ಕರಾವಳಿ ಹೈನುಗಾರಿಕೆಯಲ್ಲಿ ಕ್ರಾಂತಿಕಾರಕ ಬೆಳವಣಿಗೆ: ರವಿರಾಜ ಹೆಗ್ಡೆ

Update: 2016-04-13 08:02 GMT

ಪುತ್ತೂರು, ಎ.13: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 1980ರ ದಶಕದಲ್ಲಿ ನಾಲ್ಕು ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದರೆ, ಪ್ರಸ್ತುತ ಮೂರು ಲಕ್ಷದ ಎಪ್ಪತ್ತು ಸಾವಿರ ಲೀಟರ್‌ನಷ್ಟು ಹಾಲು ದೊರೆಯುತ್ತಿದೆ. ಅಲ್ಲದೆ ಸುಮಾರು ಅರವತ್ತು ಸಾವಿರ ಮಂದಿ ಹಾಲನ್ನು ದಿನಂಪ್ರತಿ ಮಾರಾಟ ಮಾಡುತ್ತಿದ್ದಾರೆ. ಇದು ಹಾಲು ಉತ್ಪಾದನೆಯ ಕ್ಷೇತ್ರದಲ್ಲಾದ ಕ್ರಾಂತಿಕಾರಕ ಬೆಳವಣಿಗೆಯನ್ನು ಎತ್ತಿ ತೋರಿಸುತ್ತಿದೆ. ಹೈನುಗಾರಿಕೆ ಎನ್ನುವುದು ಇಂದು ಹಳ್ಳಿ ಹಳ್ಳಿಗಳಲ್ಲಿ ಸದೃಢ ಆದಾಯದ ಮೂಲವನ್ನು ಸೃಷ್ಟಿಸಿದೆ ಎಂದು ದ.ಕ. ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದ್ದಾರೆ.
ವಿವೇಕಾನಂದ ಕಾಲೇಜಿನಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ದ.ಕ. ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ‘ಹಾಲು ಉತ್ಪಾದನೆ- ವಿಚಾರ ಮತ್ತು ಅವಕಾಶಗಳು’ ಎಂಬ ವಿಷಯದ ಬಗೆಗೆ ಬುಧವಾರ ನಡೆದ ಒಂದು ದಿನದ ರಾಜ್ಯಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತೆಂಗಿನಕಾಯಿ, ರಬ್ಬರ್‌ನಂತಹ ಕೃಷಿ ಉತ್ಪನ್ನಗಳ ಧಾರಣೆಯಲ್ಲಿ ಆಗಿಂದಾಗ್ಗೆ ಏರಿಳಿಕೆಯಾಗಿ ರೈತರು ಆತಂಕಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಹೈನುಗಾರಿಕೆಯನ್ನು ಗಮನಿಸಿದರೆ ನೆಮ್ಮದಿಯೆನಿಸುತ್ತದೆ. ಯಾಕೆಂದರೆ ಸರಿಯಾದ ದರ ರೈತರಿಗೆ ಇಲ್ಲಿ ವ್ಯವಸ್ಥಿತ ರೀತಿಯಲ್ಲಿ ದೊರಕುತ್ತಿವೆ. ಹಾಗಾಗಿ ಮುಂದಿನ ಪೀಳಿಗೆಯೂ ಈ ಕ್ಷೇತ್ರದಲ್ಲಿ ಭರವಸೆ ತಾಳಬಹುದಾಗಿದೆ ಎಂದರು.
ಕೇವಲ ಹಾಲು ಮಾತ್ರವಲ್ಲದೆ ಗೊಬ್ಬರದಿಂದಲೂ, ಉಪ ಉತ್ಪನ್ನದಿಂದಲೂ ಸಾಕಷ್ಟು ಆದಾಯ ದೊರಕುತ್ತಿದೆ. ಆದುದರಿಂದ ಹಸುಗಳ ಸಾಕಣೆಯಿಂದ ಅನೇಕ ವಿಧದಿಂದ ಲಾಭ ಆಗುವುದಕ್ಕೆ ಸಾಧ್ಯ. ಅದರಲ್ಲೂ ಅತ್ಯಂತ ವೈಜ್ಞಾನಿಕವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದಲ್ಲಿ ಅತ್ಯುತ್ತಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯ ಎಂದು ನುಡಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ, ಪದವಿ ನಂತರ ವಿದ್ಯಾರ್ಥಿಗಳು ಮುಂದೇನು ಅನ್ನುವ ಪ್ರಶ್ನೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಹೈನುಗಾರಿಕೆಯೂ ಅತ್ಯುತ್ತಮ ಬದುಕನ್ನು ಒದಗಿಸಿಕೊಡಬಲ್ಲುದು ಎಂಬ ದೃಷ್ಟಿಕೋನವನ್ನು ನೀಡುವುದು ಅಗತ್ಯ. ಹಳ್ಳಿಯಲ್ಲಿದ್ದೇ ಹಸನಾದ ಬದುಕನ್ನು ಸಾಗಿಸುವುದಕ್ಕೆ ಹೈನುಗಾರಿಕೆ ಅವಕಾಶ ನೀಡುತ್ತದೆ ಎಂಬ ಕಲ್ಪನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಇದರಿಂದ ಸ್ವಾವಲಂಬಿ ಬದುಕು ನಮ್ಮದಾಗುತ್ತದೆ. ಆದ್ದರಿಂದ ಹೈನುಗಾರಿಕೆಯೂ ನಮ್ಮ ಮುಂದಿರುವ ಅನೇಕ ಅವಕಾಶಗಳಲ್ಲಿ ಪ್ರಮುಖವಾದದ್ದು ಎಂದು ತಿಳಿಯಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಮಾತನಾಡಿ, ರಾಜ್ಯದಲ್ಲಿನ ಅತ್ಯುತ್ತಮ ಹಾಲು ಉತ್ಪಾದಕರುಗಳ ಸಂಘಟನೆಗಳಲ್ಲಿ ದಕ್ಷಿಣ ಕನ್ನಡದ ಒಕ್ಕೂಟಗಳೂ ಒಂದು. ಇಲ್ಲಿನ ಹೈನುಗಾರಿಕೆ ಉತ್ಕೃಷ್ಟ ರೀತಿಯಲ್ಲಿದೆ. ಅನೇಕರು ಅದೃಷ್ಟವನ್ನು ನಂಬಿ ಕೂರುತ್ತಾರೆ. ಆದರೆ ಅದೃಷ್ಟದೊಂದಿಗೆ ಪರಿಶ್ರಮವೂ ಬೇಕೆಂಬುದನ್ನು ಗಮನಿಸಬೇಕು. ಹಾಗಾದಾಗ ಹೈನುಗಾರಿಕೆಯಂತಹ ಕ್ಷೇತ್ರಗಳೂ ಅತ್ಯುತ್ತಮ ಬದುಕನ್ನು ನೀಡುತ್ತವೆ. ಹವಾ ನಿಯಂತ್ರಿತ ಕೊಠಡಿಯಲ್ಲಿನ ಕೆಲಸ ಮಾತ್ರ ಉದ್ಯೋಗವಲ್ಲ ಎಂಬುದನ್ನು ಯುವಕರು ತಿಳಿದುಕೊಳ್ಳಬೇಕು ಎಂದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ, ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಪ್ರಸ್ತಾವಿಸಿ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವಾಸುದೇವ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News