ಕಾರ್ಯದರ್ಶಿ ಕೆ.ಪಿ.ಇಬ್ರಾಹಿಂ, ಉಪಾಧ್ಯಕ್ಷ ಉಸ್ಮಾನ್ ಕೂರ್ನಡ್ಕ, ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಿ.ಎಲ್, ಸಂಘಟನೆಯ ಪ್ರಮುಖರಾದ ಪಿ.ಧರ್ಣಪ್ಪ ಗೌಡ, ಬಪ್ಪಳಿಗೆ ರಫೀಕ್, ಸುಂದರ, ರಫೀಕ್ ಕುಂಜೂರುಪಂಜ ಅವರು ನಿಯೋಗದಲ್ಲಿ ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆವಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಪುತ್ತೂರಿನಲ್ಲಿ ಮಿನಿವಿಧಾನಸೌಧ ತೆರೆಯಲಾಗಿದ್ದು, ಒಂದೇ ಕಟ್ಟಡದಲ್ಲಿ ಹೆಚ್ಚಿನ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಜನತೆಗೆ ಬಹಳಷ್ಟು ಅನುಕೂಲವಾಗಿದೆ. ಆದರೆ ಪುತ್ತೂರಿನ ಬಸ್ ನಿಲ್ದಾಣದಿಂದ ಮಿನಿವಿಧಾನ ಸೌಧಕ್ಕೆ ಸಂಪರ್ಕ ಕಲ್ಪಿಸುವ ಕೋರ್ಟು ರಸ್ತೆಯು ಅಗಲೀಕರಣಗೊಳ್ಳದೆ ಮೊದಲಿನ ಸ್ಥಿತಿಯಲ್ಲೇ ಇದೆ. ವಾಹನಗಳನ್ನು ರಸ್ತೆ ಬದಿಯಲ್ಲಿಯೇ ಎಲ್ಲೆಂದರಲ್ಲಿ ನಿಲುಗಡೆ ಮಾಡುವುದರಿಂದ ಮತ್ತು ರಸ್ತೆಯ ಇಕ್ಕಡೆಗಳಲ್ಲಿ ಸಣ್ಣ ವ್ಯಾಪಾರಸ್ಥರು ವ್ಯವಹಾರ ನಡೆಸುತ್ತಿರುವ ಕಾರಣದಿಂದಾಗಿ ವಾಹನ ಸಂಚಾರ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೋರ್ಟು ರಸ್ತೆಯನ್ನು ಚತುಷ್ಪಥ ರಸ್ತೆಂನ್ನಾಗಿಸುವ ಕುರಿತು ಈ ಹಿಂದೆ ತೀರ್ಮಾನಿಸಲಾಗಿದ್ದರೂ ಆ ಪ್ರಕ್ರಿಯೆಯು ನಡೆಯದೇ ಇರುವ ಕಾರಣ ಜನತೆಗೆ ತೊದರೆಯಾಗಿದೆ. ಸದ್ರಿ ರಸ್ತೆಯನ್ನು ಅಗಲೀಕರಣ ಮಾಡಿದಲ್ಲಿ ಕೆಲವು ಜನರಿಗೆ ಮಾತ್ರ ತೊಂದರೆಯಾದರೂ ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ಮನವಿಯಲ್ಲಿ ತಿಳಿಸಿರುವ ಅವರು ಈ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News