ಉಪ್ಪಿನಂಗಡಿ: ಖಾಸಗಿ ಹಣಕಾಸು ಸಂಸ್ಥೆಯಿಂದ 27 ಸಾವಿರ ರೂಪಾಯಿ ಲಪಟಾಯಿಸಿದ ವಿದೇಶಿ ಜೋಡಿ

Update: 2016-04-14 15:31 GMT

ಉಪ್ಪಿನಂಗಡಿ: ಇಲ್ಲಿನ ಖಾಸಗಿ ಹಣಕಾಸು ಸಂಸ್ಥೆಯೊಂದಕ್ಕೆ ಬಂದ ವಿದೇಶಿ ಜೋಡಿಯೊಂದು ಅಲ್ಲಿ ತಮ್ಮ ಕೈಚಳಕ ತೋರಿಸಿ 27 ಸಾವಿರ ರೂಪಾಯಿ ಲಪಟಾಯಿಸಿದ ಘಟನೆ ಬುಧವಾರ ನಡೆದಿದ್ದು, ಸಂಸ್ಥೆಯ ಮೆನೇಜರ್ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯ ಬದಿಯಿರುವ ಖಾಸಗಿ ಹಣಕಾಸು ಸಂಸ್ಥೆಯೊಂದಕ್ಕೆ ಬುಧವಾರ ವಿದೇಶಿ ಜೋಡಿಯೊಂದು ಆಗಮಿಸಿದ್ದು, ಇಲ್ಲಿದ್ದ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ಶಶಿಕುಮಾರ್‌ನಲ್ಲಿ 500 ರೂಪಾಯಿಗೆ ಚಿಲ್ಲರೆ ಕೇಳಿದರು.

ಈತ 100ರ ಐದು ನೋಟುಗಳನ್ನು ಇವರಿಗೆ ನೀಡಿದ ಬಳಿಕ ಈತನೊಂದಿಗೆ ಆಪ್ತವಾಗಿ ಮಾತನಾಡತೊಡಗಿದರಲ್ಲದೆ, ಮಾತು ಮುಂದುವರಿಯುತ್ತಿದ್ದಂತೆಯೇ ಈ ವಿದೇಶಿಗರು ಈತನಲ್ಲಿ ನಮಗೆ 2016ರ ಇಸವಿಯ ಒಂದು ಸಾವಿರ ರೂಪಾಯಿ ನೋಟು ಬೇಕಾಗಿದೆ ಎಂದು ಕೇಳಿದರು. ಈ ಸಂದರ್ಭ ಶಶಿಕುಮಾರ್ ತನ್ನಲ್ಲಿದ್ದ ಒಂದು ಸಾವಿರದ ಮುಖ ಬೆಲೆಯ ಎಪ್ಪತ್ತು ನೋಟುಗಳ ಬಂಡಲೊಂದರಿಂದ 2016ರ ನೋಟಿಗಾಗಿ ಹುಡುಕತೊಡಗಿದ್ದರು. ಆಗ ಈ ವಿದೇಶಿ ಜೋಡಿ ಬಂಡಲನ್ನು ನಮಗೆ ನೀಡಿ ನಾವೇ ಅದರಿಂದ ಒಂದು ನೋಟನ್ನು ಹುಡುಕಿ ತೆಗೆಯುತ್ತೇವೆ ಎಂದರಂತೆ. ಆದರೆ ಆತ ಅವರಿಗೆ ನೀಡದಿದ್ದಾಗ, ವಿದೇಶಿ ಯುವಕ ತನ್ನಲ್ಲಿದ್ದ ಪರ್ಸ್ ಅನ್ನು ಆತನ ಟೇಬಲ್ ಮೇಲಿಟ್ಟು ನಿಮ್ಮ ಹಣದ ಕಟ್ಟನ್ನು ನಾನು ಎತ್ತಿಕೊಂಡು ಓಡಿಹೋಗುತ್ತೇನೆಂಬ ಭಯ ನಿಮಗೆ ಬೇಡ. ನನ್ನ ಪರ್ಸ್‌ನಲ್ಲಿ ಇದಕ್ಕಿಂತ ಜಾಸ್ತಿ ಹಣ ಇದೆ ಎಂದು, ಮತ್ತೊಮ್ಮೆ ಹಣದ ಬಂಡಲ್ ತನಗೆ ನೀಡುವಂತೆ ಕೇಳಿದ್ದರು. ಈ ಸಂದರ್ಭ ಹಣಕಾಸು ಸಂಸ್ಥೆ ವ್ಯವಸ್ಥಾಪಕ ಶಶಿಕುಮಾರ್ ಇವರ ಮೇಲಿನ ವಿಶ್ವಾಸದಿಂದ ಹಣದ ಬಂಡಲನ್ನು ಅವರಿಗೆ ನೀಡಿದ್ದ.

ವಿದೇಶಿ ವ್ಯಕ್ತಿ ಈತನೆದುರು ಒಂದು ಸಾವಿರದ ಒಂದು ನೋಟನ್ನು ತೆಗೆದುಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಆತನ ಪರ್ಸ್‌ನಲ್ಲಿದ್ದ ಒಂದು ಸಾವಿರ ರೂಪಾಯಿಯ ನೋಟೊಂದನ್ನು ನೀಡಿ ಈ ವಿದೇಶಿ ಜೋಡಿ ತೆರಳಿತ್ತು. ಅವರು ಹಿಂತಿರುಗಿದ ಬಳಿಕ 70,000 ರೂಪಾಯಿ ಬಂಡಲ್‌ನಿಂದ ಒಂದು ಸಾವಿರ ವಿದೇಶಿಗರು ತೆಗೆದಿದ್ದರಿಂದ ಅದಕ್ಕೆ ಮತ್ತೆ ಒಂದು ಸಾವಿರವನ್ನು ಭರ್ತಿಗೊಳಿಸಲು ವಿದೇಶಿಗರು ನೀಡಿದ ಒಂದು ಸಾವಿರದ ನೋಟನ್ನು ಅದರಲ್ಲಿಟ್ಟಿದ್ದರು. ಹಣ ಎಣಿಸುವ ವೇಳೆಗೆ ಶಶಿಕುಮಾರ್ ಬಂಡಲ್‌ಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ 27 ಸಾವಿರ ರೂಪಾಯಿ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಈ ಸಂದರ್ಭ ತಾನು ಮೋಸ ಹೋಗಿರುವುದು ಅರಿವಾಗಿ ಈ ವಿದೇಶಿ ಜೋಡಿಯನ್ನು ಹುಡುಕಾಡಿದಾಗ ಇವರು ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿದ್ದರು. ಹಣಕಾಸು ಸಂಸ್ಥೆಯಿಂದ ನೇರ ಅವರು ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಕಾರು ಹತ್ತಿ ಹೋಗಿದ್ದಾರೆ ಎಂಬುದು ಸ್ಥಳೀಯರಿಂದ ತಿಳಿದು ಬಂದಿತ್ತು.  ಬಳಿಕ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ, ಆ ಪ್ರದೇಶದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News