ಕರಾವಳಿಯಲ್ಲಿ ವಿಷು ಸಂಭ್ರಮ

Update: 2016-04-14 05:16 GMT

ಕಾಸರಗೋಡು, ಎ. 14: ಕಾಸರಗೋಡು ಸೇರಿದಂತೆ ಕರಾವಳಿಯಲ್ಲಿ ಇಂದು ವಿಷು ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಕೃಷಿಕರಿಗೆ ಸಂಬಂಧಿಸಿದ ಹಬ್ಬವಾದ ವಿಷು ಹೊಸ ಸಂವತ್ಸರವನ್ನು ಬರಮಾಡಿಕೊಳ್ಳುವ ಹಬ್ಬ. ಈ ಬಾರಿ ಉರಿ ಬಿಸಿಲು, ದಾಖಲೆಯ ಉಷ್ಣಾಂಶ, ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆಯಿಂದ ವಿಷು ಹಬ್ಬದ ಉತ್ಸಾಹವನ್ನು ಕುಗ್ಗಿಸಿದೆ. ವಿಷು ಹಬ್ಬದ ಸಂಕೇತವಾಗಿ ಕೊನ್ನೆ ಹೂಗಳು ಅರಳಿದ್ದು, ಗಮನ ಸೆಳೆಯುತ್ತಿದೆ.
       ಈ ಹಬ್ಬದಲ್ಲಿ ವಿಷು ಕಣಿ ಪ್ರಮುಖವಾದುದು. ಸೂರ್ಯೋದಯಕ್ಕೆ ಮೊದಲು ಮಕ್ಕಳನ್ನು ಎಬ್ಬಿಸಿ ಬಿಸಿ ನೇರ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಹಿರಿಯರು ಮಕ್ಕಳ ಕಣ್ಣನ್ನು ಕೈಯಿಂದ ಮುಚ್ಚಿ ದೇವರ ಕೊಠಡಿಗೆ ಕರೆದುಕೊಂಡು ಹೋಗಿ ತೋರಿಸವುದೇ ವಿಷು ಕಣಿ.
        ಈ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಕುಂಬಳೆ ಸೀಮೆಯ ಪ್ರಮುಖ ದೇಗುಲವಾದ ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನ, ಕುಂಬಳೆ ಶ್ರೀ ಕಣಿಪುರ ಗೋಪಾಲಕೃಷ್ಣ ದೇವಸ್ಥಾನ, ಮುಜುಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನ, ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೊದಲಾದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಪ್ರಮುಖರ ಮನೆಗಳಿಗೆ ತೆರಳಿ ಕಣಿ ದರ್ಶನ ಮಾಡುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ. ಕೃಷಿ ಕೆಲಸಗಳಿಗೆ ಇದೇ ದಿನ ಚಾಲನೆ ನೀಡಲಾಗುತ್ತಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮುಂಜಾನೆ 5 ಗಂಟೆಗೆ ದೀಪೋತ್ಸವದ ಬಳಿಕ ವಿಷು ಕಣಿಯ ವಿಶೇಷ ಬಲಿ ನಡೆಯಿತು.ವಿಶೇಷ ಬಲಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು. ಬಲಿ ಉತ್ಸವದ ಬಳಿಕ ರಾಜಾಂಗಣ ಪ್ರಸಾದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News