ಪುತ್ತೂರು: ಹೊಡೆದಾಟ ಓರ್ವನ ಕೊಲೆಯಲ್ಲಿ ಅಂತ್ಯ

Update: 2016-04-13 07:03 GMT

ಪುತ್ತೂರು, ಎ.13: ಪೂರ್ವದ್ವೇಷದ ಹಿನ್ನೆಲೆಯಲ್ಲಿ ಹೊಡೆದಾಟ ನಡೆದು ರಬ್ಬರ್ ಟ್ಯಾಪ್ ಮಾಡುವ ಕತ್ತಿಯಿಂದ ಕಡಿದ ಪರಿಣಾಮವಾಗಿ ಓರ್ವ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರು ತಮಿಳು ಕಾಲನಿಯಲ್ಲಿ ನಡೆದಿದೆ.

ಪಾಂಬಾರು ಕಾಲನಿ ನಿವಾಸಿ ವೈತ್‌ಲಿಂಗಂ ಎಂಬವರ ಪುತ್ರ ಕೆಎಸ್‌ಡಿಸಿಯ ರಬ್ಬರ್ ಟ್ಯಾಪರ್ ಆಗಿರುವ ಸೆಲ್ವಕುಮಾರ್(48) ಕೊಲೆಯಾದವರು. ಸ್ಥಳೀಯ ನಿವಾಸಿ ರಾಧಾಕೃಷ್ಣನ್ ಎಂಬವರ ಪುತ್ರ ಕೂಲಿ ಕಾರ್ಮಿಕ ಜಗನ್(23) ಮತ್ತು ಸೆಲ್ವ ಕುಮಾರ್ ನಡುವೆ ಮಂಗಳವಾರ ರಾತ್ರಿ ಹೊಡೆದಾಟ ನಡೆದಿತ್ತು ಎನ್ನಲಾಗಿದೆ. ಈ ಸಂದರ್ಭ ಜಗನ್, ರಾಧಾ ಮತ್ತು ವಿಜಯ್ ಎಂಬವರು ಸೇರಿಕೊಂಡು ರಬ್ಬರ್ ಟ್ಯಾಪಿಂಗ್ ನಡೆಸುವ ಕತ್ತಿಯಿಂದ ಸೆಲ್ವಕುಮಾರ್‌ರ ತಲೆ ಹಾಗೂ ಇತರ ಭಾಗಗಳಿಗೆ ಇರಿದಿದ್ದರು. ಇರಿತದಿಂದ ಗಂಭೀರ ಗಾಯಗೊಂಡಿದ್ದ ಸೆಲ್ವಕುಮಾರ್‌ರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯರಾತ್ರಿ ವೇಳೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲೆಂದು 108 ರಕ್ಷಾ ಕವಚದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಅವರು ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸೆಲ್ವಕುಮಾರ್ ಅವರ ತಲೆ, ಬಲಗೈಗೆ ಗಂಭೀರ ಗಾಯಗಳಾಗಿದ್ದವು. ಹೊಡೆದಾಟದ ಸಂದರ್ಭದಲ್ಲಿ ಗಗನ್ ಎಂಬಾತನಿಗೂ ಗಾಯಗಳಾಗಿದ್ದು ಆತನನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆಲ್ವಕುಮಾರ್‌ರ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗದ ಎಎಸ್ಪಿ ರಿಷ್ಯಂತ್, ಸಂಪ್ಯ ಎಸ್ಸೈ ರವಿ, ಎಎಸ್ಸೈ ಚೆಲುವಯ್ಯ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News